ರಾಜಕಾರಣ ಮಾಡಲು ಸಿ.ಟಿ.ರವಿ ರಣಹದ್ದಿನಂತೆ ಕಾಯುತ್ತಿರುತ್ತಾರೆ: ರಾಮಲಿಂಗಾರೆಡ್ಡಿ ಆರೋಪ

Update: 2022-04-08 13:31 GMT
ರಾಮಲಿಂಗಾರೆಡ್ಡಿ 

ಬೆಂಗಳೂರು, ಎ. 8: ‘ಗೃಹ ಸಚಿವ ಆರಗ ಜ್ಞಾನೇಂದ್ರ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರೇ ಸಮಾಜದಲ್ಲಿ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಯಾರೇ ತಪ್ಪು ಮಾಡಿದರೂ ಕ್ರಮ ಕೈಗೊಳ್ಳುವುದನ್ನು ಬಿಟ್ಟು ಅವರೇ ಪ್ರಚೋದನಕಾರಿ ಹೇಳಿಕೆ ನೀಡುತ್ತಿರುವುದು ಸರಿಯಲ್ಲ' ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಇಂದಿಲ್ಲಿ ಆಕ್ಷೇಪಿಸಿದ್ದಾರೆ.

ಶುಕ್ರವಾರ ಇಲ್ಲಿನ ಕೆಪಿಸಿಸಿ ಕಚೇರಿಯಲ್ಲಿ ಕರೆಯಲಾಗಿದ್ದ ಜಂಟಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಿ.ಟಿ.ರವಿ ಅವರ ಬಗ್ಗೆ ಎಲ್ಲರಿಗೂ ಗೊತ್ತಿದೆ. ಅವರಿಗೆ ಇಂತಹ ವಿಷಯ ಸಿಕ್ಕರೆ ಸಾಕು. ಏನು ಇಲ್ಲದಿದ್ದರೂ ಗೊಂದಲ ಸೃಷ್ಟಿಸುತ್ತಾರೆ. ನಮ್ಮ ಪಕ್ಷದ ಅಧ್ಯಕ್ಷರು ಹೇಳಿದಂತೆ ನಾವು ದೂರು ಕೊಟ್ಟಿದ್ದು, ಎಲ್ಲೂ ಎಫ್‍ಐಆರ್ ದಾಖಲಾಗಿಲ್ಲ. ಮಾಜಿ ಸಚಿವ ಎಚ್.ಎಂ.ರೇವಣ್ಣ ನೇತೃತ್ವದಲ್ಲಿ ಪಕ್ಷದ ನಿಯೋಗ ಪೊಲೀಸ್ ಆಯುಕ್ತರನ್ನು ಭೇಟಿ ಮಾಡಿ ಸಮಾಜದಲ್ಲಿ ಶಾಂತಿ ಕದಡುವ ಕೆಲಸ ಮಾಡಿರುವ ಈ ಇಬ್ಬರು ನಾಯಕರ ಮೇಲೆ ದೂರು ನೀಡಲಾಗಿದೆ' ಎಂದು ಹೇಳಿದರು.

‘ಎ.5ರ ಬೆಳಗ್ಗೆ ಜೆಜೆ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಅಪಘಾತದ ಕುರಿತು ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್ ಅವರು ಎ.6ರಂದು ಪ್ರಕರಣದ ಬಗ್ಗೆ ಟ್ವಿಟ್ ಮಾಡುತ್ತಾರೆ. ಈ ಪ್ರಕರಣದ ಬಗ್ಗೆ ಸಾರ್ವಜನಿಕವಾಗಿ ಮಾಹಿತಿ ಪ್ರಕಟವಾದ ನಂತರ ಗೃಹ ಸಚಿವರು ‘ಉರ್ದು' ಮಾತನಾಡಲಿಲ್ಲ ಎಂಬ ಕಾರಣಕ್ಕೆ ಕೊಲೆ ಆಗಿದೆ ಎಂದು ಹೇಳಿದರು. ಅವರಿಗೆ ಮಾಹಿತಿ ಇತ್ತೋ ಇರಲಿಲ್ಲವೋ, ಆದರೆ ಮಾಹಿತಿ ಇಟ್ಟುಕೊಂಡು ಅವರು ಮಾತನಾಡಬೇಕು' ಎಂದು ಸಲಹೆ ನೀಡಿದರು.

‘ಗೃಹ ಸಚಿವರು ರಾಜ್ಯದ 6.5 ಕೋಟಿ ಜನರ ಸುರಕ್ಷತೆ ಜವಾಬ್ದಾರಿ ಹೊತ್ತಿರುತ್ತಾರೆ. ಅವರಿಗೆ ಪ್ರತಿ ಗಂಟೆಗೂ ಕಾನೂನು ಸುರಕ್ಷತೆ ಬಗ್ಗೆ ಮಾಹಿತಿ ಹೋಗುತ್ತದೆ. ಆಯುಕ್ತರ ಟ್ವೀಟ್ ನಂತರವೂ ಗೃಹ ಮಂತ್ರಿಗಳು ದಾರಿ ತಪ್ಪಿಸುವ ಹೇಳಿಕೆ ನೀಡಿದ್ದಾರೆ. ಹೆಣ ಬಿದ್ದರೆ ರಾಜಕಾರಣ ಮಾಡಲು ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರು ರಣಹದ್ದಿನಂತೆ ಕಾಯುತ್ತಿರುತ್ತಾರೆ. ಅವರು ಮೃತ ವ್ಯಕ್ತಿ ಚಂದ್ರಶೇಖರ್ ಕನ್ನಡ ಮಾತನಾಡಿದ್ದಕ್ಕೆ ಈ ಕೊಲೆ ಆಗಿದೆ ಇದನ್ನು ಖಂಡಿಸುತ್ತೇನೆ. ಇದು ವ್ಯಕ್ತಿಗತ ಕೊಲೆ ಅಲ್ಲ, ಇದು ಹಿಂದೂಗಳಿಗೆ ಪ್ರಚೋದನಕಾರಿಯಾಗಿ ಆಗಿರುವಂತಹ ಕೃತ್ಯ. ಇಂದು ಗೌರಿಪಾಳ್ಯದಲ್ಲಿ ಆದ ಕೊಲೆ ದೇಶದಲ್ಲಿ ಆಗುತ್ತದೆ. ಈ ಬಗ್ಗೆ ಬುದ್ಧಿಜೀವಿಗಳು ಮೌನ ವಹಿಸಿದ್ದು, ಸತ್ತವರು ಹಿಂದೂ ಆದರೆ ಅವರ ಕಣ್ಣಲ್ಲಿ ನೀರು ಬರುವುದಿಲ್ಲ. ಸಿದ್ದರಾಮಯ್ಯ ಅವರಿಗೆ ಸಂತಾಪ ಸೂಚಿಸುವ ಧ್ವನಿ ಬರುವುದಿಲ್ಲ ಎಂದೆಲ್ಲಾ ಹೇಳಿದ್ದರು' ಎಂದು ವಾಗ್ದಾಳಿ ನಡೆಸಿದರು.

ಗೃಹ ಸಚಿವರು ವಿಫಲ: ‘ಇತಿಹಾಸದಲ್ಲಿ ಈ ರಾಜ್ಯ ಕಂಡ ಅತ್ಯಂತ ನಿಷ್ಪ್ರಯೋಜಕ, ಭ್ರಷ್ಟ, ಪ್ರಚೋದನಾಕಾರಿ ಗೃಹ ಸಚಿವರು ಆರಗ ಜ್ಞಾನೇಂದ್ರ. ಗೃಹ ಸಚಿವ ಸ್ಥಾನ 6.5 ಕೋಟಿ ಕನ್ನಡಿಗರ ರಕ್ಷಣೆ ಮಾಡುವ ಜವಾಬ್ದಾರಿ ಸ್ಥಾನ. ಅಲ್ಲಿದ್ದರೂ ತಮ್ಮ ಜವಾಬ್ದಾರಿ ನಿಭಾಯಿಸುವಲ್ಲಿ ವಿಫಲವಾಗಿದ್ದಾರೆ. ತೀರ್ಥಹಳ್ಳಿ ನಂದಿತಾ ಪ್ರಕರಣದಿಂದ, ಶಿವಮೊಗ್ಗ ಹರ್ಷ ಕೊಲೆ, ಮೈಸೂರು ಅತ್ಯಾಚಾರ ಪ್ರಕರಣ ಹಾಗೂ ಹಿಜಾಬ್ ಸೇರಿದಂತೆ ಎಲ್ಲ ಪ್ರಕರಣದಲ್ಲಿ ಅವರು ಜವಾಬ್ದಾರಿ ಮರೆತಿದ್ದಾರೆ' ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ರಸ್ತೆ ಜಗಳದ ಹತ್ಯೆಗೆ ಮತೀಯ ಬಣ್ಣ ಕೊಡುವುದು ರಾಜ್ಯಕ್ಕೆ ಮಾಡುವ ಅಪಮಾನ. ಆ ಮೂಲಕ ಅಪರಾಧ ಪಿತೂರಿ, ಎರಡು ಧರ್ಮಗಳ ಮಧ್ಯೆ ಜಗಳ, ತಪ್ಪು ಮಾಹಿತಿ ನೀಡಿ ಸಾಕ್ಷ್ಯ ನಾಶ ಮಾಡುವ ಪ್ರಯತ್ನ ಮಾಡಿದ್ದಾರೆ. ಹೀಗಾಗಿ ಐಪಿಸಿ ಸೆಕ್ಷನ್ 120‘ಬಿ' ಅಪರಾಧ ಪಿತೂರಿ, 153‘ಎ' ಎರಡು ಧರ್ಮಗಳ ಮಧ್ಯೆ ಜಗಳ, 182 ತಪ್ಪು ಮಾಹಿತಿ ನೀಡಿ ವಿಚಾರ ತಿರುಚಲು ಅಧಿಕಾರ ದುರ್ಬಳಕೆ, 201 ಪ್ರಕರಣದ ಸಾಕ್ಷಿ ನಾಶ, 202, ಪ್ರಕರಣಗಳ ಉಲ್ಲಂಘನೆಯಾಗಿದೆ. ಗೃಹ ಸಚಿವರು ಯಾವ ಮುಖ ಇಟ್ಟುಕೊಂಡು ಮುಂದುವರಿಯುತ್ತಾರೆ' ಎಂದು ಉಗ್ರಪ್ಪ ಪ್ರಶ್ನಿಸಿದರು.

‘ಗೃಹ ಸಚಿವ ಆರಗ ಜ್ಞಾನೇಂದ್ರ ಗೋರಿಪಾಳ್ಯ ಕೊಲೆ ವಿಚಾರದಲ್ಲಿ ಸಂಪೂರ್ಣ ವಿಫಲರಾಗಿದ್ದು, ಇಷ್ಟು ಹೊತ್ತಿಗೆ ಅವರ ವಿರುದ್ಧ ಸ್ವಯಂಪ್ರೇರಿತ ಕೇಸ್ ದಾಖಲಿಸುವ ನಿರೀಕ್ಷೆ ಇತ್ತು. ಗೃಹಮಂತ್ರಿಗಳು ಹಾಗೂ ಆಯುಕ್ತರು ತದ್ವಿರುದ್ಧ ಹೇಳಿಕೆ ನೀಡುತ್ತಾರೆ. ಪೊಲೀಸ್ ಇಲಾಖೆ ಜೀವಂತವಾಗಿದ್ದರೆ ಸುಮೋಟೋ ಕೇಸ್ ದಾಖಲಾಗಬೇಕಿತ್ತು. ಅದು ಸಾಧ್ಯವಾಗದಿದ್ದರೆ ಕಾಂಗ್ರೆಸ್ ನೀಡಿರುವ ದೂರಿನನ್ವಯ ಕೇಸ್ ದಾಖಲಿಸಿ, ಅವರಿಂದ ರಾಜೀನಾಮೆ ಕೊಡಿಸಿ ದಸ್ತಗಿರಿ ಮಾಡಿ ಕ್ರಮ ಜರುಗಿಸಬೇಕು. ಇಲ್ಲದಿದ್ದರೆ ಈ ವಿಚಾರವನ್ನು ಜನತಾ ನ್ಯಾಯಾಲಯದ ಮುಂದೆ ಇಡಲಾಗುತ್ತದೆ'
-ವಿ.ಎಸ್.ಉಗ್ರಪ್ಪ, ಮಾಜಿ ಸಂಸದ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News