ಧಾರವಾಡ: ಮುಸ್ಲಿಂ ವರ್ತಕರ ತಳ್ಳುಗಾಡಿ ಧ್ವಂಸಗೊಳಿಸಿ ಹಣ್ಣುಗಳನ್ನು ನೆಲಕ್ಕೆಸೆದ ಶ್ರೀರಾಮಸೇನೆ ಕಾರ್ಯಕರ್ತರು

Update: 2022-04-09 16:04 GMT
Photo: Twitter (Screen Shot)

ಧಾರವಾಡ: ಇಲ್ಲಿನ ನುಗ್ಗಿಕೇರಿ ಗ್ರಾಮದ ಹನುಮಾನ್ ದೇವಸ್ಥಾನದ ಹೊರಗಡೆ ಇರುವ ಮುಸ್ಲಿಮರಿಗೆ ಸೇರಿದ ನಾಲ್ಕು ಅಂಗಡಿಗಳನ್ನು ಶನಿವಾರ ಶ್ರೀರಾಮ ಸೇನೆಯ ಸದಸ್ಯರು ಬಲವಂತವಾಗಿ ಮುಚ್ಚಿಸಿದ್ದಾರೆ ಎಂದು news9live.com ವರದಿ ಮಾಡಿದೆ. ಹಿಂದೂ ಪರ ಸಂಘಟನೆಯ ಸದಸ್ಯರು ಮುಸ್ಲಿಂ ಮಾರಾಟಗಾರರ ತಳ್ಳುಗಾಡಿಯನ್ನು ಧ್ವಂಸಗೊಳಿಸಿದ್ದು ವರ್ತಕರು ಮಾರಾಟಕ್ಕೆ ತಂದಿದ್ದ ಕಲ್ಲಂಗಡಿಗಳನ್ನು ನಾಶಪಡಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇನ್ನೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ವರದಿ ಹೇಳಿದೆ.

ದೇವಾಲಯದ ಆವರಣದ ಬಳಿ (ಹಿಂದೂಯೇತರರು) ಅಂಗಡಿಗಳನ್ನು ಇಡಬೇಡಿ ಎಂದು ಅವರಿಗೆ ಎಚ್ಚರಿಕೆ ನೀಡಿದ್ದರೂ, ಅವರಲ್ಲಿ ಕೆಲವರು ತಮ್ಮ ವಸ್ತುಗಳನ್ನು ದೇವಸ್ಥಾನದ ಸಮೀಪ ಮಾರಾಟ ಮಾಡುತ್ತಿದ್ದಾರೆ ಎಂದು ಶ್ರೀರಾಮ ಸೇನೆ ಸದಸ್ಯರು ಹೇಳಿದ್ದಾರೆ.

 ಅದಾಗ್ಯೂ, ಅಂತಹ ಯಾವುದೇ ಎಚ್ಚರಿಕೆಯನ್ನು ನಾನು ಸ್ವೀಕರಿಸಿರಲಿಲ್ಲ ಎಂದು ಧ್ವಂಸಕ್ಕೊಳಗಾದ ಗಾಡಿಯ ಮಾಲಿಕ ನಬಿಸಾಬಿ ಹೇಳಿದ್ದಾರೆ.

 “ಏಕಾಏಕಿ ಬಂದ ಅವರು ನನಗೆ ಥಳಿಸತೊಡಗಿದರು. ಇಲ್ಲಿ ಅಂಗಡಿ ಇಡಬಾರದೆಂದು ಅವರು ಎಚ್ಚರಿಕೆ ನೀಡಿರುವುದಾಗಿ ಹೇಳಿದ್ದಾರೆ, ಆದರೆ, ಅದರ ಬಗ್ಗೆ ನನಗೆ ಗೊತ್ತಿರಲಿಲ್ಲ. ನಾನು ತಂದಿದ್ದ ಕಲ್ಲಂಗಡಿಗಳನ್ನು ಪ್ಯಾಕ್‌ ಮಾಡಲೂ ನನಗೆ ಸಮಯ ನೀಡಿಲ್ಲ, ನಾನು ಕೊಂಡುಕೊಂಡಿದ್ದ ಎಲ್ಲಾ ಕಲ್ಲಂಗಡಿಗಳನ್ನು ಅವರು ನಾಶಪಡಿಸಿದರು. ಸುಮಾರು 8000 ರುಪಾಯಿ ನನಗೆ ನಷ್ಟವಾಗಿದೆ. ಇಲ್ಲಿ ನಾನು ಕಳೆದ 15 ವರ್ಷಗಳಿಂದ ವ್ಯಾಪಾರ ಮಾಡುತ್ತಿದ್ದೇನೆ, ಯಾರೂ ಇದುವರೆಗೂ ವಿರೋಧ ವ್ಯಕ್ತಪಡಿಸಿರಲಿಲ್ಲ, ಮುಸ್ಲಿಮರಿಂದ ಏನನ್ನೂ ಖರೀದಿಸಬೇಡಿ ಎಂದು ಅವರು ಕಿರುಚುತ್ತಿದ್ದರು” ಎಂದು ನಬಿಸಾಬಿ ಹೇಳಿದ್ದಾರೆ.

 ಘಟನೆ ಬಗ್ಗೆ ಮಾತನಾಡಿರುವ ದೇವಸ್ಥಾನ ಅರ್ಚಕ ನರಸಿಂಹರಾವ್‌ ದೇಸಾಯಿ, ʼದೇವಸ್ಥಾನ ಆಡಳಿತ ಸಮಿತಿ ಸಭೆ ಬಳಿಕ ನಿರ್ಧಾರ ತೆಗೆದುಕೊಳ್ಳಲಾಗುವುದುʼ ಎಂದು ತಿಳಿಸಿದ್ದಾರೆ.

 “ಇವತ್ತು ಶನಿವಾರ, ವಿಪರೀತ ಜನಸಂದಣಿ ಇತ್ತು, ಹಾಗಾಗಿ, ಹೊರಗೆ ನಡೆದ ಘಟನೆಗಳು ಯಾವುದೂ ನನಗೆ ಗೊತ್ತಾಗಿರಲಿಲ್ಲ, ಹಿಂದೂಯೇತರರಿಗೆ ಅಂಗಡಿ ಇಡಲು ಅವಕಾಶ ನೀಡಬಾರದೆಂದು ಅವರು ಮನವಿ ನೀಡಿದ್ದಾರೆ, ರವಿವಾರ ನಡೆಯಲಿರುವ ದೇವಸ್ಥಾನ ಸಮಿತಿಯ ಸಭೆಯ ಬಳಿಕ ನಿರ್ಧಾರ ತೆಗೆದುಕೊಳ್ಳಲಾಗುವುದು” ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News