×
Ad

ಮೈಸೂರು | ಹಳೆ ವಸ್ತುಗಳ ಖರೀದಿಗೆ ಒತ್ತಾಯಿಸಿ ಪ್ರತಾಪ್‍ ಸಿಂಹ ಮನೆಗೆ ದಲಿತರಿಂದ ಮುತ್ತಿಗೆ ಯತ್ನ

Update: 2022-04-07 13:59 IST

ಮೈಸೂರು, ಎ.7: ಸಂಸದ ಪ್ರತಾಪ್ ಸಿಂಹ ಸೇರಿದಂತೆ ಸಂಘ ಪರಿವಾರ ಮತ್ತು ಬಿಜೆಪಿ ನಾಯಕರು ಮುಸ್ಲಿಮ್‍ ವರ್ತಕರುಗಳಿಗೆ ವ್ಯಾಪಾರಕ್ಕೆ ಅವಕಾಶ ನೀಡಬಾರದು ಎಂಬ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನಮ್ಮ ಹಳ್ಳಿಗಳಿಗೆ ಮುಸ್ಲಿಮ್ ಬಂಧುಗಳು ಯಾವುದೇ ವ್ಯಾಪಾರಕ್ಕೆ ಬರುತ್ತಿಲ್ಲ. ಆದ್ದರಿಂದ ಪ್ರತಾಪ್ ಸಿಂಹ ನಮ್ಮಲ್ಲಿರುವ ಹಳೆ ನಿರುಪಯುಕ್ತ ವಸ್ತುಗಳನ್ನು ಕೊಂಡುಕೊಂಡು ಹಣ ನೀಡಬೇಕು ಎಂದು ಒತ್ತಾಯಿಸಿ ಹಳೆ ವಸ್ತುಗಳನ್ನು ಚೀಲದಲ್ಲಿ ತುಂಬಿಕೊಂಡು ಸಂಸದರ ಮನೆಯೆದುರು ಪ್ರತಿಭಟನೆಗೆ ಮುಂದಾದ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು.

ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಚೋರನಹಳ್ಳಿ ಶಿವಣ್ಣ ನೇತೃತ್ವದಲ್ಲಿ ಗುರುವಾರ ದಸಂಸ ಕಾರ್ಯಕರ್ತರು ಮಹಿಳೆಯರು ಮತ್ತು ಗ್ರಾಮಾಂತರ ಭಾಗದ ಜನರುಗಳು ಚೀಲದಲ್ಲಿ ಹಳೆ ಸಾಮಾನು, ಖಾಲಿ ಬಾಟಲ್, ಹುಣಸೇ ಪಿಚ್ಚಿ, ಟಯರ್ ಟ್ಯೂಬ್, ಹಳೆ ಕಬ್ಬಿಣಗಳನ್ನು ಆಟೋದಲ್ಲಿ ತೆಗೆದುಕೊಂಡು ನಗರದ ವಿಜಯ ನಗರದ ನಾಲ್ಕನೆ ಹಂತದಲ್ಲಿರುವ ಸಂಸದ ಪ್ರತಾಪ್ ಸಿಂಹರ ಮನೆಗೆ ಆಗಮಿಸಿ ಅವರಿಗೆ ಮಾರಾಟ ಮಾಡಲು ಆಗಮಿಸಿದ್ದರು. 

ಈ ವೇಳೆ ಪೊಲೀಸರು ಸಂಸದ ಪ್ರತಾಪ್ ಸಿಂಹ ಅವರ ಮನೆಯ ಮುಂಭಾಗಕ್ಕೆ ತೆರಳದಂತೆ ಮನೆಯ 500 ಮೀಟರ್ ಹಿಂಭಾಗದ ರಿಂಗ್ ರಸ್ತೆಯ ಕನ್ನಡ ವೃತ್ತದಲ್ಲೇ ಬ್ಯಾರಿಕೇಡ್ ಗಳನ್ನು ಅಡ್ಡಹಾಕಿ ತಡೆದರು.

ಈ ವೇಳೆ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ದಸಂಸ ಜಿಲ್ಲಾ ಸಂಚಾಲಕ ಚೋರನಹಳ್ಳಿ ಶಿವಣ್ಣ ಆಕ್ರೋಶ ವ್ಯಕ್ತಪಡಿಸಿ, ಸಂಸದ ಪ್ರತಾಪ್ ಸಿಂಹ ಸೇರಿದಂತೆ ಸಂಘಪರಿವಾರ ಮತ್ತು ಬಿಜೆಪಿ ನಾಯಕರುಗಳು ಮುಸ್ಲಿಮ್‍ ವರ್ತಕರುಗಳಿಗೆ ವ್ಯಾಪಾರಕ್ಕೆ ಅವಕಾಶ ನೀಡಬಾರದು ಎಂಬ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಹಾಗಾಗಿ ನಮ್ಮ ಹಳ್ಳಿಗಳು ಬಡಾವಣೆಗಳಿಗೆ ವ್ಯಾಪಾರಕ್ಕಾಗಿ ಬರುತ್ತಿದ್ದ ಮುಸ್ಲಿಮ್ ಬಂಧುಗಳ ಭಯದಿಂದ ಬರುತ್ತಿಲ್ಲ, ಇದರಿಂದ ನಮ್ಮ ಬಳಿ ಹಳೆ ಬಾಟಲ್, ಕಾಲಿ ಸೀಸ, ಹುಣಸೆ ಪಿಚ್ಚಿ, ಹಳೆ ಟಯರ್ ಟ್ಯೂಬ್ ಗಳು ಸಾಕಷ್ಟು ಉಳಿದುಕೊಂಡಿವೆ. ಅವುಗಳನ್ನು ಸಂಸದ ಪ್ರತಾಪ್ ಸಿಂಹ ಕೊಂಡುಕೊಂಡು ನಮಗೆ  ಹಣ ನೀಡಬೇಕು. ನಾವು ಅವರ ವಿರುದ್ಧ ಯಾವುದೇ ಪ್ರತಿಭಟನೆ ಮಾಡಲು ಬಂದಿಲ್ಲ. ಇದಕ್ಕೆ ಅವಕಾಶ ಮಾಡಿಕೊಡಿ ಅವರು ನಮ್ಮ ಜನಪ್ರತಿನಿಧಿ ಅವರು ಕೊಂಡುಕೊಳ್ಳಲಿ ಎಂದು ಪೊಲೀಸರನ್ನು ಕೇಳಿಕೊಂಡರು.

ಆದರೆ ಎಸಿಪಿ ಶಿವಶಂಕರ್ ನೇತೃತ್ವದಲ್ಲಿ ಇನ್ ಸ್ಪೆಕ್ಟರ್ ಗಳಾದ ವೆಂಕಟೇಶ್, ಜಯಕುಮಾರ್ ಸೇರಿದಂತೆ ಪೊಲೀಸರುಗಳು ಅವರ ಮನೆ ಬಳಿಗೆ ತರೆಳಲು ಅವಕಾಶ ಕೊಡುವುದಿಲ್ಲ ಎಂದು ಹೇಳಿದರು. ಈ ನಡುವೆ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ವಾಗ್ವಾದವೇ ಏರ್ಪಟ್ಟಿತು. ಪರಿಸ್ಥಿತಿ ವಿಕೋಪಕ್ಕೆ ತಿರುಗುವುದನ್ನು ಅರಿತ ಪೊಲೀಸರು ಪೊಲೀಸ್ ವ್ಯಾನ್ ತಂದು ಪ್ರತಿಭಟನಾಕಾರರನ್ನು ಬಂಧಿಸಿ ಸಿಎಆರ್ ಮೈದಾನಕ್ಕೆ ಕರೆದೊಯ್ದರು.

ಇದರಿಂದ ಕೆರಳಿದ ಪ್ರತಿಭಟನಾಕರರು ಕೇಂದ್ರ, ರಾಜ್ಯ ಸರಕಾರ ಮತ್ತು ಸಂಸದ ಪ್ರತಾಪ್ ಸಿಂಹ ವಿರುದ್ಧ ಧಿಕ್ಕಾರ ಕೂಗಿದರು.

ಇದೇ ವೇಳೆ ಮಾಧ್ಯಮದವರೊಂದಿಗೆ ದಸಂಸ ಜಿಲ್ಲಾ ಸಂಚಾಲಕ ಚೋರನಹಳ್ಳಿ ಶಿವಣ್ಣ ಮಾತನಾಡಿ, ಮುಸ್ಲಿಮರನ್ನು ಟಾರ್ಗೆಟ್ ಮಾಡಿಕೊಂಡು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಿಜಾಬ್, ಹಲಾಲ್ ಮಾಂಸ, ಮತ್ತು ಮುಸ್ಲಿಮರ  ವ್ಯಾಪಾರದ ಹೆಸರಿನಲ್ಲಿ ತೊಂದರೆ ಕೊಡುತ್ತಿದ್ದು, ಇದರಲ್ಲಿ ಪ್ರಮುಖ ಪಾತ್ರ ವಹಿಸಿರುವ ಸಂಸದ ಪ್ರತಾಪ್ ಸಿಂಹ ಅವರನ್ನು ಕೂಡಲೇ ಬಂಧಿಸಬೇಕು ಮತ್ತು ಅವರ ಮೇಲೆ ದೇಶದ್ರೋಹದ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದರು.

ನೆಮ್ಮದಿಯಾಗಿ ಜೀವನ ನಡೆಸುತ್ತಿದ್ದ ಮುಸ್ಲಿಮ್ ಮತ್ತು ಹಿಂದೂಗಳ ನಡುವೆ ಕೋಮು ದ್ವೇಷ ಭಿತ್ತಿ ಮುಸ್ಲಿಮರಲ್ಲಿ ಭಯದ ವಾತಾವರಣ ಮೂಡಿಸಿದ್ದಾರೆ. ಇದರಿಂದ ಗುಜರಿ ಸಂಗ್ರಹಿಸುವ ಮುಸ್ಲಿಮ್ ವ್ಯಾಪಾರಿಗಳು ಹಳ್ಳಿಗಳಿಗೆ ವ್ಯಾಪಾರಕ್ಕೆ ಬರುತ್ತಿಲ್ಲ, ಹಾಗಾಗಿ ನಮ್ಮಲ್ಲಿ ಹುಣಸೆ ಬೀಜ, ಖಾಲಿ ಬಾಟ್, ಹಳೇ ಕಬ್ಬಿಣ, ಹಾಲಿನ ಕವರ್ ಗಳು ಉಳಿದುಕೊಂಡಿವೆ. ಇದನ್ನು ಸಂಸದ ಪ್ರತಾಪ್ ಸಿಂಹ ಕೊಂಡುಕೊಂಡು ಹಣ ನೀಡಬೇಕು, ಇಲ್ಲದಿದ್ದರೆ ಕೋಮುವಾದ ಭಿತ್ತುತ್ತಿರುವ ಈತನ ಮೇಲೆ ನ್ಯಾಯಾಲಯದಲ್ಲಿ ಮೊಕದ್ದಮ್ಮ ಹೂಡ ಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಸರ್ವಜನಾಂಗದ ಶಾಂತಿಯ ತೋಟದಂತಿದ್ದ ರಾಜ್ಯವನ್ನು ಬಿಜೆಪಿ ಮತ್ತು ಸಂಘಪರಿವಾರದ ಮುಖಂಡರುಗಳು ಕೋಮುದ್ವೇಷ ಹರಡುವಂತೆ ಮಾಡುತ್ತಿದ್ದಾರೆ. ಸರ್ಕಾರ ಕೂಡಲೇ ಇಂತವರ ಮೇಲೆ ಉಗ್ರ  ಕಾನೂನು ಕ್ರಮ ಕೈಗೊಂಡು ಶಾಂತಿ ವಾತಾವರಣ ನಿರ್ಮಾಣ ಮಾಡಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯ ವಿಚಾರ ತಿಳಿಯುತ್ತಿದ್ದಂತೆ ಗುರುವಾರ ಬೆಳಿಗ್ಗೆಯಿಂದಲೇ ಪೊಲೀಸರು ಎರಡು ಸಿಎಆರ್ ವ್ಯಾನ್ ಸಮೇತ  ಸಂಸದ ಪ್ರತಾಪ್ ಸಿಂಹ ಮನೆಯ ಸುತ್ತಾ ಮುತ್ತಾ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು.

ಸ್ಥಳದಲ್ಲಿ ಖುದ್ದು ಎಸಿಪಿ ಶಿವಶಂಕರ್ ಇದ್ದು ಬಂದೋಬಸ್ತ್ ಕಲ್ಪಿಸಿದ್ದರು.

ಪ್ರತಿಭಟನೆಯಲ್ಲಿ ನೆಲೆ ಹಿನ್ನಲೆ ಕೆ.ಆರ್.ಗೋಪಾಲಕೃಷ್ಣ, ಹಿರಿಯ ರಂಗಕರ್ಮಿ ಕೃಷ್ಣಪ್ರಸಾದ್, ವರುಣಾ ಮಹೇಶ್, ಚೋರನಹಳ್ಳಿ ಮಹದೇವಸ್ವಾಮಿ, ಬುಗತಹಳ್ಳಿ ದೇವರಾಜು, ಪಡುವಾರಹಳ್ಳಿ ಭಾಗ್ಯಮ್ಮ, ವನಿತಾ, ಬೊಮ್ಮನಹಳ್ಳಿ ಶಂಕರ್ ನಂಜನಗೂಡು ಶಿವಮೂರ್ತಿ, ಸೇರಿದಂತೆ ಏಕಲವ್ಯ ನಗರ ನಿವಾಸಿಗಳು ಮತ್ತು ಹಲವು ಗ್ರಾಮಗಳ ನಿವಾಸಿಗಳು ಭಾಗವಹಿಸಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News