ಚಾಮರಾಜನಗರ: ಕಾಡಾನೆ ದಾಳಿಗೆ ಕ್ಷೌರಿಕ ಬಲಿ
Update: 2022-04-09 09:27 IST
ಚಾಮರಾಜನಗರ, ಎ.9: ಕಾಡಾನೆ ದಾಳಿಗೆ ಕ್ಷೌರಿಕ ಸಾವನ್ನಪ್ಪಿದ ಘಟನೆ ಚಾಮರಾಜನಗರ ತಾಲೂಕಿನ ದೊಡ್ಡಮೂಡಹಳ್ಳಿ ಸಮೀಪ ಶುಕ್ರವಾರ ರಾತ್ರಿ ನಡೆದಿರುವುದು ವರದಿಯಾಗಿದೆ.
ಮೂಲತಃ ತಮಿಳುನಾಡಿನ ಸತ್ಯಮಂಗಲಂ ನಿವಾಸಿ ಸುರೇಶ್ (45) ಮೃತಪಟ್ಟವರಾಗಿದ್ದಾರೆ. ಇವರು ಶುಕ್ರವಾರ ರಾತ್ರಿ ಚಿಕ್ಕಮೂಡಹಳ್ಳಿಯಿಂದ ಪಡಿತರ ತರುತ್ತಿದ್ದ ವೇಳೆ ಎದುರಾದ ಕಾಡಾನೆ ದಾಳಿ ನಡೆಸಿದ ಪರಿಣಾಮ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಬೂದಿಪಡಗ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಮಕ್ಕಳಿಗೆ ಕ್ಷೌರ ಮಾಡುತ್ತಿದ್ದ ಸುರೇಶ್ ಕಳೆದ 15 ವರ್ಷಗಳಿಂದ ತಮಿಳುನಾಡಿನ ಸತ್ಯಮಂಗಲಂ ಕಡೆಯಿಂದ ಆಗಮಿಸಿ ಸಂಬಂಧಿಕರ ಮನೆಯಲ್ಲೇ ಉಳಿದುಕೊಂಡು ಜೀವನ ಸಾಗಿಸುತ್ತಿದ್ದರು.
ಘಟನಾ ಸ್ಥಳಕ್ಕೆ ಬಿ.ಆರ್. ಟಿ ಹುಲಿ ಸಂಕರಕ್ಷಿತ ಪ್ರದೇಶದ ಸಿಬ್ಬಂದಿ ಮತ್ತು ಪೂರ್ವ ಪೊಲೀಸ್ ಠಾಣೆಯ ಸಿಬ್ಬಂದಿ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.