ಅಮೃತಾ ಪ್ರೀತಂರನ್ನು ಸನಿಹಕ್ಕೆ ತಂದ ರಂಗಪ್ರಸ್ತುತಿ ನನ್ನ ಪ್ರೀತಿಯ ಅಮೃತಾ

Update: 2022-04-08 01:44 GMT

ಭಾರತೀಯ ಸಾಹಿತ್ಯದ ಅನರ್ಘ್ಯ ರತ್ನಗಳ ಪೈಕಿ ಮುಂಚೂಣಿಯಲ್ಲಿ ನಿಲ್ಲುವ ವ್ಯಕ್ತಿ ಹಿಂದಿ ಮತ್ತು ಉರ್ದು ಭಾಷೆಯ ಕವಯಿತ್ರಿ, ಲೇಖಕಿ, ಕಾದಂಬರಿಗಾರ್ತಿ ಅಮೃತಾ ಪ್ರೀತಂ. 1919ರ ಆಗಸ್ಟ್ 31ರಂದು ಈಗ ಪಾಕಿಸ್ತಾನದಲ್ಲಿರುವ ಗುಂಜನ್‌ವಾಲಾದಲ್ಲಿ ಜನಿಸಿದ ಅಮೃತಾ ದೇಶದ ವಿಭಜನೆಯ ನಂತರ ಬೆಳೆದಿದ್ದು ಸ್ವತಂತ್ರ ಭಾರತದಲ್ಲಿ. ವಿಭಜನೆಯ ಸಂದರ್ಭದಲ್ಲಿ ಲಾಹೋರ್‌ನಿಂದ ಹೊಸದಿಲ್ಲಿಗೆ ಬಂದ ಅಮೃತಾ ಪ್ರೀತಂ ತಮ್ಮ ವ್ಯಕ್ತಿಗತ ಬದುಕಿನಲ್ಲಿ ಎದುರಿಸಿದ ಸವಾಲುಗಳು ಹಲವಾರು. ಎಳೆಯ ವಯಸ್ಸಿನಲ್ಲೇ ಪೂರ್ವ ನಿಶ್ಚಿತ ವಿವಾಹ ಬಂಧನಕ್ಕೊಳಗಾದ ಅಮೃತಾ ತಮ್ಮ ವೈವಾಹಿಕ ಬದುಕನ್ನು ಹೆಚ್ಚು ವಿಸ್ತರಿಸಿಕೊಳ್ಳಲಿಲ್ಲ. ಭಗ್ನಗೊಂಡ ಬದುಕಿನ ಬವಣೆಯೊಂದಿಗೇ ತಮ್ಮ ಸುತ್ತಲಿನ ಸಮಾಜದಲ್ಲಿದ್ದ ಮಾನಸಿಕ ಬೌದ್ಧಿಕ ತುಮುಲಗಳನ್ನು, ಸಾಮಾಜಿಕ ತಲ್ಲಣಗಳನ್ನು ಮತ್ತು ಸಾಂಸ್ಕೃತಿಕ ಪಲ್ಲಟಗಳನ್ನು ತಮ್ಮ ಕಾವ್ಯದ ಮೂಲಕ, ಕತೆ ಕಾದಂಬರಿಯ ಮೂಲಕ ಅಭಿವ್ಯಕ್ತಪಡಿಸಿದ ಅದ್ಭುತ ಕವಯಿತ್ರಿ ಅಮೃತಾ ಪ್ರೀತಂ. 100ಕ್ಕೂ ಹೆಚ್ಚು ಸಾಹಿತ್ಯ ಕೃತಿಗಳನ್ನು ರಚಿಸಿದ ಅಮೃತಾ ಕಾವ್ಯ, ಕಾಲ್ಪನಿಕ ಕಾದಂಬರಿ, ಜೀವನ ಚರಿತ್ರೆ, ಪ್ರಬಂಧಗಳನ್ನು ರಚಿಸಿದ್ದೇ ಅಲ್ಲದೆ ಪಂಜಾಬಿನ ಜಾನಪದ ಗೀತೆಗಳ ಸಂಗ್ರಹವನ್ನೂ ಪ್ರಕಟಿಸಿದ್ದರು.

18ನೆಯ ಶತಮಾನದ ವಾರಿಸ್ ಶಾ ಕುರಿತು ಅಮೃತಾ ಪ್ರೀತಂ ಬರೆದ ಕವನಗಳಲ್ಲಿ ಭಾರತದ ವಿಭಜನೆಯ ಸಂದರ್ಭದ ಕ್ರೌರ್ಯ, ಹಿಂಸೆ ಮತ್ತು ಅಮಾನುಷತೆಯ ಬಗ್ಗೆ ಆಕ್ರೋಶ ವ್ಯಕ್ತವಾಗಿತ್ತು. ವೈವಾಹಿಕ ಬಂಧನದಿಂದ ವಿಮುಕ್ತಿ ಪಡೆದ ನಂತರ ಮಹಿಳೆಯರ ಜ್ವಲಂತ ಸಮಸ್ಯೆಗಳ ಬಗ್ಗೆ, ಮಹಿಳಾ ದೌರ್ಜನ್ಯಗಳ ವಿರುದ್ಧ ದಿಟ್ಟ ದನಿ ಎತ್ತಿದ್ದರು. ಪದ್ಮಶ್ರೀ, ಪದ್ಮ ವಿಭೂಷಣ, ಸಾಹಿತ್ಯ ಅಕಾಡಮಿ ಮತ್ತು ಪ್ರತಿಷ್ಠಿತ ಜ್ಞಾನಪೀಠ ಪ್ರಶಸ್ತಿಗೂ ಭಾಜನರಾಗಿದ್ದ ಅಮೃತಾ ಪ್ರೀತಂ ತಮ್ಮ ಕಾವ್ಯಗಳಲ್ಲಿ ಮನುಷ್ಯ ಪ್ರೀತಿ, ಮನುಷ್ಯರ ನಡುವಿನ ಭಾವನಾತ್ಮಕ ಸಂಬಂಧಗಳು ಮತ್ತು ಹೆಣ್ಣಿನ ಒಳಮನಸ್ಸಿನ ತುಮುಲಗಳನ್ನು ಅದ್ಭುತವಾಗಿ ಹಿಡಿದಿಡುತ್ತಿದ್ದರು. ಆ ಕಾಲಘಟ್ಟದ ಎಡಪಂಥೀಯ ಕವಿಗಳಲ್ಲಿ ಪ್ರಮುಖರಾಗಿದ್ದ ಸಾಹಿರ್ ಲುಧಿಯಾನ್ವಿ ಅವರ ಬಗ್ಗೆ ವಿಶೇಷ ಒಲವು ಹೊಂದಿದ್ದ ಅಮೃತಾ, ಸಾಹಿರ್‌ರೊಂದಿಗೆ ಹೊಂದಿದ್ದ ಭಾವನಾತ್ಮಕ ಪ್ರೀತಿ ಒಂದು ಅಮರ ಕಾವ್ಯದಂತೆಯೇ ಕಾಣುತ್ತದೆ. ಮನುಜ ಸಂಬಂಧಗಳನ್ನು ಹೊಸೆಯಲು ಅವಶ್ಯವಾದ ಉತ್ಕಟ ಪ್ರೀತಿ ಮತ್ತು ಸ್ನೇಹವನ್ನು ಸಾಕಾರಗೊಳಿಸಲು ದೈಹಿಕ ಸಂಬಂಧಗಳೇ ಬೇಕೆಂದಿಲ್ಲ ಎನ್ನುವುದನ್ನು ಅಮೃತಾ-ಸಾಹಿರ್ ಅವರ ಭಾವನಾತ್ಮಕ ಸ್ನೇಹದಲ್ಲಿ ಗುರುತಿಸಬಹುದು. ಆಕೆಯ ಆತ್ಮಕತೆ ‘ರಸೀದಿ ಟಿಕೆಟ್’ ಕೃತಿಯಲ್ಲಿ ತಮ್ಮ ಹಾಗೂ ಸಾಹಿರ್ ನಡುವಿನ ಭಾವನಾತ್ಮಕ ಸ್ನೇಹ ಸಂಬಂಧವನ್ನು ಅಮೃತಾ ಕಟ್ಟಿಕೊಡುತ್ತಾರೆ.

 ಸಾಹಿರ್ ತಮ್ಮ ಬದುಕಿನ ಒಂದು ಭಾಗವಾಗುವುದು ಸಾಧ್ಯವೇ ಇಲ್ಲ ಎಂಬ ವಾಸ್ತವವನ್ನು ಅರಿತಿದ್ದರೂ ಆ ಕ್ರಾಂತಿಕಾರಿ ಕವಿಯೊಡನೆ ಅಮೂರ್ತ ಪ್ರೀತಿಯನ್ನು ಹೊಂದಿದ್ದ ಅಮೃತಾ ಪ್ರೀತಂ, ಗುಲ್ಜಾರ್‌ರ ಕವಿತೆಯ ‘‘ಪ್ರೀತಿಯನ್ನು ಪ್ರೀತಿಯಾಗಿಯೇ ಇರಲಿ ಬಿಡಿ ಅದಕ್ಕೊಂದು ಹೆಸರನ್ನೇಕೆ ಕೊಡುವಿರಿ’’ ಎಂಬ ಉದಾತ್ತ ತತ್ವಕ್ಕೆ ಬದ್ಧರಾಗಿದ್ದವರು. ಅಮೃತಾ ಅವರ ಅಕ್ಷರ ಬದುಕಿನ ಒಂದು ಭಾಗವಾಗಿಯೇ ಉಳಿದುಹೋದ ಕ್ರಾಂತಿಕಾರಿ ಕವಿ ಸಾಹಿರ್ ಮಾನವ ಪ್ರೀತಿ, ವಿರಹ, ದುಃಖ, ಹೆಣ್ಣಿನ ಸೌಂದರ್ಯ, ಪ್ರಕೃತಿಯ ಸೌಂದರ್ಯೋಪಾಸನೆ ಹೀಗೆ ಮಾನವನ ಎಲ್ಲ ರೀತಿಯ ಭಾವನೆಗಳಿಗೂ ಮಿಡಿದ ಒಬ್ಬ ಮಹಾನ್ ಅಕ್ಷರ ಸಂತ. ಆ ಕಾಲಘಟ್ಟದ ಯುವ ಪೀಳಿಗೆಯ ಸಾಮಾಜಿಕ ತಲ್ಲಣಗಳಿಗೆ, ಸಮಾಜವನ್ನು ಪ್ರಕ್ಷುಬ್ಧಗೊಳಿಸಿದ್ದ ರಾಜಕೀಯ ಪಲ್ಲಟಗಳಿಗೆ ಮತ್ತು ಸಾಂಸ್ಕೃತಿಕ ಬಿಕ್ಕಟ್ಟುಗಳಿಗೆ ತಮ್ಮ ಅಕ್ಷರಗಳ ಮೂಲಕವೇ ಕಾವ್ಯ ಸ್ಪರ್ಶ ನೀಡಿದ ಸಾಹಿರ್ ತಮ್ಮ ಮಾರ್ಕ್ಸ್‌ವಾದಿ ಚಿಂತನೆಗಳ ನೆಲೆಯಲ್ಲೇ ಕಾವ್ಯ ಕೃಷಿ ನಡೆಸಿದ ಮೇರು ಕವಿ. ಇಬ್ಬರ ನಡುವೆ ಅಮೃತಾ ಪ್ರೀತಂ ಅವರ ಬದುಕಿನ ಒಂದು ಭಾಗವಾಗಿ, ನಾಲ್ಕು ದಶಕಗಳ ಕಾಲ ಅವರೊಡನೆ ಸ್ನೇಹಿತನಾಗಿಯೇ ಬಾಳಿದ ಲೇಖಕ, ಕಲಾವಿದ ಇಮ್ರೋಷ್ ಮತ್ತೊಂದು ಅದ್ಭುತ ವ್ಯಕ್ತಿತ್ವ. ದೈಹಿಕ ಆಕರ್ಷಣೆ ಮತ್ತು ಉತ್ಕಟ ಭಾವನೆಗಳಿಂದ ಹೊರತಾಗಿಯೂ ಮನುಷ್ಯ ಸಂಬಂಧಗಳು ಶಾಶ್ವತವಾಗಿ ಏರ್ಪಡಲು ಸಾಧ್ಯ ಎಂದು ನಿರೂಪಿಸುವ ನಿಟ್ಟಿನಲ್ಲಿ ಅಮೃತಾ ಪ್ರೀತಂ ಅವರ ಜೀವನ ಪಯಣ ಸಾಗುತ್ತದೆ. ಸಾರ್ವಜನಿಕ ವಲಯದಲ್ಲಿ ಹಲವು ರೀತಿಯ ಟೀಕೆ, ವಿಮರ್ಶೆ ವ್ಯಕ್ತಿಗತ ನಿಂದನೆಗಳನ್ನು ಎದುರಿಸಿದರೂ, ಅಮೃತಾ ದಿಟ್ಟತನದಿಂದ ಅಂತಿಮವಾಗಿ ತಮ್ಮ ಜೀವನ ಪ್ರೀತಿ ಮತ್ತು ಮನುಷ್ಯ ಸಂಬಂಧಗಳ ಸಾರ್ಥಕತೆಗೆ ಸಾಕ್ಷಿಪ್ರಜ್ಞೆಯಾಗಿ ನಿಲ್ಲುತ್ತಾರೆ.

ಈ ಮಹಾನ್ ಕವಯಿತ್ರಿಯ ಜೀವನವನ್ನು ಮತ್ತು ಆಕೆಯ ಬದುಕಿನ ಭಾಗವಾಗಿದ್ದ ಸಾಹಿರ್ ಮತ್ತು ಇಮ್ರೋಷ್ ಅವರ ವ್ಯಕ್ತಿತ್ವಗಳನ್ನು 105 ನಿಮಿಷಗಳ ಒಂದು ನಾಟಕದ ಮೂಲಕ ಕಟ್ಟಿಕೊಡುವ ಪ್ರಯತ್ನದಲ್ಲಿ ಪ್ರೊ. ಎಸ್.ಆರ್.ರಮೇಶ್ ಯಶಸ್ವಿಯಾಗಿದ್ದಾರೆ. ಮೈಸೂರಿನ ಪರಿವರ್ತನ ರಂಗ ಸಮಾಜ ಪ್ರಸ್ತುತಪಡಿಸಿದ ‘‘ನನ್ನ ಪ್ರೀತಿಯ ಅಮೃತಾ’’ ನಾಟಕವನ್ನು ನೋಡಿ ಹೊರಬಂದಾಗ ಮನದಾಳದಲ್ಲಿ ಉಳಿಯುವ ಆ ಸಂಭಾಷಣೆಗಳು, ಕಾವ್ಯದ ತುಣುಕುಗಳು, ನೆನಪುಗಳ ಓರಣ ಮತ್ತು ಮನುಜ ಸಂಬಂಧಗಳ ಹೂರಣ ವರ್ಣಿಸಲು ಪದಗಳು ಸಾಲದು. ಸಾಹಿರ್ ಅವರ ಮೂಲ ಉರ್ದು ಶಾಯರಿಗಳನ್ನು ಉರ್ದು ಅರ್ಥವಾಗದವರಿಗಾಗಿ ಕನ್ನಡೀಕರಿಸಬೇಕಿತ್ತು ಎನಿಸಿದರೂ, ನಾಟಕದ ಸೊಗಡು ಉಳಿಸಿಕೊಳ್ಳುವ ದೃಷ್ಟಿಯಿಂದ ಅದು ಉರ್ದು ಭಾಷೆಯಲ್ಲೇ ಇರಬೇಕು ಎನಿಸುತ್ತದೆ. ಮಾನವ ಸಂಬಂಧಗಳನ್ನು ಬಿಂಬಿಸುವ ಉತ್ಕಟ ಭಾವನೆಗಳನ್ನು ಅಭಿವ್ಯಕ್ತಗೊಳಿಸುವಾಗ ಸಾಹಿರ್ ಬಳಸುವ ಪದಗಳು, ಸಾಲುಗಳು ತಮ್ಮದೇ ಆದ ಭಾಷಿಕ ಸೆಲೆಯನ್ನು ಹೊಂದಿರುವುದರಿಂದ ಇದು ಅಪೇಕ್ಷಣೀಯ.

ಪ್ರೇಕ್ಷಕರನ್ನು ಅಮೃತಾ ಪ್ರೀತಂ ಅವರ ಜೀವನ ಪಯಣದೊಡನೆ ಕರೆದೊಯ್ಯುವ ನಿರ್ದೇಶಕ ಎಸ್.ಆರ್. ರಮೇಶ್ ಮತ್ತು ಅವರ ತಂಡದ ಪ್ರಯತ್ನ ನಿಜಕ್ಕೂ ಶ್ಲಾಘನೀಯ. ಯುವತಿಯಾಗಿ, ವಿವಾಹಿತಳಾಗಿ, ವಯಸ್ಕಳಾಗಿ, ವೃದ್ಧೆಯಾಗಿ ಅಮೃತಾ ಅವರ ಪಾತ್ರ ನಿರ್ವಹಿಸಿರುವ ತೇಜಸ್ವಿನಿ ಜೋಯಿಸ್ ತಮ್ಮ ಸಂಭಾಷಣೆಯ ಶೈಲಿ ಮತ್ತು ಭಾವನಾತ್ಮಕ ನಟನೆಯಿಂದ ಗಮನ ಸೆಳೆಯುತ್ತಾರೆ. ನಾಟಕ ದೃಶ್ಯಗಳ ಪ್ರತಿಯೊಂದು ಫ್ರೇಮ್‌ನಲ್ಲೂ ತಮ್ಮ ಭಾವಾಭಿನಯದ ಮೂಲಕ, ಆ ಸನ್ನಿವೇಶಕ್ಕೆ ಅವಶ್ಯವಾದ ಉತ್ಕಟತೆ ಮತ್ತು ಭಾವುಕ ಸ್ಪರ್ಶ ನೀಡುವಲ್ಲಿ ತೇಜಸ್ವಿನಿ ಯಶಸ್ವಿಯಾಗಿದ್ದಾರೆ. ಹೆಚ್ಚಿನಂಶ ಆಂತರಿಕ ಭಾವನೆಗಳ ಉತ್ಕರ್ಷವನ್ನೇ ಬಿಂಬಿಸಬೇಕಾದ ಸನ್ನಿವೇಶಗಳಲ್ಲೂ ಅಮೃತಾ ಪಾತ್ರಧಾರಿಣಿ ಗಮನಸೆಳೆಯುತ್ತಾರೆ. ಮುಖ್ಯವಾಗಿ ಕಾವ್ಯದ ಸಾಲುಗಳನ್ನು ಉದ್ಧರಿಸುವಾಗ ಅಗತ್ಯವಾದ ಭಾವನೆಗಳನ್ನು ಸ್ಫುರಿಸುವಲ್ಲಿ ತೇಜಸ್ವಿನಿ ಅವರ ಪಾತ್ರನಿರ್ವಹಣೆ ಮೆಚ್ಚುವಂತಹುದು.

ಸಾಹಿರ್ ಪಾತ್ರಧಾರಿ ದ್ವಾರಕಾನಾಥ್, ಸಾಹಿರ್‌ಅವರ ಶಾಯರಿಗಳನ್ನು ಉದ್ಧರಿಸುವಾಗ ಅವಶ್ಯವಾದ ಆಂಗಿಕ ಭಾವನೆಗಳನ್ನು ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಂತರಂಗದ ಭಾವನೆಗಳನ್ನು ವ್ಯಕ್ತಪಡಿಸುವಾಗ ಮೌಖಿಕ-ಆಂಗಿಕ ಅಭಿನಯಕ್ಕಿಂತಲೂ ಭಾವನಾತ್ಮಕ ಅಭಿವ್ಯಕ್ತಿ ಬಹಳ ಮುಖ್ಯವಾಗುತ್ತದೆ. ಈ ಪಾತ್ರ ನಿರ್ವಹಣೆಯಲ್ಲಿ ದ್ವಾರಕಾನಾಥ್ ಅವರು ಪೂರ್ಣ ನ್ಯಾಯ ಒದಗಿಸುತ್ತಾರೆ. ಇಮ್ರೋಷ್ ಪಾತ್ರಧಾರಿ ಮಂಜು ಉಪಾಧ್ಯಾಯ, ತಮ್ಮ ಪಾತ್ರಕ್ಕೆ ತಕ್ಕಂತಹ ಸಂಯಮ ಪೂರ್ಣ ಭಾವನೆಗಳನ್ನು ನಾಟಕದುದ್ದಕ್ಕೂ ಅಭಿವ್ಯಕ್ತಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇಡೀ ನಾಟಕದಲ್ಲಿ ತಮ್ಮ ಸಂಭಾಷಣೆಯ ಮೂಲಕವೇ ಇಮ್ರೋಷ್ ಮತ್ತು ಅಮೃತಾ ನಡುವೆ ಇರುವ ಉತ್ಕಟ ಪ್ರೀತಿ ಮತ್ತು ಸ್ನೇಹವನ್ನು ವ್ಯಕ್ತಪಡಿಸಬೇಕಾದ ಸವಾಲಿನ ಪಾತ್ರವನ್ನು ಮಂಜು ಉಪಾಧ್ಯಾಯ ಸಮರ್ಥವಾಗಿ ನಿರ್ವಹಿಸಿ, ಪ್ರೇಕ್ಷಕರ ಗಮನ ಸೆಳೆಯುತ್ತಾರೆ. ತಾಂತ್ರಿಕ ವರ್ಗದ ಸಮರ್ಪಕ ನಿರ್ವಹಣೆ, ರಂಗಸಜ್ಜಿಕೆ, ವಸ್ತ್ರಾಲಂಕಾರ ಎಲ್ಲ ವಲಯಗಳಲ್ಲೂ ಭೇಷ್ ಎನಿಸಿಕೊಳ್ಳಬಲ್ಲ ಒಂದು ಅದ್ಭುತ ಕಲಾಕೃತಿಯನ್ನು ಪ್ರೊ. ಎಸ್.ಆರ್. ರಮೇಶ್ 105 ನಿಮಿಷಗಳ ನಾಟಕದಲ್ಲಿ ಪ್ರಸ್ತುತಪಡಿಸಿದ್ದಾರೆ. ಅನೇಕ ಸನ್ನಿವೇಶಗಳಲ್ಲಿ ಕಲಾವಿದರ ಅಭಿನಯಕ್ಕೆ ಪ್ರೇಕ್ಷಕರು ತಲೆದೂಗಿ ಮೆಚ್ಚುಗೆ ವ್ಯಕ್ತಪಡಿಸುವುದು ಅನಿವಾರ್ಯವಾಗಿಬಿಡುತ್ತದೆ. ಶಾಯರಿಗಳಿಂದ ಕೂಡಿದ ಸಂಭಾಷಣೆ ಮತ್ತು ಅದಕ್ಕೆ ತಕ್ಕ ಭಾವಾಭಿನಯ ಪ್ರೇಕ್ಷಕರ ಮನಸೂರೆಗೊಳ್ಳುತ್ತದೆ.

ಕ್ರಾಂತಿಕಾರಿ ಕವಿ ಸಾಹಿರ್, ದಿಟ್ಟ ಮಹಿಳಾ ಕವಯಿತ್ರಿ ಅಮೃತಾ ಅವರ ಬದುಕಿನ ಕೆಲವು ತುಣುಕುಗಳನ್ನು ಭಾವನಾತ್ಮಕವಾಗಿ ಮನಮುಟ್ಟುವಂತೆ ಪ್ರದರ್ಶಿಸುವ ‘‘ನನ್ನ ಪ್ರೀತಿಯ ಅಮೃತಾ’’ ನಾಟಕ ತಂಡದ ಸಮಸ್ತ ಕಲಾವಿದರೂ, ತಂತ್ರಜ್ಞರೂ ಅಭಿನಂದನಾರ್ಹರು. ಪ್ರೇಕ್ಷಕರನ್ನು ಅಲುಗಾಡದಂತೆ ಹಿಡಿದಿಟ್ಟು ಸಾಹಿತ್ಯ ಮತ್ತು ಭಾವಾಭಿನಯದ ಹೂರಣವನ್ನು ಉಣಬಡಿಸುವ ನಿರ್ದೇಶಕ ಎಸ್.ಆರ್.ರಮೇಶ್ ಅಭಿನಂದನಾರ್ಹರು.

Writer - ನಾ ದಿವಾಕರ

contributor

Editor - ನಾ ದಿವಾಕರ

contributor

Similar News