ಹಿಂದುತ್ವ ಸಂಘಟನೆಗಳ ಅಭಿಯಾನದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಸಚಿವ ಮಾಧುಸ್ವಾಮಿ ಹೇಳಿದ್ದೇನು?

Update: 2022-04-08 17:07 GMT

ಹಾಸನ: ರಾಜ್ಯದಲ್ಲಿ ಹಿಂದುತ್ವ ಸಂಘಟನೆಗಳ ಅಭಿಯಾನದ ವಿಚಾರವಾಗಿ ಮಾತನಾಡಿದ ಸಚಿವ ಮಾಧುಸ್ವಾಮಿ, ನನ್ನ ದೃಷ್ಟಿಯಲ್ಲಿ ಇದೆಲ್ಲಾ ಅನಗತ್ಯ ಎಂದು ಹಿಂದುತ್ವ ಸಂಘಟನೆಗಳ ಅಭಿಯಾನಕ್ಕೆ ಪರೋಕ್ಷವಾಗಿ ಕುಟುಕಿದರು. ನಾವೆಲ್ಲಾ ಮನುಷ್ಯರು, ಒಂದೇ ದೇಶದಲ್ಲಿ ಬದುಕುತ್ತಿದ್ದೇವೆ. ಇದೆಲ್ಲ ವಿವಾದ ಮಾಡುವ ವಿಚಾರಗಳಲ್ಲ. ಆದರೆ ಏನೋ ನಡೆಯುತ್ತಿದೆ. ನಾವು ಏನು ಹೇಳೋಕಾಗುತ್ತೆ ಹೇಳಿ ಎಂದು ಪ್ರಶ್ನಿಸಿದ ಅವರು, ಹಿಂದುತ್ವ ಸಂಘಟನೆಗಳ ಮಾವು, ವ್ಯಾಪರ ಬ್ಯಾನ್, ಕ್ಯಾಬ್ ಬ್ಯಾನ್ ವಿವಾದಗಳ ಬಗ್ಗೆ ಬೇಸರ ವ್ಯಕ್ತಪಡಿಸಿದರು.

ಹಾಸನದಲ್ಲಿ ಇಂದು ಮಾತನಾಡಿದ ಸಚಿವ ಮಾಧುಸ್ವಾಮಿ, ಕಾಂಗ್ರೆಸ್ ನವರು ವಿರೋಧ ಮಾಡಬೇಕಾ ಅಥವಾ ಪರವಾಗಿ ಇರಬೇಕಾ ಎಂಬ ಗೊಂದಲದಲ್ಲಿ ಇದ್ದಾರೆ. ಆ ಜನಾಂಗದ ಮತಗಳು ಕಡಿಮೆ ಆಗ್ತಿದೆ ಎಂದು ಅವರಿಗೆ ಅನ್ನಿಸಿದೆ. ಹಾಗಾಗಿ ಬಾಯ್ಬಿಟ್ಟು ಮಾತಾಡೋಕು ಆಗ್ತಿಲ್ಲ. ಅರಗಿಸಿಕೊಳ್ಳೋಕು ಆಗ್ತಿಲ್ಲ. ಹಿಜಾಬ್ ಮತ್ತು ಕೆಲ ವಿಚಾರಗಳು ಕಾಂಗ್ರೆಸ್ ಸೃಷ್ಟಿ ಮಾಡಿದ್ದಲ್ಲ. ಕಾಂಗ್ರೆಸ್ ಮಾಡಿದ್ದು ಎಂದು ನಾನಂತು ಹೇಳಲ್ಲ. ಮತ್ತೆರಡು ಮುಸ್ಲಿಂ ಸಂಘಟನೆಗಳು ಈ ವಿವಾದ ಸೃಷ್ಟಿ ಮಾಡಿದ್ದು, ಅವೆರಡು ಸಂಘಟನೆ ಬೆಳೆದರೆ ನಮಗಿಂತ ಕಾಂಗ್ರೆಸ್ ಗೆ ದೊಡ್ಡ ಹೊಡೆತ ಬೀಳಲಿದೆ ಎಂದು ಎಚ್ಚರಿಸಿದ ಅವರು, ಹಾಗಾಗಿ ಅವರು ಪರ ಅಥವಾ ವಿರೋಧ ಮಾತನಾಡೋಕೆ ಆಗದ ಸ್ಥಿತಿಯಲ್ಲಿ ಇದ್ದಾರೆ ಎಂದರು.

ಇಂತಹ ವಿವಾದಗಳಲ್ಲಿ ಸರ್ಕಾರ ಯಾವ ನಿರ್ಧಾರ ತಗೊಳೋಕೆ ಆಗುತ್ತದೆ?. ದೇವಾಲಯಗಳ ವ್ಯಾಪ್ತಿಯಲ್ಲಿ ವ್ಯಾಪಾರ ಮಾಡಬಾರದು ಎಂದು ಅವರೇ ಕಾನೂನು ಮಾಡಿದ್ದಾರೆ. ಹಿಜಾಬ್ ಹಾಕದೆ ಪರೀಕ್ಷೆಗೆ ಬರಲ್ಲ ಎಂದವರಿಗೆ ಮರು ಪರೀಕ್ಷೆ ಕೊಡಿ ಅಂತಾರೆ. ಅದು ಹೇಗೆ ಸಾಧ್ಯ. ಮತ್ತೆ ಪರೀಕ್ಷೆ ಬರೆಯಲು ಅವಕಾಶ ಕೊಟ್ಟರೆ ಶಿಕ್ಷಣ ವ್ಯವಸ್ಥೆಯೇ ಹಾಳಾಗುವುದಿಲ್ಲವೇ ಎಂದು ಪ್ರಶ್ನಿಸಿದರು.

ರಾಷ್ಟ್ರೀಯ ಶಿಕ್ಷಣ ನೀತಿ(ಎನ್ಇಪಿ)ಯಲ್ಲಿ ಮೂರು ಭಾಷೆ ಹೇಳಲಾಗಿದ್ದು, ಯಾವುದೇ ಎರಡು ಭಾಷೆ ಬಳಸಲು ಸೂಚನೆ ಇದೆ. ಸಂವಹನ ಸುಲಭ ಎಂದು ಹಿಂದಿ ಬಳಸಲು ಹೇಳುತ್ತಿದ್ದಾರೆ. ಆದರೆ ಕಡ್ಡಾಯ ಮಾಡಿ ಎಂದು ಹೇಳಿರುವುದಿಲ್ಲ. ಎನ್ಇಪಿ ತಂದಿರುವುದು ಮಾತೃಭಾಷೆಗೆ ಒತ್ತು ನೀಡಬೇಕು ಎಂದು. ಆದರೆ ಹಿಂದಿಯನ್ನು ಹೇರಿಕೆ ಮಾಡುತ್ತಿಲ್ಲ ಎಂದು ಸಚಿವ ಮಾಧುಸ್ವಾಮಿ ಸ್ಪಷ್ಟನೆ ನೀಡಿದರು.

ಸಚಿವ ಸಂಪುಟ ವಿಸ್ತರಣೆ ವಿಚಾರವಾಗಿ ಮಾತನಾಡಿ, ಕೆಲವರಿಗೆ ಕೊಕ್ ಕೊಟ್ಟು ಹೊಸಬರಿಗೆ ಸಚಿವ ಸ್ಥಾನ ಕೊಟ್ಟರೆ ಪಕ್ಷಕ್ಕೆ ಒಳ್ಳೆಯದಾಗಲಿದೆ. ಹೊಸಬರಿಗೆ ಮಂತ್ರಿ ಸ್ಥಾನ ಕೊಟ್ಟರೆ ಪಕ್ಷಕ್ಕೆ ಒಳ್ಳೆಯದಾಗುತ್ತೆಂದು ಅಭಿಪ್ರಾಯಪಟ್ಟ ಅವರು ಸಚಿವ ಸಂಪುಟ ವಿಸ್ತರಣೆ ಬಗ್ಗೆ ನನಗೆ  ಮಾಹಿತಿ ಇಲ್ಲ ಎಂದು ಉತ್ತರಿಸಿದರು.

ಬೆಂಗಳೂರಿನಲ್ಲಿ ಚಂದ್ರು ಎಂಬ ಯುವಕನ ಹತ್ಯೆ ಬಗ್ಗೆ ಗೃಹ ಸಚಿವರ ಗೊಂದಲದ ಹೇಳಿಕೆ ವಿಚಾರವಾಗಿ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಮೊದಲ ಮಾಹಿತಿ ಹಾಗೆ ಬಂದಿರುತ್ತದೆ ಎಂದು ಅವರು ಹೇಳಿದ್ದಾರೆ. ಆಮೇಲೆ ತಿದ್ದಿಕೊಂಡಿದಾರೆ. ಆರೆಸ್ಸೆಸ್ ಅವರು ಸರ್ಕಾರ ಕಂಟ್ರೋಲ್ ಮಾಡುವ ಸ್ಥಿತಿ ಏನೂ ಬಂದಿಲ್ಲ. ರಾಜ್ಯದಲ್ಲಿ ನಡೆಯುತ್ತಿರೋ ವಿವಾದಗಳ ಹಿಂದೆ ಆರೆಸ್ಸೆಸ್ ಇಲ್ಲ. ಹಿಜಾಬ್, ಹಲಾಲ್ ಇರಲಿ ಯಾವುದರಲ್ಲೂ ಆರೆಸ್ಸೆಸ್ ಬಾಗಿಯಾಗಿಲ್ಲ. ಕೆಲ ಹಿಂದೂ ಸಂಘಟನೆ ಇದರ ಹಿಂದೆ ಇದೆ. ನಾವು ಇಲ್ಲ ಎನ್ನಲ್ಲ. ಆದರೆ ಆರೆಸ್ಸೆಸ್ ಎಲ್ಲಿಯೂ ಈ ಬಗ್ಗೆ ಬಾಯ್ಬಿಟ್ಟಿಲ್ಲ. ಮುತಾಲಿಕ್, ಭಜರಂಗದಳದವರು ಮಾತಾಡಿದ್ರೆ ಆರೆಸ್ಸೆಸ್ ಎನ್ನೋಕೆ ಆಗುತ್ತಾ ಎಂದು ಪ್ರಶ್ನಿಸಿದರು.

ರಾಜ್ಯದಲ್ಲಿ ಅವಧಿ ಪೂರ್ವ ಚುನಾವಣೆ ಆಗೋದಿಲ್ಲ. ಅಂತಹ ವಿಚಾರಗಳು ಸಂಪೂರ್ಣ ಸುಳ್ಳು. ನಮ್ಮ ಪಕ್ಷದಲ್ಲಿ ಈ ವರ್ಷ ಅಭಿವೃದ್ಧಿ ಚೆನ್ನಾಗಿ ಮಾಡಿ ಚುನಾವಣೆಗೆ ಹೋಗಬೇಕು ಎಂದು ಸ್ಪಷ್ಟವಾಗಿ ನಿಲುವು ತೆಗೆದುಕೊಂಡಿದೆ. ರಾಜ್ಯದಲ್ಲಿ ಚುನಾವಣೆ ಪೂರ್ವ ಮೈತ್ರಿ ಮಾಡಿಕೊಳ್ಳುವ ಸ್ಥಿತಿ ಬಂದಿಲ್ಲ ಎಂದರು.

ಈ ಸಂದರ್ಭ ಹಾಸನ ಕ್ಷೇತ್ರದ ಶಾಸಕ ಪ್ರೀತಮ್ ಜೆ. ಗೌಡ ಇತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News