ತನ್ನದೇ ಕಂಪೆನಿಯ ಉಪಗ್ರಹ ಉಡಾವಣೆ ಮಾಡಿದ ಅವೈಸ್ ಅಹ್ಮದ್: ದೇಶಕ್ಕೆ ಕೀರ್ತಿ ತಂದ ಕಾಫಿನಾಡಿನ ಯುವಕ

Update: 2022-04-07 16:52 GMT
                                                                 ಅವೈಸ್ ಅಹ್ಮದ್

ಚಿಕ್ಕಮಗಳೂರು, ಎ.7: ತನ್ನದೇಯಾದ ‘ಪಿಕ್ಸೆಲ್’ ಎಂಬ ಸ್ವಂತ ಏರೋಸ್ಪೇಸ್ ಕಂಪೆನಿಯೊಂದನ್ನು ಆರಂಭಿಸಿದ್ದಲ್ಲದೆ ತನ್ನ ಕಂಪೆನಿ ತಯಾರಿಸಿದ ಉಪಗ್ರಹವನ್ನು ಅಮೆರಿಕದ ಸ್ಪೇಸ್ ಎಕ್ಸ್‌ನಿಂದ ಯಶಸ್ವಿಯಾಗಿ ಉಡಾವಣೆ ಮಾಡುವ ಮೂಲಕ ಕಾಫಿನಾಡಿನ ಯುವ ಉದ್ಯಮಿಯೊಬ್ಬರು ಇಡೀ ದೇಶವೇ ಹೆಮ್ಮೆ ಪಡುವ ಸಾಧನೆ ಮಾಡಿದ್ದು, ಈ ಮೂಲಕ ಕಾಫಿನಾಡಿನ ಹೆಸರನ್ನು ರಾಷ್ಟ್ರ, ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆಯುವಂತೆ ಮಾಡಿದ್ದಾರೆ.

ಚಿಕ್ಕಮಗಳೂರು ತಾಲೂಕಿನ ಆಲ್ದೂರು ಪಟ್ಟಣದಲ್ಲಿ ಮೆಡಿಕಲ್ ಶಾಪ್ ಹೊಂದಿರುವ ನದೀಮ್ ಅಹ್ಮದ್ ಎಂಬವರ ಪುತ್ರ ಅವೈಸ್ ಅಹ್ಮದ್ ಈ ಸಾಧನೆ ಮಾಡಿದ ಕಾಫಿನಾಡಿನ ಯುವಕ. ಇವರ ಮಾಲಕತ್ವದ ಫಿಕ್ಸೆಲ್ ಕಂಪೆನಿ ತಯಾರಿಸಿದ ‘ಶಕುಂತಲಾ’ ಎಂಬ ಹೆಸರಿನ ಉಪಗ್ರಹವನ್ನು ಎ.1ರಂದು ಅಮೆರಿಕದ ಸ್ಪೇಸ್ ಎಕ್ಸ್‌ನಿಂದ ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ.

ಅವೈಸ್ ಅಹ್ಮದ್ ಅವರ ಸಂಶೋಧನೆಯಾಗಿರುವ ಈ ಉಪಗ್ರಹ ಬೇರೆ ಎಲ್ಲಾ ಉಪಗ್ರಹಗಳಿಗಿಂತ ಶೇ.50ಕ್ಕೂ ಹೆಚ್ಚು ಡೇಟಾವನ್ನು ಬಿಡುಗಡೆಗೊಳಿಸುತ್ತದೆ. ಈ ಉಪಗ್ರಹ ಭೂಮಿಯ ಚಲನವಲನದ ಪೋಟೊ, ಕೃಷಿ ಪ್ರಗತಿ, ಹವಮಾನದ ಮಾಹಿತಿ ಸೇರಿದಂತೆ ವಿವಿಧ ರೀತಿಯ ಮಾಹಿತಿಯನ್ನು ರವಾನಿಸುವ ಸಾಮರ್ಥ್ಯವನ್ನು ಹೊಂದಿದೆ. ‘ಶಕುಂತಲಾ’ ಉಪಗ್ರಹ ಉಡಾವಣೆಗೂ ಮುನ್ನ ಅವೈಸ್ ಅಹ್ಮದ್ ಅವರು ಈ ಹಿಂದೆ ತಯಾರಿಸಿದ್ದ ‘ಆನಂದ್’ ಎಂಬ ಹೆಸರಿನ ಉಪಗ್ರಹವನ್ನು ಭಾರತದ ಬಾಹ್ಯಾಕಾಶ ಸಂಶೋಧನಾ ಕೇಂದ್ರದಿಂದಲೇ ಉಡಾವಣೆ ಮಾಡಲು ತಯಾರಿ ನಡೆದಿತ್ತು. ಆದರೆ ಇಸ್ರೋದಿಂದ ಉಡಾವಣೆ ಮಾಡಲು ದಿನಾಂಕ ಸಿಗದ ಹಿನ್ನೆಲೆಯಲ್ಲಿ ಆ ಉಪಗ್ರಹ ಉಡಾವಣೆಯ ಕೆಲಸ ನೆನೆಗುದಿಗೆ ಬಿದ್ದಿತ್ತು. ಆದರೆ ತಮ್ಮದೇ ಕಂಪೆನಿ ನಿರ್ಮಾಣದ ಮತ್ತೊಂದು ಉಪಗ್ರಹ ‘ಶಕುಂತಲಾ’ವನ್ನು ಅಮೆರಿಕದ ಸ್ಪೇಸ್ ಎಕ್ಸ್‌ನಿಂದ ಎ.1ರಂದು ಯಶಸ್ವಿಯಾಗಿ ಉಡಾವಣೆ ಮಾಡುವ ಮೂಲಕ ಸಾಧನೆ ಮಾಡಿದ್ದಾರೆ.

ತಮ್ಮ ಸಂಸ್ಥೆ ತಯಾರಿಸಿರುವ ಮೊದಲ ಉಪಗ್ರಹ ‘ಆನಂದ್’ ಉಡಾವಣೆಯನ್ನೂ ಶೀಘ್ರದಲ್ಲೇ ನೆರವೇರಿಸಲು ಅವರು ತಯಾರಿಯನ್ನೂ ಮಾಡಿಕೊಂಡಿದ್ದಾರೆ. ಅವೈಸ್ ಅಹ್ಮದ್ ಅವರು ಆಲ್ದೂರು ಪಟ್ಟಣದ ರೋಸ್ ಬಡ್, ಅಕ್ಷರ ಪಬ್ಲಿಕ್ ಸ್ಕೂಲ್‌ನಲ್ಲಿ ಪ್ರಾಥಮಿಕ ಶಿಕ್ಷಣ ಪಡೆದಿದ್ದು, ಫ್ರೌಡಶಿಕ್ಷಣವನ್ನು ಆಲ್ದೂರಿನ ಪೂರ್ಣಪ್ರಜ್ಞ ಶಾಲೆಯಲ್ಲಿ ಮುಗಿಸಿದ್ದರು. ಹೆಚ್ಚಿನ ಶಿಕ್ಷಣವನ್ನು ಮಂಗಳೂರಿನಲ್ಲಿ ಪಡೆದಿದ್ದಾರೆ. ಸಿಇಟಿಯಲ್ಲಿ 477ನೇ ರ್ಯಾಂಕ್ ಪಡೆದು ಆರ್‌ವಿ ಕಾಲೇಜಿನಲ್ಲಿ ಸೀಟು ಪಡೆದುಕೊಂಡಿದ್ದ ಅವರು, ಜೆಇಇ ಪರೀಕ್ಷೆಯಲ್ಲಿ 2000ನೇ ರ್ಯಾಂಕ್ ಪಡೆದು ಭಾರತದ ನಂ.1 ನೀಟ್ ಕಾಲೇಜಿನಲ್ಲಿ ಸೀಟು ಪಡೆದುಕೊಂಡಿದ್ದರು. ನಂತರ ಭಾರತದ ಬಿಟ್ಸ್ -ಪಿಲಾನಿ (ಬಿರ್ಲಾ ಇನ್‌ಸ್ಟಿಟ್ಯೂಟ್‌ಆಫ್ ಟೆಕ್ನಾಲಜಿ ಆ್ಯಂಡ್ ಸೈನ್ಸ್) ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಉನ್ನತ ಶಿಕ್ಷಣ ಮುಂದುವರಿಸಿದರು. ಎಂಎಸ್ಸಿ ಮ್ಯಾಥಮೆಟಿಕ್ಸ್ ಪದವಿ ಪಡೆದ ಬಳಿಕ ‘ಪಿಕ್ಸೆಲ್’ ಎಂಬ ಕಂಪೆನಿಯನ್ನು ಹುಟ್ಟು ಹಾಕಿದ ಅವೈಸ್ ಅಹ್ಮದ್ ಈ ಮೂಲಕ ತನ್ನದೇ ಏರೋ ಸ್ಪೇಸ್ ಕಂಪೆನಿಯನ್ನು ಬೆಂಗಳೂರಿನಲ್ಲಿ ಆರಂಭಿಸಿ ಸದ್ಯ ಅಂತರಿಕ್ಷಕ್ಕೆ ಉಪಗ್ರಹಗಳನ್ನು ಉಡಾವಣೆ ಮಾಡುವ ಮಟ್ಟಕ್ಕೆ ಬೆಳೆದು ನಿಂತಿದ್ದಾರೆ.

ಬಾಲ್ಯದಿಂದಲೂ ಬ್ಯಾಹ್ಯಾಕಾಶದ ಬಗ್ಗೆ ಕುತೂಹಲ ಆಸಕ್ತಿ ಬೆಳೆಸಿಕೊಂಡಿದ್ದ ಅವೈಸ್ ಅವರು ಎಲನ್‌ಮಸ್ಕ್‌ನ ಏರೋಸ್ಪೇಸ್ ಕಂಪೆನಿ ‘ಸ್ಪೇಸ್ ಎಕ್ಸ್’ನಿಂದ ಪ್ರಭಾವಿತರಾಗಿದ್ದರು. ಭಾರತದಲ್ಲಿಯೂ ಇದೇ ರೀತಿಯ ಕಂಪೆನಿ ಪ್ರಾರಂಭಿಸಬೇಕೆಂಬ ಹೆಬ್ಬಯಕೆ ಹೊಂದಿದ್ದ ಅವರು ಅದಕ್ಕೆ ಪೂರಕವಾದ ವಿದ್ಯಾಭ್ಯಾಸ ಪಡೆದುಕೊಂಡು ತನ್ನದೇ ಆದ ಏರೋಸ್ಪೇಸ್ ಕಂಪೆನಿಯನ್ನು ಪ್ರಾಂರಭಿಸುವ ಮೂಲಕ ಬಾಲ್ಯದಲ್ಲಿ ಕಂಡ ಕನಸನ್ನು ಸಾಕಾರಗೊಳಿಸಿದ್ದಾರೆ. ತಾವು ನಿರ್ಮಿಸಿದ ಖಾಸಗಿ ಉಪಗ್ರಹವನ್ನು ಅಮೆರಿಕದಿಂದ ಯಶಸ್ವಿಯಾಗಿ ಉಡಾವಣೆ ಮಾಡುವ ಮೂಲಕ ಅವೈಸ್ ಅಹ್ಮದ್ ಅವರು ಚಿಕ್ಕಮಗಳೂರು ಜಿಲ್ಲೆ, ಕರ್ನಾಟಕ ಹಾಗೂ ದೇಶದ ಹೆಸರನ್ನು ಅಂತರ್‌ರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದಿದ್ದಾರೆ. ಅವೈಸ್ ಅವರ ಸಾಧನೆಗೆ ಖುದ್ದು ಪ್ರಧಾನಿ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದು, ಕರ್ನಾಟಕ ಸರಕಾರದ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಕೂಡ ಅವೈಸ್ ಸಾಧನೆಯನ್ನು ಕೊಂಡಾಡಿದ್ದಾರೆ. ಆದರೆ ಚಿಕ್ಕಮಗಳೂರು ಜಿಲ್ಲಾಡಳಿತವಾಗಲೀ ಜನಪ್ರತಿನಿಧಿಗಳ ಕಣ್ಣಿಗೆ ಅವೈಸ್ ಸಾಧನೆ ಇನ್ನೂ ಕಾಣದಿರುವುದು ವಿಪರ್ಯಾಸ ಎಂದು ಕಾಫಿನಾಡಿನ ಜನತೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನನ್ನ ಮಗ ತಯಾರಿಸಿದ ಪ್ರಥಮ ಖಾಸಗಿ ಉಪಗ್ರಹ ‘ಆನಂದ್’ ಅನ್ನು ಇಸ್ರೋದಿಂದಲೇ ಉಡಾವಣೆ ಮಾಡಬೇಕಿತ್ತು. ಆದರೆ, ಉಡಾವಣೆಗೆ ದಿನಾಂಕ ಸಿಕ್ಕಿರಲಿಲ್ಲ. ಆದರೆ, ಉದ್ಯಮಿಯೊಬ್ಬರ ಪ್ರಯೋಜಕತ್ವದಲ್ಲಿ ‘ಶಕುಂತಲಾ’ ಎಂಬ ಹೆಸರಿನ ಮತ್ತೊಂದು ಉಪಗ್ರಹವನ್ನು ತಯಾರಿಸಿ ಅದನ್ನು ಅಮೆರಿಕದ ಸ್ಪೇಸ್ ಎಕ್ಸ್‌ನಿಂದ ರಾತ್ರಿ 9:45ಕ್ಕೆ ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ. ಈ ಉಪಗ್ರಹ ಉಡಾವಣೆ ಯಶಸ್ವಿಯಾದ ದಿನ ಆಲ್ದೂರಿನಲ್ಲಿ ಕುಟುಂಬದವರು ಕೇಕ್ ಕತ್ತರಿಸಿ ಸಂಭ್ರಮಿಸಿದ್ದೆವು. ಉಪಗ್ರಹ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಈ ಸಾಧನೆಗೆ ದೇಶವೇ ಅವನನ್ನು ಕೊಂಡಾಡುತ್ತಿದೆ. ನಮ್ಮ ದೇಶದ ಪ್ರತಿಭೆಗಳಿಗೆ ನಮ್ಮ ದೇಶದಲ್ಲೇ ಪ್ರೋತ್ಸಾಹ ದೊರೆತು ದೇಶದ ಕೀರ್ತಿ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಬೆಳಗುವಂತಾಗಬೇಕು.

- ನದೀಮ್ ಅಹ್ಮದ್, ಅವೈಸ್ ಅಹ್ಮದ್ ತಂದೆ

ಇದನ್ನೂ ಓದಿ... ಕರ್ನಾಟಕದ ಅವೈಸ್‌ ಅಹ್ಮದ್‌ ಸಾಧನೆ: ಎಲಾನ್‌ ಮಸ್ಕ್‌ ರ ಸ್ಪೇಸ್‌ಎಕ್ಸ್‌ ಮೂಲಕ ಭಾರತದ ಮೊದಲ ವಾಣಿಜ್ಯ ಉಪಗ್ರಹ ಉಡಾವಣೆ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News