ಕೋಮುಸೌಹಾರ್ದ ಕಾಪಾಡಿ: ಹೈಕೋರ್ಟ್‍ಗೆ ವಕೀಲರ ಮನವಿ
ಬೆಂಗಳೂರು, ಎ.7: ಮುಸ್ಲಿಮರ ಜೊತೆ ವ್ಯಾಪಾರ ನಡೆಸದಂತೆ ಹಿಂದೂಗಳನ್ನು ಪ್ರಚೋದಿಸಿ ಉದ್ದೇಶಪೂರ್ವಕವಾಗಿ ಅಸಹ್ಯಕರ ಮತ್ತು ದ್ವೇಷದ ಮಾತುಗಳನ್ನು ಆಡುತ್ತಿರುವ ಜನಪ್ರತಿನಿಧಿಗಳ ವಿರುದ್ಧ ಕೂಡಲೇ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಳ್ಳಬೇಕು ಹಾಗೂ ಕೋಮು ಸೌಹಾರ್ದತೆಯನ್ನು ಕಾಪಾಡಲು ಸುಪ್ರೀಂಕೋರ್ಟ್ ಹೊರಡಿಸಿರುವ ಮಾರ್ಗಸೂಚಿಗಳನ್ನು ಕೂಡಲೇ ಜಾರಿಗೆ ತರಲು ನಿರ್ದೇಶಿಸಬೇಕೆಂದು ಅರ್ಜಿದಾರರ ಪರ ವಕೀಲರು ಹೈಕೋರ್ಟ್‍ಗೆ ಗುರುವಾರ ಮನವಿ ಮಾಡಿದ್ದಾರೆ.
ಈ ಕುರಿತಂತೆ ಮಂಡ್ಯ ಜಿಲ್ಲೆಯ ನಾಗ ಮಂಗಲದ ಮುಹಮ್ಮದ ಖಲೀಲುಲ್ಲಾ ಸಲ್ಲಿಸಿರುವ ಅರ್ಜಿ ವಿಚಾರಣೆ ನ್ಯಾಯಮೂರ್ತಿ ಎಸ್.ಜಿ.ಪಂಡಿತ ಅವರಿದ್ದ ಏಕಸದಸ್ಯ ನ್ಯಾಯಪೀಠದಲ್ಲಿ ನಡೆಯಿತು.
ಅರ್ಜಿದಾರರ ಪರ ವಕೀಲರು ವಾದಿಸಿ, ಪ್ರಚೋದನಾಕಾರಿ ಹೇಳಿಕೆ ನೀಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳದ ಸರಕಾರಿ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಪ್ರಚೋದನಾಕಾರಿ ಹೇಳಿಕೆ ಮತ್ತು ಹತ್ಯೆ ಪ್ರಕರಣಗಳ ಕುರಿತಂತೆ ವಿಚಾರಣೆ ನಡೆಸಲು ಪ್ರತಿ ಜಿಲ್ಲೆಯಲ್ಲಿ ನ್ಯಾಯಾಲಯವನ್ನು ಸ್ಥಾಪಿಸಲು ಹಾಗೂ ಆರು ತಿಂಗಳೊಳಗೆ ವಿಚಾರಣೆಯನ್ನು ಪೂರ್ಣಗೊಳಿಸಲು ಪೀಠಕ್ಕೆ ಮನವಿ ಮಾಡಿದರು. ಅರ್ಜಿದಾರರ ಪರವಾಗಿ ರಹಮತ್ ಉಲ್ಲಾ ಕೊತ್ವಾಲ್ ವಾದಿಸಿದರು.
ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ, ಗೃಹ ಮತ್ತು ಕಾನೂನು ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು, ಅಲ್ಪ ಸಂಖ್ಯಾತರ ಆಯೋಗದ ಕಾರ್ಯದರ್ಶಿ, ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿ ವಾಲಯದ ಕಾರ್ಯದರ್ಶಿ ಮತ್ತು ರಾಜ್ಯ ಡಿಜಿ– ಐಜಿಗಳನ್ನು ಪ್ರತಿವಾದಿಗಳನ್ನಾಗಿ ಕಾಣಿಸಲಾಗಿದೆ.
ಅರ್ಜಿಯಲ್ಲಿ ಏನಿದೆ?: ‘ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಸಂಸದ ಪ್ರತಾಪ ಸಿಂಹ, ತೇಜಸ್ವಿ ಸೂರ್ಯ, ರಾಜ್ಯದ ಸಚಿವ ಕೆ.ಎಸ್.ಈಶ್ವರಪ್ಪ, ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ, ಸಿ.ಟಿ.ರವಿ, ಎಂ.ಪಿ.ರೇಣುಕಾಚಾರ್ಯ, ಹಿಂದೂಪರ ಸಂಘಟನೆಯ ಋಷಿ ಕುಮಾರ ಸ್ವಾಮೀಜಿ (ಕಾಳಿಸ್ವಾಮಿ), ಶ್ರೀರಾಮ ಸೇನೆ ಮುಖಂಡ ಪ್ರಮೋದ ಮುತಾಲಿಕ, ಯುವ ಬ್ರಿಗೇಡ್ ಸಂಘಟನೆ ಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಮತ್ತಿ ತರರು ಮುಸ್ಲಿಂ ಸಮುದಾಯದ ವಿರುದ್ಧದ್ವೇಷ ಭಾಷಣ ಮಾಡುತ್ತಿದ್ದಾರೆ’ ಎಂದು ಆರೋಪಿಸಲಾಗಿದೆ.