×
Ad

ಬೆಲೆ ಏರಿಕೆ ವಿರುದ್ಧ ಸಂಘ ಪರಿವಾರ ಹೋರಾಟ ಮಾಡಲಿ: ಕುಮಾರಸ್ವಾಮಿ ಸವಾಲು

Update: 2022-04-08 19:23 IST

ಬೆಂಗಳೂರು: ‘ವಿಶ್ವ ಹಿಂದೂ ಪರಿಷತ್, ಭಜರಂಗದಳ, ಆರೆಸ್ಸೆಸ್‍ನವರಿಗೆ ಯೋಗ್ಯತೆ ಇದ್ದರೆ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಬಗ್ಗೆ ಪ್ರತಿಭಟನೆ ಮಾಡಬೇಕು. ಅದು ಬಿಟ್ಟು ಹಲಾಲ್, ಜಟ್ಕಾ ಇಂತಹ ವಿಚಾರಗಳಲ್ಲಿ ಹೋರಾಡ್ತೀರಾ?' ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ಶುಕ್ರವಾರ ನಗರದಲ್ಲಿ ಜೆಡಿಎಸ್ ಏರ್ಪಡಿಸಿದ್ದ ಬೆಲೆ ಏರಿಕೆ ವಿರುದ್ಧದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ‘ವಿಶ್ವ ಹಿಂದು ಪರಿಷತ್, ಭಜರಂಗದಳ ರೈತರು ಬೆಳೆಯುವ ಬೆಳೆಯನ್ನು ಖರೀದಿ ಮಾಡ್ತಾರಾ? ಬೀದಿಬದಿ ವ್ಯಾಪಾರಿಗಳ ಪರಿಸ್ಥಿತಿ ಏನಾಗಿದೆ. ಈ ಸರಕಾರ ಅವರ ಬಗ್ಗೆ ಏನಾದ್ರೂ ಯೋಚನೆ ಮಾಡಿದೆಯಾ. ತಿನ್ನುವ ವಿಚಾರದಲ್ಲಿ ಧರ್ಮ ಬೆರೆಸಿರುವ ಈ ನೀತಿಗೆಟ್ಟ ಸರಕಾರದ ಬಗ್ಗೆ ಜನತೆ ಎಚ್ಚೆತ್ತುಕೊಳ್ಳಬೇಕು' ಎಂದು ಕರೆ ನೀಡಿದರು.

‘ಜನರ ಕಷ್ಟ ಸುಖಕ್ಕೆ ದನಿ ಎತ್ತುತ್ತಿರುವವರು ನಾವು, ನಮ್ಮ ಪಕ್ಷ. ಆ ಸಂಕಷ್ಟ ಸಮಯದಲ್ಲಿ ಕೊರೋನದಿಂದ ಸಾವಿರಾರು ಕುಟುಂಬ ಬೀದಿ ಪಾಲಾಗಿವೆ. ಕೋಟ್ಯಂತರ ರೂಪಾಯಿ ಲೂಟಿ ಹೊಡೆದಿದ್ದಾರೆ. ಈಗ ಬೆಲೆ ಏರಿಕೆಯಿಂದ ಜನ ಬೀದಿಗೆ ಬಿದ್ದಿದ್ದಾರೆ. ಹೀಗಾಗಿ ಹೇಳುತ್ತಿದ್ದೇನೆ, ಈ ಸರಕಾರದ ಪಾಪದ ಕೊಡ ತುಂಬಿದೆ. ಸಾಮರಸ್ಯ ಕೆಡಿಸುವ ಕೆಲಸದ ವಿರುದ್ಧ ನಾನು ದನಿ ಎತ್ತುತ್ತಿದ್ದೇವೆ' ಎಂದು ಅವರು ತಿಳಿಸಿದರು.

ಪೊಲೀಸ್ ಇಲಾಖೆಗೆ ಎಚ್ಚರಿಕೆ: ‘ಸರಕಾರದ ವಿರುದ್ಧ ಮಾತಾಡಿದವರಿಗೆ ಗಡಿಪಾರು ಮಾಡುವ ಅಥವಾ ದೇಶ ದ್ರೋಹಿಗಳು ಎಂದು ಹಣೆಪಟ್ಟಿ ಕಟ್ಟಿ ಕೇಸ್ ಹಾಕುವ ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ಪೊಲೀಸ್ ಇಲಾಖೆಯು ಬೆಂಬಲ ಕೊಡುತ್ತಿದೆ. ಸದಾ ಕಾಲ ಬಿಜೆಪಿ ಸರಕಾರ ಇರಲು ಸಾಧ್ಯವಿಲ್ಲ. ಹೀಗಾಗಿ ಪೊಲೀಸ್ ಇಲಾಖೆಗೆ ಎಚ್ಚರಿಕೆ ಕೊಡ್ತೀದ್ದೀನಿ ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

‘ಕಳೆದ ವರ್ಷಗಳಲ್ಲಿ ಏನಾಯಿತು? ಎರಡು ರಾಷ್ಟ್ರೀಯ ಪಕ್ಷಗಳು ಯಾರ ಮನೆ ಬಾಗಿಲಿಗೆ ಬಂದವು ಅಂತ ಗೊತ್ತಿದೆ. ಪೊಲೀಸರಿಗೆ ಸಂಬಳ ಕೊಡುತ್ತ ಇರುವುದು ಶಾಸಕರು, ಮಂತ್ರಿಗಳು ಅಲ್ಲ. ರಾಜ್ಯದ ಜನರ ತೆರಿಗೆ ಹಣದಿಂದ ನಿಮಗೆ ಸಂಬಳ ಕೊಡುತ್ತಿರುವುದು ಅನ್ನುವುದು ನೆನಪಿರಲಿ ಎಂದು ಕುಮಾರಸ್ವಾಮಿ ಪೊಲೀಸ್ ಇಲಾಖೆಗೆ ಎಚ್ಚರಿಕೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News