ಬೆಂಗಳೂರು: ಎಟಿಎಂಗಳಲ್ಲಿ ವೃದ್ಧರಿಗೆ ಸಹಾಯ ಮಾಡುವ ನೆಪದಲ್ಲಿ ವಂಚನೆ; ಆರೋಪಿಯ ಬಂಧನ

Update: 2022-04-07 11:54 GMT

ಬೆಂಗಳೂರು, ಎ.7: ಎಟಿಎಂ ಕೇಂದ್ರದಲ್ಲಿ ಹಣ ಕೊಡಿಸುತ್ತೇನೆ ಎಂದು ಸಹಾಯ ಮಾಡುವ ನೆಪದಲ್ಲಿ ವಯೋವೃದ್ಧರನ್ನು ವಂಚಿಸುತ್ತಿದ್ದ ಆರೋಪಿಯನ್ನು ಎಲೆಕ್ಟ್ರಾನಿಕ್ ಸಿಟಿ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಹರೀಶ್ ನಾಯ್ಕ್ ಬಂಧಿತ ಆರೋಪಿಯಾಗಿದ್ದು, ಈತನ ಜೊತೆ ಕೃತ್ಯದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿರುವ ಮತ್ತೊಬ್ಬ ಆರೋಪಿಯ ಬಂಧನಕ್ಕೆ ತೀವ್ರ ಶೋಧ ನಡೆಸಲಾಗಿದೆ ಎಂದು ಡಿಸಿಪಿ ಶ್ರೀನಾಥ್ ಮಹದೇವ ಜೋಶಿ ತಿಳಿಸಿದ್ದಾರೆ.

ಆರೋಪಿಗಳು ಎಟಿಎಂ ಬಳಿ ಬರುತ್ತಿದ್ದ ವಯೋವೃದ್ಧರು ಹಾಗೂ ಮಹಿಳೆಯರನ್ನೆ ಗುರಿಯಾಗಿಸಿಕೊಂಡಿದ್ದರು. ವಯೋವೃದ್ಧರಿಗೆ ಹಣ ಡ್ರಾ ಮಾಡಿಕೊಡುತ್ತೇನೆ ಎಂದು ಎಟಿಎಂ ಕಾರ್ಡ್ ಪಡೆಯುತ್ತಿದ್ದರು. ನಂತರ ಹಣ ಬರುತ್ತಿಲ್ಲ ಎಂದು ಅದೇ ಬ್ಯಾಂಕ್‍ನ ಬೇರೆ ಎಟಿಎಂ ನೀಡಿ ವಂಚನೆ ಮಾಡಿ ಪರಾರಿಯಾಗುತ್ತಿದ್ದರು ಎನ್ನುವ ಮಾಹಿತಿ ವಿಚಾರಣೆಯಲ್ಲಿ ಗೊತ್ತಾಗಿದೆ.

ದೊಡ್ಡ ತೂಗೂರಿನ ಶ್ರೀನಿವಾಸುಲು ಎಂಬವರು ಮನೆಯ ಹತ್ತಿರದ ಕೆನರಾ ಬ್ಯಾಂಕ್ ಎಟಿಎಂ ಕೇಂದ್ರದ ಬಳಿ ಹಣ ಡ್ರಾ ಮಾಡಲು ಹೋದಾಗ ಕಾರ್ಡ್ ಪಡೆದು ಆರೋಪಿಗಳು ಇದೇ ರೀತಿ ವಂಚನೆ ಮಾಡಿದ್ದು, ಅವರ ಖಾತೆಯಲ್ಲಿದ್ದ 1 ಲಕ್ಷ 50 ಸಾವಿರ ಹಣವನ್ನು ಪಡೆದುಕೊಂಡಿದ್ದರು. ಈ ಬಗ್ಗೆ ಶ್ರೀನಿವಾಸುಲು ಅವರು ದೂರು ನೀಡಿದ್ದು ಪ್ರಕರಣ ದಾಖಲಿಸಿ ಕಾರ್ಯಾಚರಣೆ ಕೈಗೊಂಡ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು, ಆರೋಪಿ ಹರೀಶ್ ನಾಯ್ಕ್‍ನನ್ನು ಬಂಧಿಸಿ ಮತ್ತೊಬ್ಬನಿಗೆ ಶೋಧ ಕೈಗೊಂಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News