ಶೂದ್ರ ಪದವನ್ನು ಎಲ್ಲ ನಿಘಂಟುಗಳಿಂದ ಕಿತ್ತು ಹಾಕಿ: ಹಂಸಲೇಖ

Update: 2022-04-09 18:13 GMT

ಚಿತ್ರದುರ್ಗ, ಎ.9: ಭಾರತದ ಎಲ್ಲ ನಿಘಂಟುಗಳಿಂದ ಶೂದ್ರ ಪದನ್ನು ತೆಗೆದು ಹಾಕಬೇಕು. ‘ಶೂದ್ರ’ ಪದಕ್ಕೆ ಪರ್ಯಾಯವಾಗಿ ‘ಶುದ್ಧ’ ಬಳಕೆಗೆ ಬರಬೇಕು. ಪ್ರತಿ ಕೇಂದ್ರದಲ್ಲೂ ಶುದ್ಧತ್ವ ಬೇಕು ಎಂದು ಸಂಗೀತ ನಿರ್ದೇಶಕ ಹಂಸಲೇಖ ಹೇಳಿದ್ದಾರೆ.

ಚಿತ್ರದುರ್ಗದ ತರಾಸು ರಂಗಮಂದಿರದಲ್ಲಿ ಮಾನವ ಬಂಧುತ್ವ ವೇದಿಕೆ ವತಿಯಿಂದ ಆಯೋಜಿಸಲಾಗಿದ್ದ ರಾಜ್ಯ ಬಂಧುತ್ವ ಅಧಿವೇಶನದ ಸಮಾರೋಪ ಸಮಾರಂಭದಲ್ಲಿ ಮಾತಾಡಿದ ಅವರು, ಇವತ್ತಿನಿಂದ ನಾವು ಶುದ್ಧವಾಗಬೇಕು. ದೇಶದಲ್ಲಿ ನಾವು ಶುದ್ಧರು. ನಾವು ಶುದ್ಧರೇ ಆಗಿದ್ದೇವೆ. ಇದನ್ನು ನಿಮ್ಮ ಪ್ರಣಾಳಿಕೆಯಲ್ಲಿ ಸೇರಿಸಿಕೊಳ್ಳಬೇಕೆಂದು ಎಂದರು.

ಸದೃಢವಾಗಿರುವ ಎಂದೂ ಸೋಲದ ಯೋಧರಿಗೆ ವಿಷಭರಿತ ಸೇಬುಗಳನ್ನು ಹಂಚಲಾಗುತ್ತಿದೆ. ನೀವು ಬುದ್ಧ ಆಗಬೇಡಿ, ಶುದ್ಧರಾಗಿ ಸಾಕು. ಬಂಧುತ್ವ ಎಂತಹ ಅಧ್ಬುತ ಮಾತು. ಬಂಧುಗಳೂ ದಾಯಾದಿಗಳೂ ಮನುಷ್ಯರೇ. ಬಂಧುತ್ವದಲ್ಲಿ ಅದ್ಭುತವಾದ ಶಕ್ತಿ ಇದೆ. ನಾವು ಮಾಡುವ ಕೆಲಸದಲ್ಲಿ ಶುದ್ಧತೆ ಇರಬೇಕೆಂದು ಕಿವಿಮಾತು ಹೇಳಿದರು.

ಸಂವಿಧಾನ ಬಂತು ಯುದ್ಧ ನಿಂತಿತು. ಬೇಡರು ಸೇರಿದಂತೆ ಶೇ.74ರಷ್ಟು ಜನ ಅಕ್ಷರ ಕಲಿತರು. ಸಂವಿಧಾನ ಯುದ್ಧ ಮಾಡುವುದನ್ನು ನಿಲ್ಲಿಸಿದೆ
ನಾನು ಕಂಡ ಮೇರುನಟ ರಾಜ್ ಕುಮಾರ್ ಅವರು ರಾಜಕೀಯಕ್ಕೆ ಬರದೆ ಕನ್ನಡ ನುಡಿನಾಡಿಯಾಗಿ ಬಂದರು. ಅವರು ಚಿತ್ರರಂಗಕ್ಕೆ ಪ್ರವೇಶಿಸಿದ್ದು ಚಿತ್ರದುರ್ಗದಿಂದ. ಹಂಸಲೇಖ ವಿವೇಕ ವೇದಿಕೆಯನ್ನು ಕಟ್ಟಿದ್ದು ಚಳ್ಳಕೆರೆಯಲ್ಲಿ, ಯಶಸ್ಸು ಗಳಿಸಿದ್ದು ಚಿತ್ರದುರ್ಗದಲ್ಲಿ ಎಂದರು.

ಎಲ್ಲರೂ ಹೊಣೆಯರಿತ ಜ್ಞಾನಿಯಾಗಬೇಕು. ಸಿಂಹಾಸನದ ಮೇಲೆ ಕುಳಿತವನ ಕಾಲು ನೆಲದ ಮೇಲೆ ಇರಬೇಕು. ಪ್ರಜಾಪ್ರಭುತ್ವದಲ್ಲಿ ರಾಜಪ್ಪ ದಳವಾಯಿ ಒಂದು ಒಳ್ಳೆ ರೂಪಕ. ಒಬ್ಬರೇ ರಾಜ, ದಳವಾಯಿ ಆಗಬೇಕು. ನೀವು ಶುದ್ಧರಾಗಿ, ಸೇವೆಯಲ್ಲಿ ಶುದ್ಧತೆ ಇರಲಿ. ಶುದ್ಧತೆಯನ್ನು ಹೊಂದಿದವರನ್ನು ಅಧಿಕಾರಕ್ಕೆ ತನ್ನಿ ಎಂದರು.

ಕಾರ್ಯಕ್ರಮದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಸ್.ಜಿ.ಸಿದ್ದರಾಮಯ್ಯ, ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ, ಕಾಂಗ್ರೆಸ್ ಮುಖಂಡ ಆರ್.ಧ್ರುವನಾರಾಯಣ, ಮಾಜಿ ಸಂಸದ ಬಿ.ಎನ್.ಚಂದ್ರಪ್ಪ, ಮಾನವ ಬಂಧುತ್ವ ವೇದಿಕೆ ವಿಭಾಗೀಯ ಸಂಚಾಲಕ ಅನಂತನಾಯ್ಕ, ಅಂಬೇಡ್ಕರ್ ಅನುಯಾಯಿ ತಮಟಕಲ್ಲು ಹನುಮಂತಪ್ಪ ವತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News