''ದಲಿತ, ಶೋಷಿತರ ಏಳ್ಗೆಗಾಗಿ ಶ್ರಮಿಸಿದ ಅಪರೂಪದ ವ್ಯಕ್ತಿ ಅಣ್ಣಯ್ಯ''
ಬೆಂಗಳೂರು, ಎ. 9: ‘ದಲಿತ ಚಳವಳಿಯ ಸಂಸ್ಥಾಪಕದಲ್ಲಿ ಒಬ್ಬರಾಗಿ ಜನ ಹೋರಾಟಗಳಲ್ಲಿ ಪ್ರಮುಖ ಪಾತ್ರ ವಹಿಸಿದ ಹಿರಿಯ ದಲಿತ ಮುಖಂಡ ಅಣ್ಣಯ್ಯ ಅವರು, ಅಸ್ಪೃಶ್ಯತೆ, ಜಾತೀಯತೆ ವಿರುದ್ದ ಹಾಗೂ ಶೋಷಿತರ ಏಳ್ಗೆಗಾಗಿ ಶ್ರಮಿಸಿದ ಅಗ್ರಗಣ್ಯ ನಾಯಕರು' ಎಂದು ಅವರ ಒಡನಾಡಿಗಳು ಸ್ಮರಿಸಿದ್ದಾರೆ.
1976ರಲ್ಲಿ ಪ್ರಾರಂಭವಾದ ದಲಿತ ಚಳವಳಿಯಲ್ಲಿ ಪ್ರಮುಖರಾದ ಅಣ್ಣಯ್ಯರ ಹೋರಾಟ ಒಂದೆರಡಲ್ಲ. ಬೂಸಾ ಚಳವಳಿ, ಹೋಬಳಿಗೊಂದು ವಸತಿ ಶಾಲೆ, ಹೆಂಡ ಬೇಡ ಭೂಮಿ ಬೇಕು, ಹೂಡಿ ಹೋರಾಟ, ಬಗರ್‍ಹುಕುಂ ಚಳವಳಿ, ಹುಣಸೀಕೋಟೆ ಶೇಷಗಿರಿಯಪ್ಪನ ಕಗ್ಗೊಲೆ ವಿರೋಧಿಸಿ ಕಾಲ್ನಡಿಗೆ ಜಾಥಾ, ಮಂಡಲ್ ಕಮಿಷನ್ ವರದಿ ಜಾರಿ ಹಾಗೂ ಭಡ್ತಿ ಮೀಸಲಾತಿ.. ಹೀಗೆ ಹಲವು ಚಳವಳಿಗಳಲ್ಲಿ ಅವರು ಮುಂಚೂಣಿ ಪಾತ್ರ ವಹಿಸಿದ್ದಾರೆಂದು ತಿಳಿಸಲಾಗಿದೆ.
ತಮ್ಮ ಜೀವನವನ್ನು ಚಳುವಳಿಗಾಗಿ ಮುಡುಪಿಟ್ಟ ಕೀರ್ತಿ ಅಣ್ಣಯ್ಯನವರಿಗೆ ಸಲ್ಲುತ್ತದೆ. ಐಟಿಐ ಕಾರ್ಮಿಕರ ಮುಖಂಡರಾಗಿ ಚಳವಳಿಯಲ್ಲಿ ತೊಡಗಿಸಿಕೊಂಡ ಅಣ್ಣಯ್ಯ, ದಲಿತ ಸಂಘರ್ಷ ಸಮಿತಿ ಸಂಚಾಲಕರಾಗಿ ಸಾಮಾಜಿಕ ನ್ಯಾಯಕ್ಕಾಗಿ ಹಾಗೂ ಶೋಷಿತ ಸಮುದಾಯಕ್ಕಾಗಿ ಎಲ್ಲ ಜಿಲ್ಲೆಗಳಲ್ಲಿ ಚಳವಳಿ ರೂಪಿಸಲು ಅವಿರತ ಶ್ರಮಿಸಿದ್ದಾರೆ. ಅವರು ಇದೀಗ 70ನೆ ವರ್ಷಕ್ಕೆ ಕಾಲಿಟ್ಟಿದ್ದು, ನಿಡುಮಾಮಿಡಿ ಮಠದ ಶ್ರೀ ವೀರಭದ್ರ ಚನ್ನಮಲ್ಲ ಸ್ವಾಮೀಜಿ, ಮಾಜಿ ಸಚಿವ ಡಾ.ಮಹದೇವಪ್ಪ ಸೇರಿದಂತೆ ಹಲವು ಗಣ್ಯರು ಶುಭ ಕೋರಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.