×
Ad

ಗೃಹ ಸಚಿವ ಆರಗ ಜ್ಞಾನೇಂದ್ರ ಬಂಧನಕ್ಕೆ ಡಿ.ಕೆ. ಶಿವಕುಮಾರ್ ಆಗ್ರಹ

Update: 2022-04-06 19:41 IST

ಮಂಡ್ಯ: ದಲಿತ ಯುವಕ ಚಂದ್ರು ಸಾವು ಪ್ರಕರಣದ ಬಗ್ಗೆ ಸುಳ್ಳು ಹೇಳಿಕೆ ನೀಡಿ ಸಮಾಜದ ಶಾಂತಿಗೆ ಭಂಗ ಉಂಟುಮಾಡಿರುವ ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆಗ್ರಹಿಸಿದ್ದಾರೆ.

ಪ್ರಕರಣ ಸಂಬಂಧ ಬುಧವಾರ ಕೆ.ಆರ್.ಪೇಟೆಯಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ಜವಾಬ್ಧಾರಿಯುತ ಗೃಹ ಸಚಿವರಾಗಿರುವ ಆರಗ ಜ್ಞಾನೇಂದ್ರ, ಚಂದ್ರು ಸಾವಿನ ಹಿನ್ನೆಲೆ ಮುನ್ನೆಲೆ ತಿಳಿಯದೆ ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ ಹೇಳಿಕೆ ನೀಡಿದ್ದಾರೆಂದು ಕಿಡಿಕಾರಿದರು.

ಈ ರಾಜ್ಯದಲ್ಲಿ ಧರ್ಮ, ಜಾತಿಗಳ ನಡುವೆ ದ್ವೇಷ ಮೂಡಿಸಿ ಸಮಾಜದಲ್ಲಿ ಅಶಾಂತಿ ಮೂಡಿಸುವಂತಹ  ಕೃತ್ಯಗಳು ನಿರಂತರವಾಗಿ ನಡೆಯುತ್ತಿದ್ದು, ಅದೇ ರೀತಿಯಲ್ಲಿ ಗೃಹ ಸಚಿವರೂ ನಡೆದುಕೊಂಡಿದ್ದಾರೆ. ಇದನ್ನು  ಪೊಲೀಸರು ಗಂಭೀರವಾಗಿ ಪರಿಗಣಿಸಬೇಕು ಎಂದು ಅವರು ತಾಕೀತು ಮಾಡಿದರು.

ಸಮಾಜದ ಶಾಂತಿಗೆ ಭಂಗ ತರುವಂತಹ ಹಾಗೂ ಕೋಮು ದ್ವೇಷ ಬಿತ್ತುವಂತಹ ಕೃತ್ಯವನ್ನು ಯಾರೇ ಮಾಡಿದರು ತಪ್ಪು. ಸಚಿವರಾಗಲಿ, ಶಾಸಕರಾಗಿ, ಇನ್ನಾರೆ ಆಗಿರಲಿ ಪೊಲೀಸರು ಅವರ ವಿರುದ್ಧ ನಿರ್ಧಾಕ್ಷೀಣ್ಯವಾಗಿ ಕಠಿಣ ಕ್ರಮ ಜರುಗಿಸಬೇಕು. ಆ ಕೆಲಸ ಗೃಹ ಸಚಿವರ ವಿರುದ್ಧ ಕ್ರಮ ಆಗುವ ಮೂಲಕ ಪ್ರಾರಂಭಿಸಬೇಕು ಎಂದು ಅವರು ಒತ್ತಾಯಿಸಿದರು.

ದಲಿತ ಯುವಕ ಚಂದ್ರುವನ್ನು ಉರ್ದು ಮಾತನಾಡಲಿಲ್ಲವೆಂಬ ಕಾರಣಕ್ಕೆ ಕೊಲೆ ಮಾಡಿಲ್ಲ. ಅಪಘಾತ ಸಂಬಂಧ ಉಂಟಾದ ಜಗಳದಲ್ಲಿ ಹಲ್ಲೆ ನಡೆದು ಸಾವನ್ನಪ್ಪಿದ್ದಾರೆ ಎಂಬ ವಾಸ್ತವಾಂಶವನ್ನು ಸಮಾಜಕ್ಕೆ ತಿಳಿಸಿದ ಬೆಂಗಳೂರು ಪೊಲೀಸ್ ಕಮೀಷನರ್ ಕಮಲ್‍ಪಂಥ್ ಅವರನ್ನು ಅಭಿನಂದಿಸುತ್ತೇನೆ ಎಂದರು.

ಕಾಂಗ್ರೆಸ್ ಪಕ್ಷ ಸಂವಿಧಾನಕ್ಕೆ ಬದ್ಧವಾದ ಪಕ್ಷ. ಸಮಾಜ ಸರ್ವಜನಾಂಗದ ತೋಟವೆಂಬ ಕುವೆಂಪು ವಾಣಿಯನ್ನು ಪಾಲಿಸುವ ಪಕ್ಷ ನಮ್ಮದು. ಧರ್ಮ, ಜಾತಿ, ವರ್ಗ ಬೇಧವಿಲ್ಲದೆ ಎಲ್ಲರನ್ನೂ ಸಮಾನವಾಗಿ ಕಾಣುವ ಪಕ್ಷ. ಅಧಿಕಾರಕ್ಕಾಗಿ ಜಾತಿ, ಧರ್ಮದ ನಡುವ ದ್ವೇಷ ಉಂಟುಮಾಡುವ ಪಕ್ಷವಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಪ್ರಸ್ತುತ ಹೊಸಮುಖಗಳ ಅವಶ್ಯವಿದೆ. ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಇದಕ್ಕೆ ಆದ್ಯತೆ ನೀಡಲಿದೆ. ಕ್ಷೇತ್ರದಲ್ಲಿ ಯಾರು ಜನರ ಮಧ್ಯೆ ನಿಂತು ಕೆಲಸ ಮಾಡುತ್ತಿದ್ದಾರೆ ಅವರನ್ನು ಗುರುತಿಸಿ ಸರ್ವಾನುಮತದಿಂದ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಲಾಗುವುದು ಎಂದು ಅವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ರಾಜ್ಯದಲ್ಲಿ ಹಮ್ಮಿಕೊಂಡಿರುವ ಕಾಂಗ್ರೆಸ್ ಸದಸ್ಯತ್ವ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸ್ವಯಂಪ್ರೇರಿತರಾಗಿ ಸದಸ್ಯತ್ವ ಪಡೆಯುತ್ತಿದ್ದಾರೆ. ಈಗಾಗಲೇ ದಾಖಲೆಯ 63 ಲಕ್ಷ ಸದಸ್ಯತ್ವ ನೋಂದಣಿಯಾಗಿದೆ. ಇನ್ನೂ ಕಾಲಾವಧಿಯಿದ್ದು, ಹೆಚ್ಚಿನ ನೋಂದಣಿಯಾಗಲಿದೆ ಎಂದು ಅವರು ಹೇಳಿದರು.

ಮಾಜಿ ಸಚಿವ ಎನ್.ಚಲುವರಾಯಸ್ವಾಮಿ, ವಿಧಾನಪರಿಷತ್ ಸದಸ್ಯ ದಿನೇಶ್ ಗೂಳೀಗೌಡ, ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್, ತಾಪಂ ಮಾಜಿ ಅಧ್ಯಕ್ಷ ತ್ಯಾಗರಾಜ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಿಕ್ಕೇರಿ ಸುರೇಶ್, ಇತರೆ ಮುಖಂಡರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News