ಮಾರ್ಗಸೂಚಿ ದರದಲ್ಲಿ ಶೇ.10ರಷ್ಟು ನೋಂದಣಿ ಶುಲ್ಕ ಕಡಿತ ಅವಧಿ ಮೂರು ತಿಂಗಳು ವಿಸ್ತರಣೆ: ಸಚಿವ ಆರ್.ಅಶೋಕ್

Update: 2022-04-08 15:18 GMT

ಬೆಂಗಳೂರು, ಎ. 8: ‘ಸಾರ್ವಜನಿಕರ ಬೇಡಿಕೆ ಹಿನ್ನೆಲೆಯಲ್ಲಿ ಆಸ್ತಿ ನೋಂದಣಿ ಮಾರ್ಗಸೂಚಿ ದರದಲ್ಲಿ ಶೇ.10ರಷ್ಟು ನೋಂದಣಿ ಶುಲ್ಕ ಕಡಿತದ ಅವಧಿಯನ್ನು ಇನ್ನೂ ಮೂರು ತಿಂಗಳ ಕಾಲ ವಿಸ್ತರಣೆ ಮಾಡಲಾಗುವುದು' ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.

ಶುಕ್ರವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಆಸ್ತಿ ನೋಂದಣಿ ಶುಲ್ಕದ ಮಾರ್ಗಸೂಚಿ ದರಲ್ಲಿ ಶೇ.10ರಷ್ಟು ಕಡಿತಗೊಳಿಸಿದ್ದು, ಪ್ರಸ್ತುತ ಘೋಷಣೆ ಮಾಡಿರುವ ಅವಧಿಯು ಮಾ.31ಕ್ಕೆ ಮುಕ್ತಾಯವಾಗಿದೆ. ಹೀಗಾಗಿ ಜನರ ಬೇಡಿಕೆ ಬರುತ್ತಿರುವ ಹಿನ್ನೆಲೆಯಲ್ಲಿ ಮತ್ತೆ ಮೂರು ತಿಂಗಳು ವಿಸ್ತರಣೆ ಮಾಡಬೇಕೆಂಬ ಚಿಂತನೆಯಿದೆ. ಸಿಎಂ ಜತೆ ಚರ್ಚಿಸಿ ಶೀಘ್ರದಲ್ಲೇ ಆದೇಶ ಹೊರಡಿಸುತ್ತೇವೆ' ಎಂದು ಸ್ಪಷ್ಟಣೆ ನೀಡಿದರು.

‘ಮಾ.31ಕ್ಕೆ ಕೊನೆಗೊಂಡ ಹಣಕಾಸು ವರ್ಷದಲ್ಲಿ ಕಂದಾಯ ಇಲಾಖೆ ಗುರಿ ಮೀರಿದ ಸಾಧನೆ ಮಾಡಿದೆ. ಹಿಂದಿನ ವರ್ಷ ನಾವು 1,200 ಕೋಟಿ ರೂ.ಆದಾಯದ ಗುರಿ ನೀಡಿದ್ದೆವು. ಆದರೆ, ನಮ್ಮ ಅಧಿಕಾರಿಗಳು 1,300 ಕೋಟಿ ರೂ.ಆದಾಯ ಸಂಗ್ರಹಿಸಿದ್ದಾರೆ. ಇದು ಗುರಿ ಮೀರಿದ ಸಾಧನೆ' ಎಂದು ಅಶೋಕ್ ಮೆಚ್ಚುಗೆ ವ್ಯಕ್ತಪಡಿಸಿದರು.

‘ಕಂದಾಯ ಇಲಾಖೆಯಲ್ಲಿ ಹಲವು ಸುಧಾರಣೆಗಳನ್ನು ಜಾರಿಗೆ ತಂದಿದ್ದೇವೆ. ಇಲಾಖೆಯನ್ನು ಜನೋಪಯೋಗಿ ಮಾಡಬೇಕೆಂಬುದು ಸರಕಾರದ ಉದ್ದೇಶ. ಇದಕ್ಕಾಗಿಯೇ ಆಸ್ತಿ ನೋಂದಣಿ ಶುಲ್ಕದ ಮಾರ್ಗಸೂಚಿ ದರವನ್ನು ಶೇ.10ರಷ್ಟು ಕಡಿಮೆ ಮಾಡಿದ್ದೆವು. ಈಗ ಇಲಾಖೆಯು ಹಲವು ಸುಧಾರಣಾ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಅವರು ಹೇಳಿದರು.

‘ದೇಶದ ಬೇರೆ ಬೇರೆ ಭಾಗಗಳಲ್ಲಿ ಉದ್ಯಮಿಗಳು ಬಂಡವಾಳ ಹೂಡಲು ಹಿಂದೇಟು ಹಾಕುತ್ತಾರೆ. ಆದರೆ ನಮ್ಮಲ್ಲಿ ವಿಶ್ವ ದರ್ಜೆಯ ಮೂಲಭೂತ ಸೌಕರ್ಯಗಳು ಇರುವುದರಿಂದ ಇಲ್ಲಿ ಮುಕ್ತವಾಗಿ ಬರುತ್ತಾರೆ. ಬೇರೆ ಕಡೆ ಭಾಷೆ ಸಮಸ್ಯೆಯಿದ್ದರೆ ನಮ್ಮಲ್ಲಿ ಯಾವುದೇ ಸಮಸ್ಯೆಗಳಿಲ್ಲ. ನಗರದಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡಲು ಸರಕಾರ ಬದ್ಧವಾಗಿದೆ' ಎಂದು ಅಶೋಕ್ ಹೇಳಿದರು.

‘ಹಿಂದಿನ ಯಾವ ಸರಕಾರಗಳು ನಗರ ಅಭಿವೃದ್ಧಿಗೆ ನಾವು ಕೊಟ್ಟಷ್ಟು ಕೊಡುಗೆಗಳನ್ನು ಕೊಟ್ಟಿರಲಿಲ್ಲ. ಕಾಂಗ್ರೆಸ್-ಜೆಡಿಎಸ್ ಸರಕಾರಗಳು ನಗರವನ್ನು ಸಂಪೂರ್ಣವಾಗಿ ಕಡೆಗಣಿಸಿದ್ದವು. ಆದರೆ, ನಮ್ಮ ಸರಕಾರ ರಸ್ತೆ, ಚರಂಡಿ, ಮೇಲ್ಸೇತುವೆ ಸಹಿತ ಮೂಲಭೂತ ಸೌಲಭ್ಯ ಕಲ್ಪಿಸಲು ಆದ್ಯತೆ ನೀಡಿದೆ' ಎಂದು ಅಶೋಕ್ ಇದೇ ವೇಳೆ ಮಾಹಿತಿ ನೀಡಿದರು.

ಐಟಿ-ಬಿಟಿ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿರುವ ಬೆಂಗಳೂರಿಗೆ ಚೀನಾ-ಅಮೆರಿಕ ಸ್ಪರ್ಧೆಯೇ ಹೊರತು ಬೇರೆ ನಗರಗಳಲ್ಲ. ಇಡೀ ವಿಶ್ವವೇ ಬೆಂಗಳೂರಿನ ಕಡೆ ತಿರುಗಿ ನೋಡುತ್ತದೆ. ಬಂಡವಾಳ ಹೂಡಿಕೆ, ಕೈಗಾರಿಕೆಗಳ ಸ್ಥಾಪನೆ, ಐಟಿಬಿಟಿ, ಬಾಹ್ಯಾಕಾಶ, ರಕ್ಷಣೆ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ನಾವು ಮುಂಚೂಣಿಯಲ್ಲಿದ್ದೇವೆ. ನಮಗೆ ಸ್ಪರ್ಧೆಯಿದ್ದರೆ ಅಮೆರಿಕ, ಚೀನಾ ಹೊರತು, ಹೈದರಾಬಾದ್-ಚೆನ್ನೈ ನಗರಗಳಲ್ಲ.
-ಆರ್. ಅಶೋಕ್, ಕಂದಾಯ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News