ಸಮಾಜದಲ್ಲಿ ಗೊಂದಲ ಸೃಷ್ಟಿಸಿ ಬಿಜೆಪಿಯವರು ಏನು ಸಾಧಿಸಲು ಹೊರಟಿದ್ದಾರೆ: ಶಾಸಕ ಝಮೀರ್ ಅಹ್ಮದ್ ಖಾನ್ ಪ್ರಶ್ನೆ

Update: 2022-04-07 14:10 GMT

ಬೆಂಗಳೂರು, ಎ. 7: ‘ಸಮಾಜದಲ್ಲಿ ಗೊಂದಲ ಸೃಷ್ಟಿಸಿ ಬಿಜೆಪಿಯವರು ಏನು ಸಾಧಿಸಲು ಹೊರಟಿದ್ದಾರೋ ಗೊತ್ತಿಲ್ಲ. ಜೆ.ಜೆ.ನಗರದಲ್ಲಿ ನಡೆದ ಯುವಕ ಚಂದ್ರು ಹತ್ಯೆಗೆ ಸಂಬಂಧಿಸಿದಂತೆ ಗೃಹ ಸಚಿವ ಆರಗ ಜ್ಞಾನೇಂದ್ರ ನೀಡಿದ ಗೊಂದಲಕಾರಿ ಹೇಳಿಕೆ ಎಷ್ಟರ ಮಟ್ಟಿಗೆ ಸರಿ' ಎಂದು ಚಾಮರಾಜಪೇಟೆ ಕ್ಷೇತ್ರದ ಶಾಸಕ ಬಿ.ಝೆಡ್.ಝಮೀರ್ ಅಹ್ಮದ್ ಖಾನ್ ಪ್ರಶ್ನಿಸಿದ್ದಾರೆ.

ಗುರುವಾರ ಚಾಮರಾಜಪೇಟೆಯಲ್ಲಿರುವ ಶಾಸಕರ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಯುವಕನ ಹತ್ಯೆ ನಡೆದ ಘಟನೆಯನ್ನು ಯಾರೂ ಒಪ್ಪುವುದಿಲ್ಲ. ಇಂತಹ ಕೃತ್ಯ ಎಸಗಿರುವವರಿಗೆ ಕಾನೂನು ರೀತಿ ತಕ್ಷ ಶಿಕ್ಷೆಯಾಗಲೇಬೇಕು ಅದರಲ್ಲಿ ಎರಡನೆ ಮಾತೇ ಇಲ್ಲ. ಆದರೆ, ಜವಾಬ್ದಾರಿಯುತ ಸ್ಥಾನದಲ್ಲಿರುವ ಗೃಹ ಸಚಿವರು ಇಂತಹ ಸೂಕ್ಷ್ಮ ವಿಚಾರಗಳ ಬಗ್ಗೆ ಹೇಳಿಕೆಗಳನ್ನು ನೀಡುವಾಗ ಹಿರಿಯ ಪೊಲೀಸ್ ಅಧಿಕಾರಿಗಳಿಂದ ಮಾಹಿತಿ ಪಡೆದು ಹತ್ತಾರು ಬಾರಿ ಯೋಚಿಸಿ ಹೇಳಿಕೆ ನೀಡಬೇಕು' ಎಂದು ಸಲಹೆ ನೀಡಿದರು.

‘ಯಾವ ಕಾರಣಕ್ಕಾಗಿ ಅವರು ಆ ರೀತಿಯ ಹೇಳಿಕೆ ನೀಡಿದರೋ ಗೊತ್ತಿಲ್ಲ. ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಈ ಘಟನೆಗೆ ಸಂಬಂಧಿಸಿದಂತೆ ಮಾಧ್ಯಮಗಳ ಎದುರು ಸ್ಪಷ್ಟನೆ ನೀಡಿದ ನಂತರ ಗೃಹ ಸಚಿವ ಆರಗ ಜ್ಞಾನೇಂದ್ರ ತಮ್ಮ ಹೇಳಿಕೆಯನ್ನು ಹಿಂಪಡೆದು ಕ್ಷಮೆಯಾಚಿಸಿದ್ದಾರೆ. ಎ.4ರ ಮಧ್ಯರಾತ್ರಿ 3.30ರ ಸುಮಾರಿಗೆ ಚಂದ್ರು ಮೃತಪಟ್ಟನು. ಆತನ ಶವದ ಮರಣೋತ್ತರ ಪರೀಕ್ಷೆ ನಡೆಸಿ, ಕುಟುಂಬ ಸದಸ್ಯರಿಗೆ ಹಸ್ತಾಂತರಿಸುವವರೆಗೆ ನಾವು ಅವರ ಕುಟುಂಬದ ಜೊತೆ ಇದ್ದೆವು. ಅವರಿಗೆ ಸಾಂತ್ವನ ಹೇಳಿ ವೈಯಕ್ತಿಕವಾಗಿ 2ಲಕ್ಷ ರೂ.ಗಳ ಪರಿಹಾರ ಕೊಟ್ಟಿದ್ದೇನೆ' ಎಂದು ಅವರು ತಿಳಿಸಿದರು.

‘ಮನಸ್ಸಿಗೆ ಬಂದಂತೆ ಹೇಳಿಕೆಗಳನ್ನು ನೀಡಿ ಪ್ರತಿಯೊಂದರಲ್ಲೂ ರಾಜಕಾರಣ ಮಾಡುವ ಬಿಜೆಪಿ ನಾಯಕರು ನಿನ್ನೆ ಎಲ್ಲಿಗೆ ಹೋಗಿದ್ದರು. ಹಿಜಾಬ್, ಹಲಾಲ್, ಲೌಡ್ ಸ್ಪೀಕರ್ ಇಂತಹ ವಿಚಾರಗಳನ್ನೆ ಮುಂದಿಟ್ಟುಕೊಂಡು ಸಮಾಜದಲ್ಲಿ ಅಶಾಂತಿ, ಗೊಂದಲ ಸೃಷ್ಟಿಸಿ ರಾಜಕೀಯ ಲಾಭ ಪಡೆದುಕೊಳ್ಳುವ ತಂತ್ರಗಾರಿಕೆಯನ್ನು ಬಿಜೆಪಿ ಅನುಸರಿಸುತ್ತಿದೆ. ನೆರೆಯ ತೆಲಂಗಾಣ, ಆಂಧ್ರ, ತಮಿಳುನಾಡಿನಲ್ಲಿ ಇಂತಹ ಯಾವುದೆ ಗೊಂದಲಕಾರಿ ವಿಚಾರಗಳಿಲ್ಲದೆ ಜನ ನೆಮ್ಮದಿಯಿಂದ ಇದ್ದಾರೆ. ಏಕೆಂದರೆ ಅಲ್ಲಿರೋದು ಜನರಿಂದ ಆಯ್ಕೆಯಾಗಿರುವ ಸರಕಾರ, ಆದರೆ, ರಾಜ್ಯದಲ್ಲಿ ಬಿಜೆಪಿ ನೇರವಾಗಿ ಜನರಿಂದ ಆಯ್ಕೆಯಾಗಿ ಸರಕಾರ ನಡೆಸುತ್ತಿಲ್ಲ. ಆಪರೇಷನ್ ಕಮಲದ ಮೂಲಕ ಅಧಿಕಾರಕ್ಕೆ ಬಂದಿರುವ ಸರಕಾರ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಇಂತಹ ಕಸರತ್ತುಗಳನ್ನು ನಡೆಸುತ್ತಿದೆ' ಎಂದು ಝಮೀರ್ ಅಹ್ಮದ್ ಖಾನ್ ಟೀಕಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News