ಬಿಜೆಪಿ ಸೃಷ್ಟಿಸುವ ವಿವಾದಗಳಿಂದ ಕಾಂಗ್ರೆಸ್‍ಗೆ ಲಾಭ: ಎಂ.ಬಿ.ಪಾಟೀಲ್

Update: 2022-04-07 15:00 GMT

ಬೆಂಗಳೂರು, ಎ. 7: ‘ಯುವಕನ ಹತ್ಯೆ ವಿಚಾರವಾಗಿ ಗೃಹ ಸಚಿವ ಆರಗ ಜ್ಞಾನೇಂದ್ರ ವಿವಾದಾತ್ಮಕ ಹೇಳಿಕೆ ನೀಡಿ, ನಂತರ ತಮ್ಮ ಹೇಳಿಕೆ ಹಿಂಪಡೆದಿದ್ದು, ಈ ವಿಚಾರ ನೋಡಿದರೆ ಬಿಜೆಪಿ ಸರಕಾರದ್ದು ಎಲ್ಲವೂ ಅತಿರೇಕವೆನಿಸುತ್ತಿದೆ. ಮತಗಳ ಕ್ರೋಡೀಕರಣಕ್ಕಾಗಿ ಇವರು ಏನೆಲ್ಲ ಮಾಡುತ್ತಿದ್ದಾರೆಂದು ರಾಜ್ಯದ ಜನತೆ ಗಮನಿಸುತ್ತಿದ್ದಾರೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಹಾಗೂ ಶಾಸಕ ಎಂ.ಬಿ.ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗುರುವಾರ ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಬಿಜೆಪಿ ಮುಖಂಡರು ರಾಜ್ಯದಲ್ಲಿ ಒಂದಾದ ಮೇಲೆ ಒಂದು ವಿವಾದವನ್ನು ಹುಟ್ಟು ಹಾಕುತ್ತಿದ್ದಾರೆ. ಹಿಜಾಬ್, ಕಾಶ್ಮೀರ್ ಫೈಲ್ಸ್, ಜಾತ್ರೆಯಲ್ಲಿ ಮುಸ್ಲಿಮ್ ವ್ಯಾಪಾರಸ್ಥರಿಗೆ ನಿರ್ಬಂಧ, ಹಲಾಲ್, ಅಝಾನ್, ಇದೀಗ ಮಾವಿನ ಹಣ್ಣು ಖರೀದಿಯನ್ನೂ ವಿವಾದ ಮಾಡಲಾಗುತ್ತಿದೆ. ಇದು ಬಿಜೆಪಿಗೆ ತಿರುಗುಬಾಣವಾಗಲಿದೆ' ಎಂದು ಎಚ್ಚರಿಕೆ ನೀಡಿದರು.

‘ಅನಗತ್ಯ ವಿವಾದಗಳಿಂದಾಗಿ ಕೈಗಾರಿಕೆಗಳು, ಉದ್ಯಮಿಗಳು ರಾಜ್ಯಕ್ಕೆ ಬಂದು ಬಂಡವಾಳ ಹೂಡಿಕೆ ಮಾಡಲು ಹಿಂಜರಿಯುತ್ತಾರೆ. ತಮ್ಮ ಸಮಸ್ಯೆಗಳನ್ನು ಮುಚ್ಚಿ ಹಾಕುವುದಕ್ಕೆ ಹೀಗೆಲ್ಲಾ ಮಾಡುತ್ತಿದ್ದಾರೆ. ಭ್ರಷ್ಟಾಚಾರವನ್ನು ಪ್ರಧಾನಿ ಮೋದಿಯವರು ಕಂಡೂ ಕಾಣದಂತಿದ್ದಾರೆ. ಬೇರೆಯವರಾದರೆ ಸಿಬಿಐ ತನಿಖೆ ಮಾಡಿಸುತ್ತಿದ್ದರು. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ 140 ಸ್ಥಾನಗಳನ್ನು ನಿಶ್ಚಿತವಾಗಿಯೂ ಗೆಲ್ಲಲಿದೆ. ಬಿಜೆಪಿಯವರು ಸೃಷ್ಟಿಸುವ ವಿವಾದಗಳು ನಮಗೆ ಅನುಕೂಲವಾಗಲಿದೆ' ಎಂದು ಪಾಟೀಲ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News