ಚಿಕ್ಕಮಗಳೂರು: ರೈತರು, ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದ್ದ ಕಾಡಾನೆ ಸೆರೆ ಹಿಡಿದ ಅರಣ್ಯ ಸಿಬ್ಬಂದಿ

Update: 2022-04-09 15:03 GMT

ಚಿಕ್ಕಮಗಳೂರು, ಎ.9: ಕಳೆದ ಕೆಲ ತಿಂಗಳಿನಿಂದ ತಾಲೂಕಿನ ಕೆಲ ಗ್ರಾಮಗಳಲ್ಲಿ ರೈತರ ಹೊಲ ಗದ್ದೆಗಳಿಗೆ ದಾಂಗುಡಿ ಇಟ್ಟು ಬೆಳೆ ನಾಶ ಮಾಡುತ್ತಿದ್ದ ಹಾಗೂ ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದ್ದ ಒಂಟಿ ಸಲಗವನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿದ್ದು, ಸೆರೆ ಹಿಡಿಯಲಾದ ಸಲಗವನ್ನು ಬಂಡೀಪುರ ಅರಣ್ಯಕ್ಕೆ ಬಿಟ್ಟಿದ್ದಾರೆ. 

ತಾಲೂಕಿನ ಹಂಪಾಪುರ, ಬೀಕನಹಳ್ಳಿ, ಚುರ್ಚೆಗುಡ್ಡ ಸುತ್ತಮುತ್ತಲ ಗ್ರಾಮಗಳಲ್ಲಿ ಕಳೆದ 4 ತಿಂಗಳುಗಳಿಂದ ಕಾಡಾನೆಯೊಂದು ಭಾರೀ ಕಾಟ ನೀಡುತ್ತಿದ್ದು, ಚಿಕ್ಕಮಗಳೂರು ತಾಲೂಕಿನ ವಿವಿಧ ಗ್ರಾಮಗಳಲ್ಲಿ ಹಗಲು ರಾತ್ರಿ ಎನ್ನದೇ ರಾಜಾರೋಷವಾಗಿ ಓಡಾಡುತ್ತಾ ರೈತರು ಜಮೀನುಗಳಲ್ಲಿ ಬೆಳೆದ ಬೆಳೆಗಳಲ್ಲಿ ತುಳಿದು, ತಿಂದು ಭಾರೀ ನಷ್ಟ ಉಂಟು ಮಾಡಿತ್ತು. ಈ ಗ್ರಾಮಗಳ ಜನರು ಪ್ರತಿದಿನ ಕಾಡಾನೆಯ ಆತಂಕದಲ್ಲೇ ದಿನಕಳೆಯುತ್ತಿದ್ದರು. ರಾತ್ರಿ ವೇಳೆ ಒಂಟಿ ಸಲಗದ ಭೀತಿಯಿಂದ ಗ್ರಾಮೀಣ ಭಾಗದ ಜನರು ಮನೆಗಳಿಂದ ಹೊರ ಬರಲೂ ಹಿಂಜರಿಯುವಂತಾಗಿತ್ತು. ಕಾಡಾನೆಯ ಭೀತಿಗೆ ರೈತರು ಹೊಲ ಗದ್ದೆಗಳಲ್ಲಿ ಡಿಜೆ ಸೌಂಡ್ ಅಳವಡಿಸಿ ಆನೆಗಳಿಂದ ಬೆಳೆ, ಪ್ರಾಣ ಕಾಪಾಡಿಕೊಳ್ಳಲು ಹರಸಾಹಸ ಪಟ್ಟಿದ್ದರು. 

ಈ ಹಿನ್ನೆಲೆಯಲ್ಲಿ ಒಂಟಿ ಸಲಗವನ್ನು ಸೆರೆ ಹಿಡಿಯುವಂತೆ, ಕಾಡಿಗಟ್ಟುವಂತೆ ಜನರು ಅರಣ್ಯ ಇಲಾಖೆಗೆ ಪದೇ ಪದೇ ಒತ್ತಡ ತಂದಿದ್ದರು. ಒಂಟಿ ಸಲಗವನ್ನು ಸೆರೆ ಹಿಡಿಯಲು ಕಳೆದ 2 ವಾರಗಳಿಂದ ಅರಣ್ಯ ಇಲಾಖೆ ಸಿಬ್ಬಂದಿ 5 ಆನೆಗಳೊಂದಿಗೆ ಕಾರ್ಯಾಚರಣೆ ನಡೆಸುತ್ತಿದ್ದರು. ಶನಿವಾರ ಮುಂಜಾನೆ ಒಂಟಿ ಸಲಗ ಚಿಕ್ಕಮಗಳೂರು ನಗರ ಸಮೀಪದ ಬೀಕನಹಳ್ಳಿ ಗ್ರಾಮದಲ್ಲಿರುವುದನ್ನು ಪತ್ತೆ ಹಚ್ಚಿ ಕಾಡಾನೆಯನ್ನು ಸೆರೆ ಹಿಡಿಯಲು ಕಾರ್ಯಾಚರಣೆ ಆರಂಭಿಸಿದ ಸಿಬ್ಬಂದಿ ಹರಸಾಹಸಪಟ್ಟು ಬೀಕನಹಳ್ಳಿಯಲ್ಲಿ ಒಂಟಿ ಸಲಗವನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಕಳೆದ 2ವಾರಗಳ ಹಿಂದೆ ಒಂಟಿ ಸಲಗವನ್ನು ಸೆರೆ ಹಿಡಿಯುವ ಕಾರ್ಯಾಚರಣೆಗೆ ಮುಂದಾದ ಅರಣ್ಯ ಇಲಾಖೆ ಅಧಿಕಾರಿಗಳು ನಾಗರಹೊಳೆಯಿಂದ ಭೀಮ ಮತ್ತು ಅರ್ಜುನ ಎಂಬ ಸಾಕಾನೆಗಳನ್ನು ಚಿಕ್ಕಮಗಳೂರಿಗೆ ಕರೆ ತಂದು ಜನರ ಭೀತಿಗೆ ಕಾರಣವಾಗಿದ್ದ ಒಂಟಿ ಸಲಗವನ್ನು ಸೆರೆ ಹಿಡಿಯಲು ಕಾರ್ಯಾಚರಣೆ ಆರಂಭಿಸಿದ್ದರು. ಕಳೆದೊಂದು ವಾರದ ಹಿಂದೆ ತಾಲೂಕಿನ ಚರ್ಚೆಗುಡ್ಡ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸುವ ವೇಳೆ ಸಾಕಾನೆಗಳ ಮೇಲೆ ಕಾಡಾನೆ ಏಗರಿ ಬಂದಿದ್ದು, ಈ ವೇಳೆ ಅರಣ್ಯ ಇಲಾಖೆ ಸಿಬ್ಬಂದಿ ಗಾಳಿಯಲ್ಲಿ ಗುಂಡು ಹಾರಿಸಿದ್ದು, ಆನೆ ಮಾವುತನಿಗೆ ಗುಂಡು ತಗುಲಿ ಸಣ್ಣಪುಟ್ಟ ಗಾಯಗಳಾಗಿ ಆಸ್ಪತ್ರೆಗೆ ದಾಖಲಾಗಿದ್ದರು.

ಆದರೆ ರೈತರಿಗೆ ಭಾರೀ ಕಾಟ ನೀಡುತ್ತಿದ್ದ ಒಂಟಿ ಸಲಗವನ್ನು ಸೆರೆ ಹಿಡಿಯುವಲ್ಲಿ ಹಠಕ್ಕೆ ಬಿದ್ದ ಅರಣ್ಯ ಇಲಾಖೆ ಸಿಬ್ಬಂದಿ ನಾಗರ ಹೊಳೆಯ ಭೀಮ ಮತ್ತು ಅರ್ಜುನ ಎಂಬ ಸಾಕಾನೆಗಳೊಂದಿಗೆ ಜೊತೆಗೆ ಶಿವಮೊಗ್ಗ ಜಿಲ್ಲೆಯ ಸಕ್ರೇಬೈಲು ಆನೆ ಬಿಡಾರದ ಬಾಲಣ್ಣ, ಸಾಗರ್ ಮತ್ತು ಭಾನುಮತಿ ಎಂಬ ಮತ್ತೆ 3 ಆನೆಗಳನ್ನು ಕರೆಸಿಕೊಳ್ಳಲಾಗಿತ್ತು. ಒಂಟಿ ಸಲಗ ಸೆರೆ ಹಿಡಿಯುವಲ್ಲಿ ಭಾನುಮತಿ ಎಂಬ ಹೆಣ್ಣಾನೆಯನ್ನೂ ಕರೆ ತರಲಾಗಿತ್ತು. 5 ಸಾಕಾನೆ ಮತ್ತು ಮಾವುತರು, ನಾಗರಹೊಳೆಯ 15ಜನ ಅರಣ್ಯ ಸಿಬ್ಬಂದಿ, ಶಿವಮೊಗ್ಗ ಸಕ್ರೇಬೈಲು ಆನೆ ಬಿಡಾರದ 15 ಜನ ಸಿಬ್ಬಂದಿ ಸೇರಿದಂತೆ ಶಿವಮೊಗ್ಗದ ಪಶುವೈದ್ಯ ಡಾ.ವಿನಯ್ ಹಾಗೂ ಬಂಡೀಪುರದ ಡಾ.ವಾಸಿಮ್ ಸೇರಿದಂತೆ 100 ಜನ ಸಿಬ್ಬಂದಿ ಶನಿವಾರ ಬೆಳಗ್ಗೆ ಕಾರ್ಯಾಚರಣೆಗಿಳಿದು ಮಧ್ಯಾಹ್ನದ ಹೊತ್ತಿನಲ್ಲಿ ಉಪಟಳ ನೀಡುತ್ತಿದ್ದ ಒಂಟಿ ಸಲಗವನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. 

ಬೀಕನಹಳ್ಳಿ ಸಮೀಪ ಬೆಳಗ್ಗೆ 10ರ ಸಮಯದಲ್ಲಿ 5 ಸಾಕಾನೆಗಳು ಒಂಟಿ ಸಲಗವನ್ನು ಸುತ್ತು ಸುತ್ತುವರಿಯುತ್ತಿದ್ದಂತೆ ಪಶು ವೈದ್ಯರು ವೈದರು ಒಂಟಿ ಸಲಗಕ್ಕೆ ಅರಿವಳಿಕೆ ಚುಚ್ಚುಮದ್ಧು ನೀಡಿದರು. ಕಾಡಾನೆ ಪ್ರಜ್ಞೆ ತಪ್ಪುತ್ತಿದ್ದಂತೆ ಕಾಡಾನೆಯನ್ನು ಹಗ್ಗ ಮತ್ತು ಸರಪಳಿಯಿಂದ ಬಂದಿಸಲಾಯಿತು. ಬಳಿಕ ಸಾಕಾನೆಗಳ ಸಹಾಯದಿಂದ ಮತ್ತು ಕ್ರೇನ್ ಮೂಲಕ ಒಂಟಿ ಸಲಗವನ್ನು ಲಾರಿಗೆ ಹತ್ತಿಸಿ ಲಾರಿಯ ಮೂಲಕ ಬಂಡೀಪುರ ಅಭಯಾರಣ್ಯಕ್ಕೆ ರವಾನಿಸಲಾಯಿತು. ಒಂಟಿ ಸಲಗದ ಉಪಟಳದಿಂದ ಕಳೆದ ಅನೇಕ ದಿನಗಳಿಂದ ಜೀವಭಯದಲ್ಲಿದ್ದ ಜನರು ಸದ್ಯ ನಿಟ್ಟುಸಿರು ಬಿಟ್ಟಿದ್ದು, ಅರಣ್ಯ ಇಲಾಖೆ ಡಿಎಫ್‍ಒ ಕ್ರಾಂತಿ ಸೇರಿದಂತೆ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಸಿಬ್ಬಂದಿಗೆ ಗ್ರಾಮಸ್ಥರು ಕೃತಜ್ಞತೆ ಸಲ್ಲಿಸಿದ್ದಾರೆ.

ಕಾಫಿನಾಡಿನಲ್ಲಿ ಇತ್ತೀಚೆಗೆ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ಚಿಕ್ಕಮಗಳೂರು ತಾಲೂಕಿನ ಆಲ್ದೂರು ಅರಣ್ಯ ವಲಯದಲ್ಲಿ ಕೆಲ ತಿಂಗಳುಗಳ ಹಿಂದೆ ಅರಣ್ಯ ಇಲಾಖೆಯ ಸಿಬ್ಬಂದಿಯೊಬ್ಬರನ್ನು ಕಾಡಾನೆ ಬಲಿ ಪಡೆದಿದ್ದಲ್ಲದೇ ಇತ್ತೀಚೆಗೆ ಆಲ್ದೂರು ಸಮೀಪದ ಕೆಳಗೂರು ಗ್ರಾಮದಲ್ಲಿ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕ ಮಹಿಳೆಯೊಬ್ಬರನ್ನು ಕಾಡಾನೆ ತುಳಿದು ಕೊಂದಿತ್ತು. ಈ ಹಿನ್ನೆಲೆಯಲ್ಲಿ ಕಾಡಾನೆಗಳ ಹಾವಳಿ ನಿಯಂತ್ರಣಕ್ಕೆ ಅರಣ್ಯ ಇಲಾಖೆ ವಿಫಲವಾಗಿದೆ ಎಂಬ ಆಕ್ರೋಶ ವ್ಯಕ್ತವಾಗಿದ್ದು, ಇತ್ತೀಚೆಗೆ ಕಾಡಿನಿಂದ ನಾಡಿಗೆ ಬಂದು ರಾತ್ರಿ, ಹಗಲಿನ ವೇಳೆ ಆಹಾರ ಅರಸಿ ರೈತರು, ಸಾರ್ವಜನಿಕರಲ್ಲಿ ಪ್ರಾಣ ಭೀತಿ ಉಂಟು ಮಾಡಿದ್ದ ಒಂಟಿ ಸಲಗವನ್ನು ಕಾಡಿಗೆ ಅಟ್ಟಿದರೂ ಮತ್ತೆ ಮತ್ತೆ ಕಾಟ ನೀಡುತ್ತಾ ಅರಣ್ಯ ಇಲಾಖೆಗೆ ಸವಾಲಾಗಿದ್ದ ಆನೆಯನ್ನು ಅಂತಿಮವಾಗಿ ಸೆರೆ ಹಿಡಿದು ಬಂಡೀಪುರ ಅರಣ್ಯಕ್ಕೆ ಬಿಡುವಲ್ಲಿ ಅರಣ್ಯ ಇಲಾಖೆ ಅಧಿಕಾರಿ, ಸಿಬ್ಬಂದಿ ಯಶಸ್ವಿಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News