×
Ad

ಮೂಡಿಗೆರೆ: ಅಭಿವೃದ್ಧಿ ಕಾರ್ಯಕ್ಕೆ ಅಡ್ಡಿಯಾಗಿದ್ದ 125 ವರ್ಷ ಹಳೆಯದಾದ ಸಮಾಧಿ, ಶಿಲುಬೆ ತೆರವು ಮಾಡಿ ಕೊಟ್ಟ ಕ್ರೈಸ್ತರು

Update: 2022-04-06 19:58 IST

ಚಿಕ್ಕಮಗಳೂರು, ಎ.6: ಮೂಡಿಗೆರೆ ಪಟ್ಟಣದ ಹೃದಯ ಭಾಗದಲ್ಲಿರುವ ಬಸ್ ನಿಲ್ದಾಣದ ಎದುರು ಪಟ್ಟಣ ಪಂಚಾಯತ್ ಜಾಗಕ್ಕೆ ಹೊಂದಿಕೊಂಡಂತೆ 125 ವರ್ಷಗಳಷ್ಟು ಹಳೆಯದಾದ ಸಮಾಧಿಯೊಂದರ ಮೇಲಿದ್ದ ಶಿಲುಬೆಯನ್ನು ಪಟ್ಟಣ ಪಂಚಾಯತ್‍ನ ಅಭಿವೃದ್ಧಿ ಕಾರ್ಯಕ್ಕಾಗಿ  ಕ್ರೈಸ್ತ ಸಮುದಾಯದವರು ತೆರವು ಮಾಡಿ ಕೊಟ್ಟಿದ್ದಾರೆ.

ಈ ಸಮಾಧಿಯು 125 ವರ್ಷಗಳ ಹಳೆಯದ್ದಾಗಿದ್ದು, ಪಟ್ಟಣದ ಹೃದಯ ಭಾಗದಲ್ಲಿದ್ದ ಈ ಸಮಾದಿ ಹಾಗೂ ಅದರ ಮೇಲಿದ್ದ ಶಿಲುಬೆ ಪಪಂ ಅಭಿವೃದ್ಧಿ ಚಟುವಟಿಕೆಗಳಿಗೆ ತೊಂದರೆಯಾಗಿತ್ತು. ಈ ಸಂಬಂಧ ಸಮಾದಿ ಹಾಗೂ ಶಿಲುಬೆ ತೆರವು ಮಾಡುವಂತೆ ಪಪಂ ಅಧಿಕಾರಿಗಳು ಕ್ರೈಸ್ತ ಸಮುದಾಯದ ಧಾರ್ಮಿಕ ಗುರುಗಳೂ ಸೇರಿದಂತೆ ಮುಖಂಡರಿಗೆ ಮನವಿ ಮಾಡಿತ್ತು. ಆದರೆ ಶಿಲುಬೆ ತೆರವು ಮಾಡಲು ಸಮುದಾಯದವರು ಸಮ್ಮತಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಈ ಸಮಾಧಿ ವಿವಾದಕ್ಕೆ ಕಾರಣವಾಗಿತ್ತು.

ಸದ್ಯ ಈ ಸಮಾದಿಗೆ 125 ವರ್ಷಗಳಾಗಿರುವ ಹಿನ್ನೆಲೆಯಲ್ಲಿ ಸಮುದಾಯದ ಮುಖಂಡರು ಸಮಾದಿ ಹಾಗೂ ಶಿಲುಬೆ ತೆರವು ಮಾಡಲು ಮುಂದಾಗಿದ್ದು, ಬುಧವಾರ ಬೆಳಗ್ಗೆ ಕ್ರೈಸ್ತ ಸಮುದಾಯದ ಧರ್ಮಗುರುಗಳು, ಮುಖಂಡರು ಹಾಗೂ ಸಮುದಾಯದ ಜನರು ಸಮಾದಿ ಇದ್ದ ಸ್ಥಳದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಬಳಿಕ ಸಮಾದಿಯನ್ನು ತೆರವು ಮಾಡಲು ಅನುವು ಮಾಡಿಕೊಟ್ಟಿದ್ದಾರೆ. ಸಮಾಧಿ ಮೇಲಿದ್ದ ಶಿಲುಬೆಯನ್ನು ಪಟ್ಟಣದಲ್ಲಿರುವ ಕ್ರೈಸ್ತ ಸಮುದಾಯದವರ ಸ್ಮಶಾನದಲ್ಲಿ ವಿಶೇಷ ಪೂಜೆಯೊಂದಿಗೆ ಮರುಸ್ಥಾಪಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News