ಪಿಯುಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಸಮವಸ್ತ್ರ ಕಡ್ಡಾಯ ಸುತ್ತೋಲೆ ಹೊರಡಿಸಿದ ಶಿಕ್ಷಣ ಇಲಾಖೆ

Update: 2022-04-07 15:43 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಎ.7: ದ್ವೀತಿಯ ಪಿಯುಸಿ ಮುಖ್ಯ ಪರೀಕ್ಷೆಯು ಎ.22ರಿಂದ ಪ್ರಾರಂಭವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪರೀಕ್ಷೆಗೆ ಹಾಜರಾಗುವ ಸರಕಾರಿ ಶಾಲೆಯ ಎಲ್ಲ ವಿದ್ಯಾರ್ಥಿಗಳು ಶಾಲಾ ಸಮವಸ್ತ್ರವನ್ನು ಧರಿಸಿ ಹಾಜರಾಗಬೇಕು ಹಾಗೂ ಖಾಸಗಿ ಶಾಲೆಗಳಲ್ಲಿ ಆಯಾ ಆಡಳಿತ ಮಂಡಳಿಗಳು ನಿರ್ಧರಿಸುವ ಸಮವಸ್ತ್ರವನ್ನು ವಿದ್ಯಾರ್ಥಿಗಳು ಧರಿಸತಕ್ಕದ್ದು ಎಂದು ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದ್ದು, ಸುತ್ತೋಲೆಯಲ್ಲಿ ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ರಾಜ್ಯ ಹೈಕೋರ್ಟ್ ನೀಡಿದ ಸರಕಾರದ ಸಮವಸ್ತ್ರ ಆದೇಶವನ್ನು ಎತ್ತಿ ಹಿಡಿದಿದೆ. 

ರಾಜ್ಯದ ಎಲ್ಲಾ ಸರಕಾರಿ ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ವಸ್ತ್ರ ಸಂಹಿತೆ ಕುರಿತು ಮಾ.5ರಂದು ಹೊರಡಿಸಿರುವ ಸರಕಾರದ ಆದೇಶ ಸಂಖ್ಯೆ: ಇಪಿ 14 ಎಸ್‍ಹೆಚ್‍ಹೆಚ್ 2022, ಕರ್ನಾಟಕ ಶಿಕ್ಷಣ ಕಾಯ್ದೆ 1983, ಕಲಂ 133 ಉಪ ಕಂಡಿಕೆ(2) ಹಾಗೂ ಕಲಂ 7(1)(i), 7(2)(ಜಿ)(ವಿ) ಮತ್ತು ಕರ್ನಾಟಕ ಶಿಕ್ಷಣ ಸಂಸ್ಥೆಗಳ (ವರ್ಗೀಕರಣ, ನಿಯಂತ್ರಣ, ಪಠ್ಯಕ್ರಮ ನಿಗದಿಪಡಿಸುವಿಕೆ, ಇತರೆ) ನಿಯಮಗಳು 1995ರ ನಿಯಮ 11ರಲ್ಲಿ ಪ್ರದತ್ತವಾಗಿರುವ ಅಧಿಕಾರದನ್ವಯ ರಾಜ್ಯದ ಎಲ್ಲ ಸರಕಾರಿ ಶಾಲೆಗಳಲ್ಲಿ ಸರಕಾರವು ನಿಗದಿ ಪಡಿಸಿರುವ ಶಾಲಾ ಸಮವಸ್ತ್ರವನ್ನು ವಿದ್ಯಾರ್ಥಿಗಳು ಕಡ್ಡಾಯವಾಗಿ ಧರಿಸತಕ್ಕದ್ದು ಹಾಗೂ ಖಾಸಗಿ ಶಾಲೆಗಳಲ್ಲಿ ಆಯಾ ಆಡಳಿತ ಮಂಡಳಿಗಳು ನಿರ್ಧರಿಸುವ ಸಮವಸ್ತ್ರವನ್ನು ವಿದ್ಯಾರ್ಥಿಗಳು ಧರಿಸತಕ್ಕದ್ದು ಎಂದು ಸುತ್ತೋಲೆಯಲ್ಲಿ ಸರಕಾರವು ಆದೇಶಿಸಿದೆ. 

ಹಾಗೆಯೇ ಮಾ.3ರಂದು ಉಚ್ಚ ನ್ಯಾಯಾಲಯವು ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ರಿಟ್ ಅರ್ಜಿಯನ್ನು ವಿಚಾರಣೆ ನಡೆಸಿ ನೀಡುವ ತೀರ್ಪು ಸೇರಿದಂತೆ ಇತರೆ ಪ್ರಕರಣಗಳಲ್ಲಿ ನೀಡಿರುವ ತೀರ್ಪಿನಂತೆ ಸರಕಾರದ ಆದೇಶವನ್ನು ಸಿಂಧುಗೊಳಿಸಿರುತ್ತದೆ ಎಂದು ಸುತ್ತೋಲೆಯಲ್ಲಿ ಪ್ರಸ್ತಾಪಿಸಲಾಗಿದೆ. 

ಈ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಸರಕಾರಿ ಕಾಲೇಜುಗಳಲ್ಲಿ ಸರಕಾರವು ನಿಗದಿಪಡಿಸಿರುವ ಸಮವಸ್ತ್ರವನ್ನು ಧರಿಸಿ ವಿದ್ಯಾರ್ಥಿಗಳು ಪಿಯುಸಿ ಮುಖ್ಯ ಪರೀಕ್ಷೆಗೆ ಪ್ರವೇಶ ಪತ್ರದೊಂದಿಗೆ ಪರೀಕ್ಷಾ ಕೇಂದ್ರಗಳಿಗೆ ಹಾಜರಾಗುವಂತೆ ಶಿಕ್ಷಣ ಇಲಾಖೆಯ ಸರಕಾರದ ಅಧೀನ ಕಾರ್ಯದರ್ಶಿ ಸುತ್ತೋಲೆಯಲ್ಲಿ ಸ್ಪಷ್ಟಪಡಿಸಿದ್ದಾರೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News