×
Ad

ಅಮಿತ್ ಶಾ ಅವರಿಗೆ ಇಂಗ್ಲಿಷ್ ಬರಲ್ವಾ: ಕುಮಾರಸ್ವಾಮಿ ಪ್ರಶ್ನೆ

Update: 2022-04-09 13:06 IST

ಬೆಂಗಳೂರು: ಒಕ್ಕೂಟ ವ್ಯವಸ್ಥೆಯನ್ನು ಒಪ್ಪಿಕೊಂಡು ಕಳೆದ 75 ವರ್ಷಗಳಿಂದ ಒಂದೇ ತಾಯಿಯ ಮಕ್ಕಳಂತೆ ಇರುವ ರಾಜ್ಯಗಳ ನಡುವೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಹುಳಿ ಹಿಂಡಿ, ಹಿಂದಿ ಹೇರಿಕೆ ಬಗ್ಗೆ ಹೇಳಿಕೆ ನೀಡುತ್ತಿರುವುದು ಆಘಾತಕಾರಿ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

ಶನಿವಾರ ಸರಣಿ ಟ್ವೀಟ್ ಮಾಡಿರುವ ಅವರು, "ಅಮಿತ್ ಶಾ ಅವರಿಗೆ ಇಂಗ್ಲಿಷ್ ಬರಲ್ವಾ? ಅವರಿಗೆ ಪ್ರಾದೇಶಿಕ ಭಾಷೆಗಳ ಮೇಲೆ ಯಾಕೆ ಈ ಪರಿ ದ್ವೇಷ?  ನಮ್ಮ ಭಾಷೆ ನಮಗೆ ಮುಖ್ಯ. ಮಾತೃಭಾಷೆಗೇ ಅಗ್ರಸ್ಥಾನ. ಕರ್ನಾಟಕದಲ್ಲಿ ಕನ್ನಡವೇ ಮೊದಲು. ಹಿಂದಿ ನಮ್ಮ ಭಾಷೆಯಲ್ಲ. ಹಿಂದಿ ಹೇರಿಕೆ ವಿರುದ್ದ ಅಭಿಯಾನಕ್ಕೆ ನನ್ನ  ಪೂರ್ಣ ಬೆಂಬಲ ಇದೆ" ಎಂದು ಕುಮಾರಸ್ವಾಮಿ ಪ್ರಕಟಿಸಿದ್ದಾರೆ.

"ಪ್ರತಿಯೊಂದಕ್ಕೂ ಹಿಂದುತ್ವದ ಜಪ ಮಾಡಿ ಭಾವನಾತ್ಮಕ ವಿಷಯಗಳನ್ನು ಮುನ್ನೆಲೆಗೆ ತಂದು ಸಮಾಜ  ಮತ್ತು ಜನರನ್ನು ಒಡೆಯುತ್ತಿರುವ ಬಿಜೆಪಿ, ಈಗ ಭಾಷೆಯನ್ನೂ ಟೂಲ್ ಕಿಟ್ ಮಾಡಿಕೊಂಡು ವಿಭಜನೆಗೆ ಹೊರಟಿರುವುದು ದೇಶಕ್ಕೆ ಗಂಡಾಂತರಕಾರಿ" ಎಂದು ಎಚ್ಚರಿಕೆ ನೀಡಿದ್ದಾರೆ.

ಬ್ರಿಟಿಷರು ಪ್ರತಿ ಸಂಸ್ಥಾನವನ್ನು ಆಕ್ರಮಿಸಿಕೊಳ್ಳುವ ಮುನ್ನ ಒಡೆದು ಆಳುವ ನೀತಿ ಅನುಸರಿಸುತ್ತಿದ್ದರು. ಈಗ ಬಿಜೆಪಿ ಅದೇ ನೀತಿ ಮುಂದುವರೆಸಿದ್ದು, ಬ್ರಿಟೀಷರಿಗೂ ಮತ್ತು ಬಿಜೆಪಿಗೆ ಯಾವುದೇ ವ್ಯತ್ಯಾಸ ಇಲ್ಲ ಎನ್ನುವುದಕ್ಕೆ ಇದೇ ಜೀವಂತ ಸಾಕ್ಷಿ ಎಂದು ಕುಮಾರಸ್ವಾಮಿ ಟೀಕಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News