ಬಿಡಿಎ ಆಯುಕ್ತರ ನೇಮಕದಲ್ಲಿ ಮೇಲ್ನೋಟಕ್ಕೆ ತಪ್ಪು ಕಾಣುತ್ತಿದೆ: ಹೈಕೋರ್ಟ್

Update: 2022-04-07 17:14 GMT

ಬೆಂಗಳೂರು, ಎ.7: ಬಿಡಿಎ ಆಯುಕ್ತರನ್ನಾಗಿ ಕೆಎಎಸ್ ಶ್ರೇಣಿಯಿಂದ ಐಎಎಸ್‍ಗೆ ಪದೋನ್ನತಿ ಪಡೆದಿರುವ ಅಧಿಕಾರಿ ಎಂ.ಬಿ.ರಾಜೇಶ್‍ಗೌಡ ಅವರ ನೇಮಕಾತಿಯಲ್ಲಿ ಮೇಲ್ನೋಟಕ್ಕೆ ತಪ್ಪು ಕಾಣುತ್ತಿರುವ ಸಂಬಂಧ ತುರ್ತಾಗಿ ಆಕ್ಷೇಪಣೆ ಸಲ್ಲಿಸುವಂತೆ ಸರಕಾರಕ್ಕೆ ಹೈಕೋರ್ಟ್ ಸೂಚಿಸಿದೆ.

ಬಿಡಿಎ ಆಯುಕ್ತರನ್ನಾಗಿ ರಾಜೇಶ್‍ಗೌಡ ಅವರನ್ನು ನೇಮಕ ಮಾಡಿ ರಾಜ್ಯ ಸರಕಾರ ಹೊರಡಿಸಿರುವ ಆದೇಶ ರದ್ದುಪಡಿಸುವಂತೆ ಕೋರಿ ವಕೀಲ ಜಿ.ಮೋಹನ್‍ಕುಮಾರ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ಪೀಠ ಈ ಸೂಚನೆ ನೀಡಿದೆ.

ಬಿಡಿಎ ಆಯುಕ್ತರ ನೇಮಕದಲ್ಲಿ ಮೇಲ್ನೋಟಕ್ಕೆ ಏನೋ ತಪ್ಪಾದಂತೆ ತೋಚುತ್ತದೆ. ಹೀಗಾಗಿ, ಸರಕಾರ ತನ್ನ ನಿಲುವೇನು ಎಂಬುದು ತಿಳಿಸಬೇಕು. ಕಾಲಾವಕಾಶ ನೀಡಲು ಅನುಮತಿ ನೀಡಲಾಗದು ಎಂದು ನ್ಯಾಯಪೀಠ ಹೇಳಿತು. ಇದೇ ವೇಳೆ ರಾಜ್ಯ ಸರಕಾರ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ವಿಭಾಗದ ಅಧೀನ ಕಾರ್ಯದರ್ಶಿ ಮತ್ತು ರಾಜೇಶ್ ಗೌಡ ಪರ ವಕೀಲರಾದ ಸುಮನಾ ನಾಗಾನಂದ್ ಅವರಿಗೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.

ಅರ್ಜಿದಾರರ ಪರ ವಾದ ಮಂಡಿಸಿದ ವಕೀಲರು, ಬಿಡಿಎ ಕಾಯಿದೆ ಸೆಕ್ಷನ್ 12ರ ಪ್ರಕಾರ ಪ್ರಾದೇಶಿಕ ಆಯುಕ್ತರ ಶ್ರೇಣಿಗಿಂತ ಕೆಳಗಿರುವವರನ್ನು ಬಿಡಿಎ ಆಯುಕ್ತರನ್ನಾಗಿ ನೇಮಕ ಮಾಡುವಂತಿಲ್ಲ ಎಂದು ಹೇಳಲಾಗಿದೆ. ಹಾಲಿ ಬಿಡಿಎ ಆಯುಕ್ತ ರಾಜೇಶ್ ಗೌಡ ಅವರು ಕೆಎಎಸ್ ಅಧಿಕಾರಿಯಾಗಿದ್ದು, 2018ರಲ್ಲಿ ಐಎಎಸ್ ಶ್ರೇಣಿಗೆ ಪದೋನ್ನತಿ ಪಡೆದಿದ್ದಾರೆ. ಪ್ರಾದೇಶಿಕ ಆಯುಕ್ತರಾಗಲು 15-16 ವರ್ಷ ಸೇವೆ ಸಲ್ಲಿಸಿರಬೇಕು ಎಂದು ವಿವರಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಬಿಡಿಎ ಆಯುಕ್ತರಾಗುವ ಸಂದರ್ಭದಲ್ಲಿ ರಾಜೇಶ್ ಗೌಡ ಅವರು ಪ್ರಾದೇಶಿಕ ಆಯುಕ್ತರ ಶ್ರೇಣಿಯನ್ನು ಹೊಂದಿದ್ದರೆ ಎಂದು ಪ್ರಶ್ನಿಸಿದರು. ಇದಕ್ಕೆ ಇಲ್ಲ ಎಂದು ವಕೀಲರು ಉತ್ತರಿಸಿದರು. ಕೆಎಎಸ್‍ನಿಂದ ಪದೋನ್ನತಿ ಪಡೆದಿದ್ದ ಎಂ.ಬಿ.ರಾಜೇಶ್ ಗೌಡ ಅವರನ್ನು ಬಿಡಿಎ ಆಯುಕ್ತ ಹುದ್ದೆಗೆ 2021ರ ಎ.30ರಂದು ಸರಕಾರ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ವಕೀಲ ಮೋಹನ್ ಕುಮಾರ್ ಹೈಕೋರ್ಟ್‍ನಲ್ಲಿ ಅರ್ಜಿ ಸಲ್ಲಿಸಿದ್ದರು.

ಅಧ್ಯಕ್ಷರ ನೇಮಕಾತಿ: ಬಿಡಿಎ ಅಧ್ಯಕ್ಷರಾಗಿ ಶಾಸಕ ಎಸ್.ಆರ್. ವಿಶ್ವನಾಥ್ ಅವರನ್ನು ನೇಮಕ ಮಾಡಿರುವ ಕ್ರಮ ಪ್ರಶ್ನಿಸಿ ನಗರದ ವಕೀಲ ಎ.ಎಸ್. ಹರೀಶ್ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಜುಲೈ 27ಕ್ಕೆ ಮುಂದೂಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News