ಅಂಬೇಡ್ಕರ್ ಭಾವಚಿತ್ರಕ್ಕೆ ಅಗೌರವ ಪ್ರಕರಣ: ಸರಕಾರದ ಧೋರಣೆ ಖಂಡಿಸಿ ಎ.14ಕ್ಕೆ ಕಪ್ಪುಬಾವುಟ ಪ್ರದರ್ಶನಕ್ಕೆ ಕರೆ

Update: 2022-04-08 14:12 GMT
ಸಾಂದರ್ಭಿಕ ಚಿತ್ರ 

ಬೆಂಗಳೂರು, ಎ.8: ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರ ತೆಗೆದು ಅವಮಾನ ಎಸಗಿರುವ ರಾಯಚೂರು ಜಿಲ್ಲೆಯ ನ್ಯಾಯಾಧೀಶರಾಗಿದ್ದ ಮಲ್ಲಿಕಾರ್ಜುನಗೌಡ ವಿರುದ್ಧ ಕ್ರಮ ಜರುಗಿಸದೆ, ವಚನಭ್ರಷ್ಟರಾಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಎ.14ರಂದು ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡುವುದನ್ನು ವಿರೋಧಿಸಿ, ವಿಧಾನಸೌಧ ಮುಂಭಾಗ ಮತ್ತು ರಾಜ್ಯದ ಎಲ್ಲಾ ಜಿಲ್ಲಾ, ತಾಲ್ಲೂಕು ಕೇಂದ್ರಗಳಲ್ಲಿ ಕಪ್ಪು ಭಾವುಟ ಪ್ರದರ್ಶಿಸುವ ಪ್ರತಿಭಟನೆಗೆ ಸಂವಿಧಾನ ಸಂರಕ್ಷಣಾ ಮಹಾ ಒಕ್ಕೂಟವು ಕರೆ ನೀಡಿದೆ. 

ಶುಕ್ರವಾರ ಪ್ರಜಾ ಪರಿವರ್ತನ ವೇದಿಕೆಯ ಮುಖಂಡ ಬಿ. ಗೋಪಾಲ್ ಮಾತನಾಡಿ, ರಾಯಚೂರಿನಲ್ಲಿ ಗಣರಾಜ್ಯ ದಿನಾಚಾರಣೆಯಂದು ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ಅವರು ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಭಾವಚಿತ್ರಕ್ಕೆ ಅವಮಾನ ಮಾಡಿದ್ದಾರೆ. ಇದನ್ನು ಖಂಡಿಸಿ ದಲಿತ ಸಂಘಟನೆಗಳು ನಗರದಲ್ಲಿ ಪ್ರತಿಭಟನೆ ಮಾಡಲು ಕರೆ ಕೊಟ್ಟಾಗ, ಪೆ.19ರಂದು ಸಾಗರೋಪಾದಿಯಲ್ಲಿ ಶೋಷಿತ ಸಮುದಾಯದವರು ಬಂದು ಪ್ರತಿಭಟನೆ ಮಾಡಿದ್ದಾರೆ. ಪ್ರತಿಭಟನೆಗೆ ಮಣಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೇವಲ ಮೂರೇ ದಿನಗಳಲ್ಲಿ ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದ್ದರು. ಆದರೆ ಇದುವರೆಗೂ ಯಾವುದೇ ಕ್ರಮವನ್ನು ವಹಿಸದೇ ಅವರು ವಚನಭ್ರಷ್ಟರಾಗಿದ್ದು, ಎ.14ರಂದು ನಡೆಯುವ ಅಂಬೇಡ್ಕರ್ ಜಯಂತಿಯಂದು ಅವರು ವಿಧಾನಸೌಧ ಮುಂಭಾಗದದಲ್ಲಿರುವ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಬಾರದು. ಹಾಗೆಯೇ ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲಾ ಕೇಂದ್ರಗಳಲ್ಲಿ ಅಂಬೇಡ್ಕರ್ ಜಯಂತಿಯನ್ನು ಆಚರಿಸಲು ಅವಕಾಶ ನೀಡಬಾರದು. ಸಂಘಟನೆಗಳು ಸೇರಿ ದಲಿತರೆಲ್ಲಾ ಅಂಬೇಡ್ಕರ್ ಜಯಂತಿಯನ್ನು ವಿಜೃಂಭಣೆಯಿಂದ ಆಚರಣೆ ಮಾಡಬೇಕು ಎಂದು ಸೂಚಿಸಿದರು.

ದಲಿತ ಸಂಘರ್ಷ ಸಮಿತಿಯ ಮುಖಂಡ ಹೆಬ್ಬಾಳ ವೆಂಕಟೇಶ್ ಮಾತನಾಡಿ, ನಾವು ರಾಜ್ಯದ ಮುಖ್ಯಮಂತ್ರಿಗಳನ್ನು ನೋಡಿದ್ದೇವೆ. ಬಿಜೆಪಿ ಸರಕಾರದಲ್ಲಿ ಮುಖ್ಯಮಂತ್ರಿಗಳನ್ನು ನೋಡಿದ್ದೇವೆ. ಆದರೆ ಇಂತಹ ದುರಾಡಳಿತವನ್ನು ನೀಡುವ ಮುಖ್ಯಮಂತ್ರಿಯನ್ನು ನಾವು ಇದೇ ಮೊದಲ ಬಾರಿಗೆ ನೋಡುತ್ತಿದ್ದೇವೆ. ಇವರು ಆರೆಸ್ಸೆಸ್ ನ ಮಧ್ಯವರ್ತಿಯಾಗಿದ್ದಾರೆ ಎಂದು ಕಿಡಿಕಾರಿದರು. 

ದಲಿತ ಸಂಘರ್ಷ ಸಮಿತಿಯ ಮುಖಂಡ ಹೆಣ್ಣೂರು ಶ್ರೀನಿವಾಸ್ ಮಾತನಾಡಿ, ಅಂಬೇಡ್ಕರ್ ಅವರ ಭಾವಚಿತ್ರ ತೆಗೆದು ಅವಮಾನ ಎಸಗಿರುವ ರಾಯಚೂರು ಜಿಲ್ಲೆಯ ನ್ಯಾಯಾಧೀಶರಾಗಿದ್ದ ಮಲ್ಲಿಕಾರ್ಜುನಗೌಡ ಅವರನ್ನು ಕೂಡಲೇ ಅಮಾನತುಗೊಳಿಸಬೇಕು. ಪರಿಶಿಷ್ಟ ಜಾತಿ ವರ್ಗ ಭೂ ಪರಭಾರೆ ನಿಷೇಧ ಕಾಯ್ದೆ ವಿರುದ್ಧ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನ ವಿರುದ್ಧ ರಾಜ್ಯ ಸರಕಾರ ಮೇಲ್ಮನವಿ ಸಲ್ಲಿಸಬೇಕು. ರಾಜ್ಯ ಸರಕಾರದ ಆದೇಶದಂತೆ ಸರಕಾರಿ ಕಚೇರಿಗಳಲ್ಲಿ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ಭಾವಚಿತ್ರ ಹಾಕುವಂತೆ ಹೈಕೋರ್ಟ್ ಸಹ ತನ್ನ ಅಧೀನ ನ್ಯಾಯಾಲಯಗಳಲ್ಲಿ ಕಡ್ಡಾಯವಾಗಿ ಹಾಕಲು ಆದೇಶಿಸಬೇಕು ಎಂದು ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಬಸವ ನಾಗಿದೇವ ಸ್ವಾಮೀಜಿ, ಮಾರಪ್ಪ, ಚನ್ನಕೃಷ್ಣಪ್ಪ, ಹೆಬ್ಬಾಳ ವೆಂಕಟೇಶ್, ಮಹದೇವಸ್ವಾಮಿ, ಭೀಮ್ ಆರ್ಮಿಯ ರಾಜ್ ಗೋಪಾಲ್ ಮುಂತಾದ ಮುಖಂಡರು ಉಪಸ್ಥಿತರಿದ್ದರು.

'ಕ್ರಮ ಕೈಗೊಳ್ಳದಿದ್ದರೆ ಉಗ್ರ ಹೋರಾಟ'
ಇದೇ ಬಿಜೆಪಿ ಸರಕಾರದ ಆಡಳಿತದಲ್ಲಿ ಅಂಬೇಡ್ಕರ್ ಗೆ ಅವಮಾನವಾದಾಗ ಆಗಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರು ತಕ್ಷಣವೇ ಎಲ್ಲಾ ದಲಿತ ಮುಖಂಡರೊಂದಿಗೆ ಚರ್ಚಿಸುತ್ತಾರೆ. ಅಂಬೇಡ್ಕರ್‍ಗೆ ಅವಮಾನ ಮಾಡಿದ ಸಂಸ್ಥೆಯೊಂದನ್ನು ಕಪ್ಪುಪಟ್ಟಿಗೆ ಸೇರಿಸುತ್ತಾರೆ. ಎಲ್ಲಾ ಶಿಕ್ಷಣ ಸಂಸ್ಥೆಗಳಲ್ಲಿ ಸಂವಿಧಾನದ ಪೂರ್ವಪೀಠಿಕೆ ಓದನ್ನು ಕಡ್ಡಾಯಗೊಳಿಸುತ್ತಾರೆ. ಆದರೆ ಈಗಿರುವ ಅದೇ ಪಕ್ಷದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಏಕೆ ಕ್ರಮವನ್ನು ತೆಗೆದುಕೊಳ್ಳುತ್ತಿಲ್ಲ. ಅವರು ಎ.14ರೊಳಗೆ ಅಂಬೇಡ್ಕರ್‍ಗೆ ಅವಮಾನ ಮಾಡಿರುವುದರ ಕುರಿತು ಕ್ರಮ ತೆಗೆದುಕೊಳ್ಳದಿದ್ದಲ್ಲಿ ಉಗ್ರ ಹೋರಾಟವನ್ನು ಮಾಡಲಾಗುವುದು.
-ಜ್ಞಾನಪ್ರಕಾಶ ಸ್ವಾಮೀಜಿ, ಉರಿಲಿಂಗ ಪೆದ್ದಿ ಮಠದ ಮಠಾಧೀಶರು 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News