ವಿದ್ಯುತ್ ಖರೀದಿಯಲ್ಲಿ 5 ರಿಂದ 6 ಸಾವಿರ ಕೋಟಿ ರೂ. ಭ್ರಷ್ಟಾಚಾರ: ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಗಂಭೀರ ಆರೋಪ

Update: 2022-04-08 18:19 GMT

ಮೈಸೂರು,ಎ.8: ವಿದ್ಯುತ್ ಖರೀದಿಯಲ್ಲಿ ವಾರ್ಷಿಕವಾಗಿ 5ರಿಂದ 6 ಸಾವಿರ ಕೋಟಿ ಕಮಿಷನ್ ಪಡೆಯುತ್ತಿರುವ ರಾಜ್ಯ ಸರ್ಕಾರ ಭಾರೀ ಭ್ರಷ್ಟಚಾರ ನಡೆಸುತ್ತಿದೆ. ಕಮಿಷನ್‍ಗಾಗಿಯೇ ವಿದ್ಯುತ್ ದರ ಏರಿಕೆ ಮಾಡಿದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ವಕ್ತಾರ ಎಂ.ಲಕ್ಷ್ಮಣ್ ಗಂಭೀರ ಆರೋಪ ಮಾಡಿದರು.

ನಗರ ಕಾಂಗ್ರೆಸ್ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಎಂ.ಲಕ್ಷ್ಮಣ್, ಬಿಜೆಪಿ ಸರ್ಕಾರ 2 ವರ್ಷದಲ್ಲಿ 5 ಬಾರಿ ವಿದ್ಯುತ್ ದರ ಹೆಚ್ಚಳ ಮಾಡಿದೆ. ದರ ಹೆಚ್ಚಿಸುವ ಮೂಲಕ ಸಾವಿರಾರು ಕೋಟಿ ರೂ. ಕಮಿಷನ್ ಪಡೆದಿದೆ ಎಂದು ಲಕ್ಷ್ಮಣ್ ದಾಖಲೆ ಪ್ರದರ್ಶಿಸಿದರು. 

ರಾಜ್ಯದಲ್ಲಿ ವಿವಿಧ ಮೂಲಗಳಿಂದ 14,574 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಸಾಮಥ್ರ್ಯ ಇದೆ. 6708 ಮೆಗಾವ್ಯಾಟ್ ಉತ್ಪಾದನೆ ಮಾಡುತ್ತಿದ್ದೇವೆ. 9451 ಮೆಗಾವ್ಯಾಟ್ ಬೇಡಿಕೆ ಇದೆ. 2643 ಮೆಗಾವ್ಯಾಟ್ ಕೊರತೆ ಇದೆ. ಕೊರತೆ ವಿದ್ಯುತ್ ಉತ್ಪಾದನೆ ಮಾಡುವ ಸಾಮಥ್ರ್ಯ ಇದ್ದಾಗಿಯೂ ಖಾಸಗಿಯವರಿಂದ ಯಾಕೇ ಖರೀದಿ ಮಾಡಲಾಗುತ್ತಿದೆ ಎಂದು ಪ್ರಶ್ನಿಸಿದರು. 

ಕೆಪಿಟಿಸಿಎಲ್ ಮುಖ್ಯಸ್ಥರಾಗಿದ್ದ ವಿ.ಪೊನ್ನುರಾಜು ಅವರು 2020ರ ಫೆ. 14ರಂದು ಮುಖ್ಯಕಾರ್ಯದರ್ಶಿಗೆ ಪತ್ರ ಬರೆದು ನಮ್ಮಲ್ಲಿಯೇ ವಿದ್ಯುತ್ ಉತ್ಪಾದಿಸುವ ಸಾಮಥ್ರ್ಯ ಇದ್ದಾಗಿಯೂ ಅವುಗಳನ್ನು ಬಂದ್ ಮಾಡಿಸಿ ಅದಾನಿ ಕಂಪನಿ ಮತ್ತು ಉಡುಪಿ ಪವರ್ ಕಂಪನಿಯಿಂದ ವಿದ್ಯುತ್ ಖರೀದಿಸಲಾಗುತ್ತಿದೆ. ಇದನ್ನು ನಿಲ್ಲಿಸಬೇಕೆಂದು ಮನವಿ ಮಾಡಿದ್ದಾರೆ. 

ಕೇಂದ್ರ ಸರ್ಕಾರ 1 ಯೂನಿಟ್ ವಿದ್ಯುತ್ ಖರೀದಿಗೆ 4 ರೂ. 70 ಪೈಸೆ ನಿಗದಿ ಮಾಡಿದೆ. ಆದರೆ ರಾಜ್ಯ ಸರ್ಕಾರ 6.80 ರೂ. ನೀಡಿ ಖರೀದಿಸುತ್ತಿದೆ. 2 ರೂ. ಹೆಚ್ಚುವರಿ ನೀಡುತ್ತಿದೆ. ಇದರಲ್ಲಿ 1 ರೂ. ಕಮಿಷನ್ ಪಡೆದುಕೊಳ್ಳುತ್ತಿದೆ. ವಾರ್ಷಿಕ 87,483 ಮಿಲಿಯನ್ ಯೂನಿಟ್‍ಗೆ ಬಿಜೆಪಿ ಸುಮಾರು 5ರಿಂದ 6 ಸಾವಿರ ಕೋಟಿ ಕಮಿಷನ್ ಪಡೆಯುತ್ತಿದೆ ಎಂದು ಆರೋಪಿಸಿದರು. 

ಮೈಸೂರಿಂದ ಹೋರಾಟ: ವಿದ್ಯುತ್ ದರ ಹೆಚ್ಚಿಸಿ ಜನರಿಗೆ ಹೊರೆಯನ್ನುಂಟು ಮಾಡಿದ್ದಾರೆ. ಕಮಿಷನ್ ಪಡೆದು ರಾಜ್ಯವನ್ನು ಲೂಟಿ ಮಾಡಲಾಗುತ್ತಿದೆ. ಇದರ ವಿರುದ್ಧ ಕಾಂಗ್ರೆಸ್ ಪಕ್ಷ ಆಂದೋಲನ ಮಾಡುತ್ತೇವೆ. ಮೈಸೂರಿನಿಂದಲೇ ಹೋರಾಟ ಶುರುವಾಗಲಿದೆ ಎಂದು ತಿಳಿಸಿದರು. 

ಉದ್ಯಮಕ್ಕೆ ಪೆಟ್ಟು: ಸರ್ಕಾರದ ಪ್ರಾಯೋಜಿತ ಸಂಘಟನೆಗಳು ಕೋಮು ಸಂಘರ್ಷಕ್ಕೆ ದಾರಿ ಮಾಡುತ್ತಿವೆ. ತಮಿಳುನಾತು ಹಣಕಾಸು ಮಂತ್ರಿ ಕರ್ನಾಟಕದ ಸ್ಥಿತಿಯನ್ನು ಟ್ವಿಟ್ ಮಾಡಿ ಉದ್ಯಮಿಗಳನ್ನು ತಮ್ಮ ರಾಜ್ಯಕ್ಕೆ ಆಹ್ವಾನಿಸಿದ್ದಾರೆ. ಇದರಿಂದ ರಾಜ್ಯದ ಉದ್ಯಮಕ್ಕೆ ದೊಡ್ಡ ಪೆಟ್ಟು ಬೀಳಲಿದೆ ಎಂದರು. 

ಶಾಸಕ ಸಿ.ಟಿ.ರವಿ ರಾಜ್ಯಕ್ಕೆ ಮಾರಕ ಎಂದು ಲಕ್ಷ್ಮಣ್ ಆಕ್ರೋಶ ಹೊರಹಾಕಿದರು. ಕೇಂದ್ರ, ರಾಜ್ಯದ ಕಾರ್ಯಕ್ರಮಗಳ ಬಗ್ಗೆ ಮಾತಾಡದ ಸಿ.ಟಿ.ರವಿ ಕಿಡಿ ಹತ್ತಿಸುವುದೇ ಕೆಲಸ. ಸಿದ್ದರಾಮಯ್ಯ ಅವರ ಬಗ್ಗೆ ಬಾಯಿಗೆ ಬಂದಂತೆ ಮಾತಾಡುವ ಈತ ರಾಜ್ಯಕ್ಕೆ ಮಾರಕ ಎಂದು ಕಿಡಿಕಾರಿದರು. 

ಗ್ಯಾಸ್ ಪೈಪ್ ಲೈನ್ ಕಾಮಗಾರಿಗೆ ಅವಕಾಶ ನೀಡುತ್ತಿಲ್ಲ ಎಂದು ಸ್ವಪಕ್ಷದ ಶಾಸಕರ ವಿರುದ್ಧವೇ ತಿರುಗಿಬಿದ್ದಿದ್ದ ಸಂಸದ ಪ್ರತಾಪ್ ಸಿಂಹ ಅವರೇ, ಸಮಸ್ಯೆ ಈಗ ಬಗೆಹರಿಯಿತೇ? ಎಂದು ಪ್ರಶ್ನಿಸಿದರು. ಶಕ್ತಿಧಾಮದಲ್ಲಿ ಎಲ್.ನಾಗೇಂದ್ರ, ರಾಮದಾಸ್ ಅವರೊಂದಿಗಿನ ಮಾತುಕತೆ ನೋಡಿದರೆ ಕಮಿಷನ್ ಸಮಸ್ಯೆ ಇತ್ಯರ್ಥವಾಗಿರುವಂತಿದೆ ಎಂದು ಟೀಕಿಸಿದರು. 

ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ವಿಚಾರಗಳಲ್ಲಿ ರಾಜ್ಯದ ಜನರು ಎಚ್ಚರಿಕೆಯಿಂದ ಇರಬೇಕು. ಇವತ್ತು ಬಿಜೆಪಿ ನಾಯಕರನ್ನು ಬೈಯುತ್ತಿದ್ದಾರೆ. ಅದಕ್ಕೂ ಮೊದಲು ಕಾಂಗ್ರೆಸ್ ಅನ್ನು ಬೈಯುತ್ತಿದ್ದರು. ಉಪ ಚುನಾವಣೆ ವೇಳೆ ಆರೆಸ್ಸೆಸ್ ವಿರುದ್ಧ ಗುಡುಗಿದ್ದರು. ಇವರ ನಿಲುವೇ ಅರ್ಥವಾಗುವುದಿಲ್ಲ. ಹಾಗಾಗಿ ಎಚ್ಚರಿಕೆಯಿಂದಿರಬೇಕು ಎಂದರು. 

ಸುದ್ದಿಗೋಷ್ಠಿಯಲ್ಲಿ ನಗರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಂ.ಶಿವಣ್ಣ, ಜಿಪಂ ಮಾಜಿ ಅಧ್ಯಕ್ಷ ಬಿ.ಎಂ.ರಾಮು, ಮಾಧ್ಯಮ ವಕ್ತಾರ ಮಹೇಶ್, ಗೀರಿಶ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News