×
Ad

ಮ್ಯಾಜಿಸ್ಟ್ರೇಟ್ ಆದೇಶವಿಲ್ಲದೆ ಪೊಲೀಸರು 'ನಾನ್ ಕಾಗ್ನಿಸೆಬಲ್ ' ಪ್ರಕರಣ ತನಿಖೆ ಮಾಡುವಂತಿಲ್ಲ: ಹೈಕೋರ್ಟ್

Update: 2022-04-07 19:48 IST

ಬೆಂಗಳೂರು, ಎ.7: ನಾನ್ ಕಾಗ್ನಿಸಬಲ್ ಅಪರಾಧ ಪ್ರಕರಣಗಳಲ್ಲಿ ಮ್ಯಾಜಿಸ್ಟ್ರೇಟ್ ಆದೇಶವಿಲ್ಲದೆ ಪೊಲೀಸರು ಎಫ್‍ಐಆರ್ ದಾಖಲಿಸಿ ತನಿಖೆ ಮಾಡುವಂತಿಲ್ಲ ಹಾಗೂ ಮ್ಯಾಜಿಸ್ಟ್ರೇಟ್ ಅನುಮತಿಯು ತನಿಖೆಗೆ ಆದೇಶ ಎನ್ನಿಸಿಕೊಳ್ಳುವುದಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.

ಇದೇ ವೇಳೆ ನಾನ್ ಕಾಗ್ನಿಸೆಬಲ್ ಅಪರಾಧ ಪ್ರಕರಣಗಳಲ್ಲಿ ತನಿಖೆ ಮುಂದುವರೆಸಲು ನ್ಯಾಯಾಲಯದ ಸಮ್ಮತಿ ಕೋರಿ ಪೊಲೀಸರು ಮನವಿ ಸಲ್ಲಿಸಿದಾಗ ಮ್ಯಾಜಿಸ್ಟ್ರೇಟ್ ಕೋರ್ಟ್ ಪಾಲಿಸಬೇಕಾದ ಮಾರ್ಗಸೂಚಿಗಳನ್ನು ರೂಪಿಸಿದೆ.

ಬೆಂಗಳೂರಿನ ಹರಿರಾಜ್ ಶೆಟ್ಟಿ ಎಂಬುವರು ತಮ್ಮ ವಿರುದ್ಧ ಪೊಲೀಸರು ದಾಖಲಿಸಿರುವ ಎಫ್‍ಐಆರ್ ಹಾಗೂ ಮ್ಯಾಜಿಸ್ಟ್ರೇಟ್ ಕೋರ್ಟ್‍ಗೆ ಸಲ್ಲಿಸಿರುವ ದೋಷಾರೋಪ ಪಟ್ಟಿಯನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ಪೀಠ ಈ ತೀರ್ಪು ನೀಡಿದೆ.

ಪೊಲೀಸರು ಮ್ಯಾಜಿಸ್ಟ್ರೇಟ್ ಕೋರ್ಟ್‍ನಿಂದ ತನಿಖೆ 'ಆದೇಶ' ಪಡೆದಿಲ್ಲ. ಬದಲಿಗೆ 'ಅನುಮತಿ' ಪಡೆದಿದ್ದಾರೆ. ಮ್ಯಾಜಿಸ್ಟ್ರೇಟ್ 'ತನಿಖೆಗೆ ಅನುಮತಿಸಲಾಗಿದೆ' ಎಂದಿದ್ದಾರೆ. ತನಿಖೆಗೆ ಅನುಮತಿಸಲಾಗಿದೆ ಎಂಬುದು ಸಿಆರ್​ಪಿಸಿ ಸೆಕ್ಷನ್ 155(1) ಹಾಗೂ 155(2) ರ ಅವಶ್ಯಕತೆಗಳನ್ನು ಪೂರೈಸಿದಂತಾಗುವುದಿಲ್ಲ ಎಂದು ಅಭಿಪ್ರಾಯಪಟ್ಟು ಅರ್ಜಿದಾರರ ವಿರುದ್ಧ ದಾಖಲಿಸಿದ್ದ ಎಫ್‍ಐಆರ್ ಹಾಗೂ ಮ್ಯಾಜಿಸ್ಟ್ರೇಟ್ ಕೋರ್ಟ್‍ನ ಪ್ರಕ್ರಿಯೆಯನ್ನು ರದ್ದುಪಡಿಸಿದೆ.

ನಾನ್ ಕಾಗ್ನಿಸೆಬಲ್ ಅಪರಾಧ ಪ್ರಕರಣಗಳಲ್ಲಿ ಪೊಲೀಸರು ತನಿಖೆ ಮುಂದುವರೆಸಲು ಕೋರಿ ಮನವಿ ಸಲ್ಲಿಸಿದಾಗ ಮ್ಯಾಜಿಸ್ಟ್ರೇಟ್ ಇನ್ನು ಮುಂದೆ 'ತನಿಖೆಗೆ ಅನುಮತಿಸಲಾಗಿದೆ' ಎನ್ನುವಂತಿಲ್ಲ. ಇಂತಹ ಅನುಮೋದನೆಯು ಸಿಆರ್​ಪಿಸಿ ಸೆಕ್ಷನ್ 155 ರಡಿ ಹಾಗೂ ಕಾನೂನು ದೃಷ್ಟಿಯಲ್ಲಿ ತನಿಖೆಗೆ ಆದೇಶವಲ್ಲ.

ಸಂಬಂಧಪಟ್ಟ ಮ್ಯಾಜಿಸ್ಟ್ರೇಟ್ ಮುಂದೆ ಇಂತಹ ಮನವಿ ಬಂದಾಗ ಅದು ಅಂಚೆ ಮೂಲಕ ಅಥವಾ ಮುದ್ದಾಂ ಮೂಲಕ ಬಂದಿದೆಯೇ ಎಂಬುದನ್ನು ಪರಿಗಣಿಸಿ, ಪ್ರತ್ಯೇಕ ಆರ್ಡರ್ ಶೀಟ್ ಜತೆಗೆ ತಮ್ಮ ಮುಂದೆ ಇರಿಸುವಂತೆ ಕಚೇರಿಗೆ ನಿರ್ದೇಶಿಸಬೇಕು. ವಿನಂತಿಯ ಮೇರೆಗೆ ಯಾವುದೇ ಆದೇಶ ನೀಡಬಾರದು. ಪ್ರಕರಣದ ಮುಂದಿನ ವಿಚಾರಣೆಯಲ್ಲೂ ಈ ಆದೇಶದ ಪ್ರತಿ ಮುಂದುವರೆಸಬೇಕು. ಮನವಿ ಸಲ್ಲಿಸಿದಾಗ ಸಂಬಂಧಪಟ್ಟ ಮ್ಯಾಜಿಸ್ಟ್ರೇಟ್, ಪೊಲೀಸ್ ಠಾಣೆಯ ಎಸ್‍ಎಚ್‍ಒ ಮನವಿಯಲ್ಲಿ ಮಾಹಿತಿದಾರರನ್ನು ಉಲ್ಲೇಖಿಸಿದ್ದಾರೆಯೇ ಎಂಬುದನ್ನು ಪರೀಕ್ಷಿಸಬೇಕು.

ಬಳಿಕ ಮ್ಯಾಜಿಸ್ಟ್ರೇಟ್ ತಮ್ಮ ನ್ಯಾಯಾಂಗ ವಿವೇಚನೆ ಬಳಸಿ ಮನವಿಯಲ್ಲಿನ ಅಂಶಗಳನ್ನು ಪರೀಕ್ಷಿಸಿ, ಪ್ರಕರಣವು ತನಿಖೆಗೆ ಯೋಗ್ಯವೇ ಇಲ್ಲವೇ ಎಂಬುದನ್ನು ನಿರ್ಣಯಿಸಬೇಕು ಹಾಗೂ ಈ ಕುರಿತು ದಾಖಲಿಸಬೇಕು. ತನಿಖೆಗೆ ಯೋಗ್ಯವೆನ್ನಿಸದಿದ್ದರೆ ಮನವಿ ತಿರಸ್ಕರಿಸಬೇಕು. ಪೊಲೀಸ್ ತನಿಖೆಗೆ ಯೋಗ್ಯವಿದೆ ಹಾಗೂ ಅದಕ್ಕೆ ಸಾಕಷ್ಟು ಆಧಾರವಿದೆ ಎನ್ನಿಸಿದರೆ ಮಾತ್ರವೇ ನಾನ್ ಕಾಗ್ನಿಸೆಬಲ್ ಅಪರಾಧ ಪ್ರಕರಣದ ತನಿಖೆಗೆ 'ಆದೇಶ' ನೀಡಬೇಕು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News