ವಿದ್ಯುತ್ ಸ್ಪರ್ಶಿಸಿ ಬಾಲಕ ಸಾವು ಪ್ರಕರಣ: ಕೇಬಲ್ ಆಪರೇಟರ್ ಗೆ 2 ವರ್ಷ ಜೈಲು ಶಿಕ್ಷೆ

Update: 2022-04-09 17:55 GMT

ಮೈಸೂರು,ಎ.9: ಕೇಬಲ್ ಆಪರೇಟರ್ ನಿರ್ಲಕ್ಯತನದಿಂದ ಬಾಲಕ ಬಲಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರು ನ್ಯಾಯಾಲಯ ತೀರ್ಪು ಪ್ರಕಟಿಸಿದ್ದು, ಬಾಲಕನ ಬಲಿ ಪಡೆಯಲು ಕಾರಣನಾದ ಕೇಬಲ್ ಆಪರೇಟರ್ ಗೆ 2 ವರ್ಷ ಜೈಲು ಶಿಕ್ಷೆ ಹಾಗೂ ಕುಟುಂಬಸ್ಥರಿಗೆ 2 ಲಕ್ಷ ಪರಿಹಾರ ನೀಡುವಂತೆ ತೀರ್ಪು ನೀಡಿದೆ.

ಕೇಬಲ್ ಘಟಕದ ಮುಖ್ಯಸ್ಥ ಎಂ.ಎಸ್.ಚಂದ್ರಶೇಖರ್ ಶಿಕ್ಷೆಗೆ ಗುರಿಯಾದ ಕೇಬಲ್ ಆಪರೇಟರ್. ತರಂಗದರ್ಶಿನಿ ಎಂಬ ಹೆಸರಲ್ಲಿ ಕೇಬಲ್ ಘಟಕ ಹೊಂದಿದ್ದ ಚಂದ್ರಶೇಖರ್ ವಿದ್ಯುತ್ ಕಂಬಗಳ ಮೂಲಕ ಕೇಬಲ್ ವೈರ್ ಗಳನ್ನು ಅಳವಡಿಸಿದ್ದರು. ಕನ್ನಡ ರಾಜ್ಯೋತ್ಸವ ಬಾವುಟ ಅಳವಡಿಸುವ ಕಂಬಕ್ಕೆ ಕೇಬಲ್ ವೈರ್ ಕಟ್ಟಿದ್ದ ಹಿನ್ನಲೆ ವಿದ್ಯುತ್ ಹರಿಯುತ್ತಿದ್ದ ಕಂಬವನ್ನ 17 ವರ್ಷದ ಹೇಮಂತ್ ಕುಮಾರ್ ಸ್ಪರ್ಶಿಸಿ ಸಾವನ್ನಪ್ಪಿದ್ದ. ಮೈಸೂರಿನ ಎನ್.ಆರ್.ಪೊಲೀಸ್ ಠಾಣಾ ವ್ಯಾಪ್ತಿಯ ಸುಭಾಷ್ ನಗರದಲ್ಲಿರುವ ರಾಜರಾಜೇಶ್ವರಿ ದೇವಾಲಯದ ಆವರಣದಲ್ಲಿ 2006 ರಂದು ದುರಂತ ಸಂಭವಿಸಿತ್ತು.

ಅಂದಿನ ಇನ್ಸ್ ಪೆಕ್ಟರ್ ಕೆ.ಸಿ.ಪೂವಯ್ಯ ಅವರು ಚೆಸ್ಕಾಂ ನ ಜೆ.ಇ.ಶ್ರೀಧರ್,ಮೈಸೂರು ನಗರಪಾಲಿಕೆಯ ಬೀದಿದೀಪ ನಿರ್ವಹಣೆಯ ಕಾರ್ಯಪಾಲಕ ಅಭಿಯಂತರ ಮುಸ್ತಾಕ್ ಅಹಮದ್,ಕೇಬಲ್ ಆಪರೇಟರ್ ಎಂ.ಎಸ್.ಚಂದ್ರಶೇಖರ್ ಹಾಗೂ ರಾಜರಾಜೇಶ್ವರಿ ದೇವಸ್ಥಾನದ ಉಸ್ತುವಾರಿ ನಾರಾಯಣ್ ರನ್ನು ಆರೋಪಿಗಳನ್ನಾಗಿ ಮಾಡಿ ಪ್ರಕರಣ ದಾಖಲಿಸಿದ್ದರು. ನ್ಯಾಯಾಲಯಕ್ಕೆ ಇವರುಗಳ ವಿರುದ್ದ ದೋಷಾರೋಪಣಾಪಟ್ಟಿ ಸಲ್ಲಿಸಿದ್ದರು.

ವಾದ ವಿವಾದಗಳನ್ನು ಆಲಿಸಿದ 3 ನೇ ಅಧಿಕ ಸಿಜೆ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯದ ನ್ಯಾಯಾಧೀಶರಾದ ವಿನೋದ್ ಕುಮಾರ್ ಅವರು ಕೇಬಲ್ ಆಪರೇಟರ್ ಚಂದ್ರಶೇಖರ್ ಅವರನ್ನು ಅಪರಾಧಿ ಎಂದು ತೀರ್ಮಾನಿಸಿ 2 ವರ್ಷ ಶಿಕ್ಷೆ ಹಾಗೂ ಕುಟುಂಬಸ್ಥರಿಗೆ 2 ಲಕ್ಷ ಪರಿಹಾರ ನೀಡುವಂತೆ ತೀರ್ಪು ಪ್ರಕಟಿಸಿದ್ದಾರೆ. ಸರ್ಕಾರದ ಪರ ಅಭಿಯೋಜಕರಾದ ಎಂ.ರಾಜೇಂದ್ರ ವಾದ ಮಂಡಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News