ಗದಗ ಜಿಲ್ಲಾ ಕಾರಾಗೃಹದಲ್ಲಿ ಮತಾಂತರ: ವಿಶ್ವ ಹಿಂದೂ ಪರಿಷತ್, ಬಜರಂಗ ದಳ ಆರೋಪ

Update: 2022-04-07 02:01 GMT
ಸಾಂದರ್ಭಿಕ ಚಿತ್ರ

ಗದಗ: ಕ್ರಿಶ್ಚಿಯನ್ ಮಿಷಿನರಿ ಸಂಘಟನೆಗಳು ಗದಗ ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿ ಕೈದಿಗಳ ಮತಾಂತರದಲ್ಲಿ ತೊಡಗಿವೆ ಎಂದು ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗ ದಳ ಆಪಾದಿಸಿವೆ ಎಂದು times of india ವರದಿ ಮಾಡಿದೆ.

ಕ್ರೈಸ್ತಧರ್ಮಕ್ಕೆ ಮತಾಂತರ ಮಾಡುವ ಉದ್ದೇಶದಿಂದ ಕೈದಿಗಳಿಗೆ ಬೈಬಲ್ ವಿತರಿಸುವುದು, ಧರ್ಮಬೋಧನೆಯಂಥ ಕ್ರಮ ಕೈಗೊಳ್ಳುತ್ತಿವೆ ಎಂದು ದೂರಿವೆ.

ಈ ಚಟುವಟಿಕೆಗಳನ್ನು ಪೊಲೀಸರು ಗಮನಿಸಿ ಇದನ್ನು ನಿರ್ಬಂಧಿಸಲು ಕ್ರಮ ಕೈಗೊಳ್ಳಬೇಕು ಎಂದು ಕಾರ್ಯಕರ್ತರು ಆಗ್ರಹಿಸಿದ್ದಾರೆ.

ಬೆಂಗಳೂರಿನಿಂದ ಆಗಮಿಸಿದ ಕ್ರೈಸ್ತ ಮಿಷಿನರಿ ಸಂಘಟನೆಗಳ ಸದಸ್ಯರು ಜೈಲಿನಲ್ಲಿ ಬೈಬಲ್‍ನ ವಿವರಣೆಗಳನ್ನು ಓದುವ ಮೂಲಕ ಮತ್ತು ಬೈಬಲ್ ಪ್ರತಿಗಳನ್ನು ಕೈದಿಗಳಿಗೆ ವಿತರಿಸುವ ಮೂಲಕ ಕೈದಿಗಳ ಮೇಲೆ ಪ್ರಭಾವ ಬೀರುವ ಪ್ರಯತ್ನ ನಡೆಸಿದ್ದಾರೆ ಎಂದು ಆಪಾದಿಸಿದ್ದಾರೆ. ಮತಾಂತರ ಚಟುವಟಿಕೆಗಳನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ನಿಷೇಧಿಸಿದ್ದು, ಇಂಥ ಚಟುವಟಿಕೆಗಳಿಗೆ ಜೈಲಿನ ಅಧಿಕಾರಿಗಳು ಹೇಗೆ ಅನುಮತಿ ನೀಡಿದ್ದಾರೆ ಎಂದು ಪ್ರಶ್ನಿಸಿದ್ದರು.

ಈ ಘಟನೆ ಬಗ್ಗೆ ಪೊಲೀಸರು ತನಿಖೆ ನಡೆಸಬೇಕು ಎಂದು ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಆಗ್ರಹಿಸಿದ್ದು, ಮತಾಂತರ ಚಟುವಟಿಕೆಗಳಿಗೆ ಅವಕಾಶ ನೀಡಿರುವ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ವಿಎಚ್‍ಪಿ ಗದಗ ಜಿಲ್ಲಾ ಘಟಕದ ಕಾರ್ಯದರ್ಶಿ ರಾಘವೇಂದ್ರ, ಮುಖಂಡರಾದ ಮಾರುತಿ ಪವಾರ್, ಯಲ್ಲಪ್ಪ ಭಜಂತ್ರಿ, ಸುನೀಲ್ ಮೆಣಸಗಿ ಮತ್ತಿತರರು ಗದಗ ಜಿಲ್ಲಾ ಎಸ್ಪಿಗೆ ಮನವಿಪತ್ರ ಸಲ್ಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News