×
Ad

ಗಾಂಧಿ ಚರಕ ಹಿಡಿಯಬೇಡಿ, ಗೋಡ್ಸೆಯ ತುಪಾಕಿ ಹಿಡಿಯಿರಿ: ಚರಕದ ಮುಂದೆ ಕೂತ ತೇಜಸ್ವಿ ಸೂರ್ಯಗೆ ನೆಟ್ಟಿಗರ ಪ್ರತಿಕ್ರಿಯೆ

Update: 2022-04-09 18:21 IST
photo-twitter

ಹೊಸದಿಲ್ಲಿ: ಬೆಂಗಳೂರು ಸಂಸದ ತೇಜಸ್ವಿ ಸೂರ್ಯ ಚರಕದ ಮುಂದೆ ತೆಗೆದ ಚಿತ್ರವೊಂದು ಈಗ ಸಾಕಷ್ಟು ಟೀಕೆಗೆ ಕಾರಣವಾಗಿದೆ. 'ಗೋಡ್ಸೆಯ ಹಿಂಬಾಲಕರಿಗೆ ಗಾಂಧೀಜಿಯ ಚರಕದೊಂದಿಗೆ ಏನು ಕೆಲಸ' ಎಂದು ನೆಟ್ಟಿಗರು ಸಂಸದರನ್ನು ಪ್ರಶ್ನಿಸುತ್ತಿದ್ದಾರೆ. 

ಇತ್ತೀಚೆಗೆ ಗುಜರಾತಿನ ಸಾಬರಮತಿ ಆಶ್ರಮಕ್ಕೆ ಹೋಗಿದ್ದ ಸಂಸದ ತೇಜಸ್ವಿ ಸೂರ್ಯ, ಚರಕದ ಮುಂದೆ ನೂಲು ನೇಯುವಂತೆ ಕೆಲವು ಚಿತ್ರಗಳನ್ನು ತೆಗೆದು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ ಮಾಡಿದ್ದರು. ʼಮಹಾತ್ಮ ಗಾಂಧೀಜಿ ಅವರು ಭಾರತದ ಇತಿಹಾಸದಲ್ಲಿ ಅಳಿಸಲಾಗದ ಛಾಪು ಮೂಡಿಸಿದ್ದಾರೆ. ಇಂದು, ಬಿಜೆವೈಎಮ್‌ ಗುಜರಾತಿನ ಕಾರ್ಯಕರ್ತರೊಂದಿಗೆ ಸಬರಮತಿ ಆಶ್ರಮಕ್ಕೆ ಭೇಟಿ ನೀಡುವ ಅವಕಾಶ ನನಗೆ ಸಿಕ್ಕಿತು. ಗುಜರಾತ್‌ನಲ್ಲಿ ಗಾಂಧೀಜಿಯವರ ಜೀವನದ ಬಗ್ಗೆ ಇನ್ನಷ್ಟು ತಿಳಿಯ ಸಾಧ್ಯವಾಯಿತುʼ ಎಂದು ಅವರು ಬರೆದಿದ್ದಾರೆ. 

ಆದರೆ ಈ ಚಿತ್ರವನ್ನು ಉಲ್ಲೇಖಿಸಿ ಹಲವರು ತಮ್ಮ ಟೀಕೆಗಳನ್ನು ವ್ಯಕ್ತ ಪಡಿಸಿದ್ದು, ಗೋಡ್ಸೆ ಅನುಯಾಯಿಗಳಿಗೆ ಗಾಂಧೀಜಿಯವರ ಚರಕದೊಂದಿಗೆ ಏನು ಕೆಲಸ ಎಂದು ಪ್ರಶ್ನಿಸಿದ್ದಾರೆ. 

ಮನುಜಾಗೌಡ (@manujagowda) ಎಂಬವರು ಪ್ರತಿಕ್ರಿಯಿಸಿ, “ನೀವೆಲ್ಲಾ ಗೋಡ್ಸೇ ಅನುಯಾಯಿಗಳು ಅಲ್ವಾ ನಿಮಗೂ ಚರಕಕ್ಕೂ ಆಗಿಬರೋಲ್ಲ ಬಿಡಿ, ನಿಮ್ಮಂತವರು ಏನಿದ್ರೂ ಗೋಡ್ಸೆಯಂತೆ ತುಪಾಕಿ ಹಿಡಿದು ನಿಲ್ಲಬೇಕು, ಚರಕ ಅಲ್ಲಪ್ಪೋ” ಎಂದು ತೀಕ್ಷ್ಣವಾಗಿ ಟೀಕಿಸಿದ್ದಾರೆ. 

ಕಾಂಗ್ರೆಸ್‌ ವಕ್ತಾರೆ ಲಾವಣ್ಯ ಬಲ್ಲಾಲ್‌ ಕೂಡಾ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ʼಇದಕ್ಕಿಂತ ದೊಡ್ಡ ದುರಂತ ಇನ್ನೊಂದಿಲ್ಲ, ಗಾಂಧಿ ಹಂತಕರು ಅವರ ಆಶ್ರಮಕ್ಕೆ ಭೇಟಿ ನೀಡಿ ಅವರ ಪರಂಪರೆಯನ್ನು ಸ್ವಾಧೀನಪಡಿಸಿಕೊಳ್ಳುತ್ತಾರೆ. ಈ ಜನರು ಉಗುಳುವ ಸುಳ್ಳುಗಳಿಂದ ಅವರ ಸ್ಮರಣೆಯು ಕಳಂಕಿತವಾಗಿದೆ ಆದರೆ ಫೋಟೋಗಳಿಗೆ ಈ ಗೋಡ್ಸೆ ಅಭಿಮಾನಿಗಳು ಗಾಂಧಿಯನ್ನು ಬಳಸುತ್ತಾರೆ. ಅವರು ಮತಗಳಿಗಾಗಿ ಗಾಂಧಿಯ ತತ್ವವನ್ನು ಕೊಲ್ಲುತ್ತಾರೆ, ಆದರೂ ಇಂತಹ ಅಗ್ಗದ ಪ್ರಚಾರಗಳನ್ನೂ ಪಡೆಯುತ್ತಾರೆʼ ಎಂದು ಟ್ವೀಟ್‌ ಮಾಡಿದ್ದಾರೆ. 

ಶರಣು (@sharanu_ja) ಎಂಬವರು ಪ್ರತಿಕ್ರಯಿಸಿ, ʼಬಾಯಲ್ಲಿ ಗಾಂಧಿ, ಎದೆಯಲ್ಲಿ ಗಾಂಧಿ ಹಂತಕ ಗೋಡ್ಸೆ, ಕೋಮುವಾದಿ ಸಂಘಿ ತೇಜಸ್ವಿ ಸೂರ್ಯ ಅವರಲ್ಲಿ ಒಂದು ಪ್ರಶ್ನೆ, ಆರೆಸ್ಸೆಸ್ ಕಾರ್ಯಕರ್ತ ಗಾಂಧಿಯನ್ನು ಏಕೆ ಕೊಂದ? ಸಾಕು ನಿಮ್ಮ ರಾಜಕೀಯ ನಾಟಕ ನಿಲ್ಲಿಸಿʼ ಎಂದು ಬರೆದಿದ್ದಾರೆ. 

ಗಾಂಧಿ ಚರಕ ಬ್ರಿಟೀಷರಿಗೆ ಕೊಟ್ಟ ಅಹಿಂಸಾತ್ಮಕ ಹೊಡೆತವಾಗಿತ್ತು. ತೇಜಸ್ವಿ ಸೂರ್ಯರ ಚರಕ ಗಾಂಧಿಗೆ ನೀಡಿದ ಹಿಂಸಾತ್ಮಕ ಹೊಡೆತ ಎಂದು ಸಂದೀಪ್‌ @sandeep_PT ಎಂಬವರು ಬರೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News