ಟಿಪ್ಪು ಈ ನಾಡಿನ ಮಣ್ಣಿನ ಮಗ, ಇಲ್ಲ ಎಂದು ಹೇಳಲು ಸಾಧ್ಯವೇ: ಎಚ್.ವಿಶ್ವನಾಥ್ ಪ್ರಶ್ನೆ
ಮೈಸೂರು: ಟಿಪ್ಪು ಸುಲ್ತಾನ್ ಈ ನಾಡಿನ ಮಣ್ಣಿನ ಮಗ, ಅದನ್ನು ಇಲ್ಲ ಎಂದು ಹೇಳಲು ಯಾರಿಂದಲೂ ಸಾಧ್ಯವಿಲ್ಲ, ಚರಿತ್ರೆಯನ್ನು ಸುಳ್ಳಾಗಿಲು ಸಾಧ್ಯವೇ ಇಲ್ಲ ಎಂದು ವಿಧಾನಪರಿಷತ್ ಸದಸ್ಯ ಅಡಗೂರು ಎಚ್.ವಿಶ್ವನಾಥ್ ಹೇಳಿದ್ದಾರೆ.
ಟಿಪ್ಪು ಈ ನಾಡಿನ ಮಣ್ಣಿನ ಮಗ. ಅದನ್ನು ಸುಳ್ಳು ಎಂದು ಹೇಳಲು ಯಾರಿಂದಲೂ ಸಾಧ್ಯವಿಲ್ಲ. ಇಂದು ಟಿಪ್ಪು ಬಗ್ಗೆ ಅನೇಕರು ಟೀಕೆ ಮಾಡಬಹುದು. ಕೆಲವು ವಿಚಾರಗಳಲ್ಲಿ ಬದಲಾವಣೆ ಮಾಡುತ್ತೇವೆ ಎಂದು ಹೇಳಬಹುದು ಆದರೆ ಚರಿತ್ರೆ ಬದಲಿಸಲು ಸಾಧ್ಯವಿಲ್ಲ. ಟಿಪ್ಪು ಈ ದೇಶದ ಎಲ್ಲರ ಹೃದಯದಲ್ಲಿ ಹಚ್ಚ ಹಸಿರಾಗಿ ಉಳಿದಿದ್ದಾರೆ ಎಂದು ತಿಳಿಸಿದರು.
ಪ್ರೊ.ಪಿ.ವಿ.ನಂಜರಾಜ ಅರಸ್ ಅವರು ಟಿಪ್ಪು ಮಾನ್ಯತೆ ಸಿಗದ ಸುಲ್ತಾನ್ ಎಂದಿದ್ದಾರೆ. ಆದರೆ, ಟಿಪ್ಪು ಜಗತ್ತಿನ ಮಾನ್ಯತೆಗೆ ಒಳಗಾದ ಚಕ್ರವರ್ತಿ. ಸೂರ್ಯನ ಪ್ರಕಾಶಕ್ಕೆ ಪರದೆ ಎಳೆಯಲು ಸಾಧ್ಯವೇ? ಆಗಲ್ಲ. ಕಾಮಾಲೆ, ಮತಾಂಧ ಪೊರೆ ಕಳಚಿ ಟಿಪ್ಪು ಸುಲ್ತಾನ್ ಅನ್ನು ಶುದ್ಧ ಶ್ವೇತ ಕಣ್ಣುಗಳಿಂದ ನೋಡಬೇಕಿದೆ ಎಂದರು.
ಟಿಪ್ಪು ನಾಡಿನ ಮಣ್ಣಿನ ಮಗ. ಇಲ್ಲ ಎಂದು ಹೇಳಲು ಸಾಧ್ಯವೇ? ಚರಿತ್ರೆ ಸುಳ್ಳಾಗಿಸಲು ಸಾಧ್ಯವೇ? 250 ವರ್ಷಗಳ ಹಿಂದೆ ಕೊಡಗಿನಲ್ಲಿ 80 ಸಾವಿರ ಜನರನ್ನು ಟಿಪ್ಪು ಕೊಲೆ ಮಾಡಿದ್ದಾನೇ ಎನ್ನುತ್ತಾರೆ. ಆಗ ಅಷ್ಟು ಜನರಿದ್ದರೇ? ತಮ್ಮನ್ನು ತಾವೇ ಪ್ರಶ್ನಿಸಿಕೊಳ್ಳಬೇಕು ಎಂದು ನುಡಿದರು.
ಟಿಪ್ಪು ಸುಲ್ತಾನ್ ಯಾರಿಗೂ ತಲೆಬಾಗಲಿಲ್ಲ. ಮಂಡಿಯೂರಲಿಲ್ಲ. ಪಠ್ಯದಿಂದ ಟಿಪ್ಪು ಚರಿತ್ರೆ ತೆಗೆದ ಮಾತ್ರಕ್ಕೆ ಭಾರತೀಯರ ಹೃದಯ ಸಾಮ್ರಾಜ್ಯದಲ್ಲಿರುವ ಟಿಪ್ಪು ಮರೆಯಾಗುವನೇ? ಟಿಪ್ಪು ಮುಸ್ಲಿಂನಾಗಿ ಹುಟ್ಟಿದ ರಾಷ್ಟ್ರೀಯನಾಗಿ ಬದುಕಿ ಭಾರತಕ್ಕೆ ಗೌರವ ತಂದುಕೊಟ್ಟ. ಇದನ್ನು ಸುಳ್ಳು ಅನ್ನಲಾಗದು ಎಂದರು.
ಜಗತ್ತಿನಲ್ಲಿ ಅನೇಕ ಕ್ರಾಂತಿಗಳು ನಡೆದಿದೆ. ಪ್ರತಿಯೊಂದು ಕ್ರಾಂತಿಗಳು ಒಂದಲ್ಲಾ ಒಂದು ರೀತಿ ಬದಲಾವಣೆ ತಂದಿದೆ. ಆದರೆ ಯಾವ ಕ್ರಾಂತಿಯೂ ತರಲಾರದಷ್ಟು ಕ್ರಾಂತಿಯನ್ನು ಪುಸ್ತಕಗಳು ತಂದಿದೆ. ನಾವು ಒಪ್ಪಲಿ ಒಪ್ಪದಿರಲಿ ಮಹಾಭಾರತ, ರಾಮಾಯಣ, ಬೈಬಷಲ್, ಕುರಾನ್, ಬುದ್ದನ ಭೋದನೆ ಅಂಬೇಡ್ಕರ್ ಭೋದನೆಗಳು ಜಗತ್ತಿನ ಜನರನ್ನು ಇನ್ನೂ ಪ್ರಭಾವಗೊಳಿಸಿ ಮುನ್ನಡೆಸುತ್ತಿದೆ.
-ಜಸ್ಟೀಸ್ ಎಚ್.ಎನ್.ನಾಗಮೋಹನ ದಾಸ್, ನಿವೃತ್ತ ನ್ಯಾಯಾಧೀಶ.