ಇಂಧನ ಬೆಲೆ ಏರಿಕೆ, ಹಳೆಯ ವಾಹನಗಳಿಗೆ ದುಬಾರಿ ಶುಲ್ಕ ಸಮಸ್ಯೆ ಬಗೆಹರಿಸಲು 1 ತಿಂಗಳು ಗಡುವು:ಲಾರಿ ಮಾಲಕರ ಸಂಘ ಎಚ್ಚರಿಕೆ
ಬೆಂಗಳೂರು, ಎ.8: ಕೇಂದ್ರ ಸರಕಾರವು ಇಂಧನ ಬೆಲೆ ಏರಿಕೆಯ ನಡುವೆ ಹಳೆಯ ವಾಹನಗಳಿಗೆ ದುಬಾರಿ ಶುಲ್ಕವನ್ನು ವಿಧಿಸಿರುವುದು ಖಂಡನೀಯವಾದದು. ಇದನ್ನು ಒಂದು ತಿಂಗಳೊಳಗೆ ಬಗೆಹರಿಸದೆ ಇದ್ದರೆ, ಮುಂದಿನ ದಿನಗಳಲ್ಲಿ ಬೃಹತ್ ಹೋರಾಟ ಮತ್ತು ಮುಷ್ಕರವನ್ನು ಹಮ್ಮಿಕೊಳ್ಳಲಾಗುವುದು ಎಂದು ಫೆಡರೇಶನ್ ಆಫ್ ಕರ್ನಾಟಕ ಸ್ಟೇಟ್ ಲಾರಿ ಓನರ್ಸ್ ಅಂಡ್ ಏಜೆಂಟ್ಸ್ ಅಸೋಸಿಯೇಶನ್ ಎಚ್ಚರಿಕೆ ನೀಡಿದೆ.
ಶುಕ್ರವಾರ ಸಂಘದ ಅಧ್ಯಕ್ಷ ಜಿ.ಆರ್. ಷಣ್ಮುಗಪ್ಪ ಮಾತನಾಡಿ, 15 ವರ್ಷದ ಹಳೆಯ ವಾಣಿಜ್ಯ ವಾಹನಗಳನ್ನು ಸಂಚರಿಸಿದಂತೆ ನಿಷೇಧ ಹೇರಲು ವಿಫಲವಾದ ಕೇಂದ್ರ ಸರಕಾರವು, ವಾಹನಗಳ ಮರು ನೋಂದಣಿ ಹಾಗೂ ವಾಹನ ದೃಢೀಕರಣ ಶುಲ್ಕಗಳನ್ನು ಹೆಚ್ಚಿಸಿ ಆದೇಶ ಹೊರಡಿಸಿದೆ. ರಾಜ್ಯದ ಸಾರಿಗೆ ಇಲಾಖೆಯಿಂದ ಇದುವರೆಗೂ ಈ ಬಗ್ಗೆ ಯಾವುದೇ ಮಾಹಿತಿ ಬಂದಿಲ್ಲ ಎಂದು ತಿಳಿಸಿದರು.
ಕಳೆದ 15 ದಿನಗಳಿಂದ ಇಂಧನ ದರ ಕ್ಷಣಕ್ಷಣಕ್ಕೂ ಏರಿಕೆಯಾಗುತ್ತಲೇ ಇದೆ. ಕಳೆದೆರಡು ವರ್ಷಗಳಿಂದ ಕೊರೋನ ಮಹಾಮಾರಿಗೆ ಇಡೀ ಸಾರಿಗೆ ವ್ಯವಸ್ಥೆಯು ಅಸ್ತವ್ಯಸ್ತವಾಗಿದೆ. ಈಗ ಇಂದನ ಬೆಲೆ ಏರಿಕೆ ಮತ್ತು ದುಬಾರಿ ಶುಲ್ಕ ಪಾವತಿ ಸಾರಿಗೆ ಉದ್ಯಮಕ್ಕೆ ಭಾರಿ ಹೊಡೆತ ನೀಡುತ್ತದೆ. ಆದ್ದರಿಂದ ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರ ಡೀಸೆಲ್ ಬೆಲೆ ಕಡಿಮೆ ಮಾಡಲು ಕ್ರಮವಹಿಸಬೇಕು ಎಂದು ಅವರು ಆಗ್ರಹಿಸಿದರು.
ರಾಜ್ಯ ಹೆದ್ದಾರಿಗಳಾದ ಚಿತ್ರದುರ್ಗ, ಬಿಜಾಪುರ, ಕೊಪ್ಪಳ, ಹಾವೇರಿ ಜಿಲ್ಲೆಗಳಲ್ಲಿ ಪ್ರವೇಶಿಸುವಾಗ ತಪಾಸಣಾ ನೆಪದಲ್ಲಿ ವಾಹನಗಳನ್ನು ತಡೆದು ಚೆಕ್ ಪೋಸ್ಟ್‍ಗಳಲ್ಲಿ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ. ಆದ್ದರಿಂದ ಬಾರ್ಡರ್ ಚೆಕ್ ಪೋಸ್ಟ್ ರದ್ದು ಮಾಡಿದರೆ ಲಾರಿ ಮಾಲಕರಿಗೆ ಅನುಕೂಲವಾಗಲಿದೆ ಎಂದು ಅವರು ಮನವಿ ಮಾಡಿದರು.
ಇದೇ ವೇಳೆ ಕೆ.ಎನ್, ಅಶ್ವಥ್ ಹರೀಶ್, ಅರವಿಂದ್ ಅಪ್ಪಾಜಿ, ಸುರೇಶ್, ಶಿವಣ್ಣ ಉಪಸ್ಥಿತರಿದ್ದರು.