×
Ad

ಮುಳಬಾಗಿಲು ಗಲಭೆ: ಬಿಜೆಪಿ ಸಂಸದನ ವಿರುದ್ಧ ಮೊಕದ್ದಮೆ ದಾಖಲಿಸುವಂತೆ ಒತ್ತಾಯ

Update: 2022-04-09 23:28 IST

ಬೆಂಗಳೂರು, ಎ.9: ಕೋಲಾರದಲ್ಲಿ ಕೋಮು ಗಲಭೆಗಳನ್ನು ಸೃಷ್ಟಿಸುತ್ತಿರುವ ಬಿಜೆಪಿ ಸಂಸದ ಮುನಿಸ್ವಾಮಿ ವಿರುದ್ಧ ರಾಷ್ಟ್ರದ್ರೋಹ ಮೊಕದ್ದಮೆ ದಾಖಲಿಸಿ ಬಂಧಿಸಬೇಕು ಎಂದು ಎಸ್‍ಎಫ್‍ಐ ರಾಜ್ಯ ಕಾರ್ಯದರ್ಶಿ ವಾಸುದೇವರೆಡ್ಡಿ ಆಗ್ರಹಿಸಿದ್ದಾರೆ.

ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಕೋಲಾರ ಜಿಲ್ಲೆಯಲ್ಲಿ ಕೋಮು ಗಲಭೆಗಳು ನಡೆದಿರುವ ಉದಾಹರಣೆಗಳಿಲ್ಲ. ಆದರೆ, ಬಿಜೆಪಿ ಸಂಸದ ಮುನಿಸ್ವಾಮಿ ಚುನಾಯಿತರಾದ ನಂತರ ಕೋಮು ಸಂಘರ್ಷಗಳು ಹುಟ್ಟಿಕೊಂಡಿವೆ. ಇದು ರಾಜಕೀಯ ಲಾಭಕ್ಕಾಗಿಯೇ ನಡೆಸಲಾಗುತ್ತಿದೆ ಎಂದು ಆರೋಪಿಸಿದರು.

ನಿನ್ನೆಯಷ್ಟೇ ಮುಳಬಾಗಿಲಿನಲ್ಲಿ ಕೋಮು ಸಂಘರ್ಷ ನಡೆದಿದ್ದು, ಇಡೀ ಜಿಲ್ಲೆಯೇ ನಿಷೇಧಾಜ್ಞೆಗೆ ಗುರಿಯಾಗಿದೆ. ಅಲ್ಲದೆ, ಚುನಾಯಿತ ಜನಪ್ರತಿನಿಧಿಯೊಬ್ಬರು, ಒಂದು ಕೋಮಿನ ಪರವಾಗಿ ಜಯಂತಿಗಳ ನೇತೃತ್ವ ವಹಿಸಿ ಬೀದಿ ಪುಂಡರ ರೀತಿ ಧರ್ಮಗಳ ನಡುವೆ ದ್ವೇಷ ಬಿತ್ತುತ್ತಿದ್ದಾರೆ ಎಂದು ದೂರಿದರು. 

ಕೋಲಾರದಲ್ಲಿ ಪೊಲೀಸರು ಕೋಮುವಾದಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಲು ಪ್ರಯತ್ನಿಸದಿದ್ದರೆ, ಮುಂದೆ ಇನ್ನಷ್ಟು ಗಲಭೆಗಳಾಗುವ ಸಾಧ್ಯತೆ, ಆತಂಕ ಜನರಲ್ಲಿ ಕಾಡುತ್ತಿದೆ. ಹೀಗಾಗಿ, ಮೊದಲು ಬಿಜೆಪಿ ಸಂಸದ ಮುನಿಸ್ವಾಮಿ ವಿರುದ್ಧ ಪೊಲೀಸರು ಮೊಕದ್ದಮೆ ದಾಖಲಿಸಿ, ಕಾನೂನು ರೀತ್ಯಾ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News