ಗೃಹ ಸಚಿವ ಆರಗ ಜ್ಞಾನೇಂದ್ರ ರಾಜೀನಾಮೆ ನೀಡಲಿ: ಬಿ.ಕೆ. ಹರಿಪ್ರಸಾದ್

Update: 2022-04-06 13:11 GMT
ಬಿ.ಕೆ. ಹರಿಪ್ರಸಾದ್

ಬೆಂಗಳೂರು, ಎ.6: ಜೆಜೆ ನಗರದಲ್ಲಿ ಚಂದ್ರು ಕೊಲೆ ಪ್ರಕರಣ ಸಂಬಂಧ ಜವಾಬ್ದಾರಿ ಸ್ಥಾನದಲ್ಲಿರುವ ಗೃಹ ಸಚಿವ ಆರಗ ಜ್ಞಾನೇಂದ್ರ ಬೇಜವಾಬ್ದಾರಿ ಹೇಳಿಕೆ ನೀಡಿದ್ದು, ಈ ಕೂಡಲೇ ರಾಜೀನಾಮೆ ನೀಡಬೇಕೆಂದು ವಿಧಾನ ಪರಿಷತ್ತಿನ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಒತ್ತಾಯ ಮಾಡಿದರು.

ಬುಧವಾರ ನಗರದಲ್ಲಿ ಈ ಕುರಿತು ಪ್ರತಿಕ್ರಿಯಿಸಿದ ಅವರು, ಬೆಂಗಳೂರಿನ ಜೆಜೆ ನಗರದಲ್ಲಿ ಪರಸ್ಪರ ಬೈಕ್ ಸವಾರರ ನಡುವೆ ವಾಗ್ವಾದ ನಡೆದು ಚಂದ್ರು ಎಂಬ ಯುವಕ ಕೊಲೆಯಾಗಿದ್ದಾನೆ. ಘಟನೆಯ ಬಗ್ಗೆ ಸತ್ಯಾಸತ್ಯತೆಯನ್ನ ಪೊಲೀಸ್ ಆಯುಕ್ತ ಕಮಲ್ ಪಂತ್ ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ತಪ್ಪಿತಸ್ಥರನ್ನ ಬಂಧಿಸಲಾಗಿದೆ ಎಂದು ಹೇಳಿಯಾಗಿದೆ. ಆದರೆ ಗೃಹ ಸಚಿವ ಆರಗ ಜ್ಞಾನೇಂದ್ರ ಬೇಜವಾಬ್ದಾರಿ ಹೇಳಿಕೆ ನೀಡಿ ಘಟನೆಗೆ ಕೋಮು ಬಣ್ಣ ಬಳಿದಿದ್ದಾರೆ, ಮುಸ್ಲಿಮರ ಮೇಲೆ ದಲಿತರನ್ನು ಎತ್ತಿಕಟ್ಟಲು ನೋಡಿದ್ದಾರೆ ಎಂದು ಟೀಕಿಸಿದರು.

ಸ್ವತಃ ಗೃಹ ಸಚಿವ ಯಾವ ಪೊಲೀಸ್ ತನಿಖೆಯೂ ನಡೆಯದೇ ಸ್ವಯಂಘೋಷಿತ ತೀರ್ಪು ನೀಡಿ ಕೋಮು ಬಣ್ಣ ಕಟ್ಟಿ ಮತೀಯ ಭಾವನೆ ಕೆರಳಿಸುವಂತೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಕೊಲೆ ಯಾರೇ ಮಾಡಿರಲಿ, ಸಮರ್ಥನೆ ಮಾಡಲು ಸಾಧ್ಯವೇ ಇಲ್ಲ. ಆದರೆ ಸಚಿವರು ಕೊಲೆಯನ್ನ ವೈಭವೀಕರಿಸಿ, ಕೊಲೆ ನಡೆಯುವಾಗ ತಾವೇ ಕಣ್ಣಾರೆ ಕಂಡಂತೆ ಹೇಳಿಕೆ ನೀಡುವುದು ಅಕ್ಷಮ್ಯ. ಸಾರ್ವಜನಿಕ ಜೀವನದಲ್ಲಿ ಇರಲು ಯೋಗ್ಯರಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ತಮ್ಮ ಹೇಳಿಕೆಯಿಂದ ಯೂಟರ್ನ್ ತೆಗೆದುಕೊಂಡು ನನಗೆ ಪೊಲೀಸ್ ಇಲಾಖೆಗಿಂತಲೂ ಮೊದಲೇ ಬಲ್ಲ ಮೂಲಗಳಿಂದ ಮಾಹಿತಿ ಬಂದಿತ್ತು. ಹಾಗಾಗಿ ಹೇಳಿಕೆ ನೀಡಿದೆ ಎಂದಿದ್ದಾರೆ. ಹಾಗಾದರೆ, ಆ ಬಲ್ಲ ಮೂಲ ಯಾವುದು ಗೃಹ ಸಚಿವರೇ? ಕೇಶವ ಕೃಪವೋ? ಹಾವಿನಪುರವೋ? ಮೊದಲು ಸ್ಪಷ್ಟಪಡಿಸಿ ಎಂದು ಸವಾಲು ಹಾಕಿದರು.

ಅಮಾಯಕ ಯುವಕರ ಹೆಣದ ಮೇಲೆ ರಾಜಕೀಯ ಮಾಡಿ ಅಧಿಕಾರ ನಡೆಸುತ್ತಿರುವುದರಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ ಎಂದ ಅವರು, ಕೊಂದವರ್ಯಾರು ಎನ್ನುವುದರ ಮೇಲೆ ಕೊಲೆಯ ಕ್ರೌರ್ಯ ನಿರ್ಣಯಿಸುತ್ತಿದ್ದೀರಿ, ಜಾತಿಯ ಆಧಾರದಲ್ಲಿ ಕೊಲೆಯನ್ನ ವೈಭವೀಕರಿಸುತ್ತಿದ್ದೀರಿ ಎಂದು ವಾಗ್ದಾಳಿ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News