×
Ad

ಮುಸ್ಲಿಮ್ ವರ್ತಕರ ಅಂಗಡಿ ಧ್ವಂಸ ಪ್ರಕರಣ: ಟ್ವಿಟರ್ ನಲ್ಲಿ ‘ಸಂಘಿ ಗೂಂಡಾಗಳನ್ನು ಬಂಧಿಸಿ’ ಹ್ಯಾಶ್ ಟ್ಯಾಗ್ ಟ್ರೆಂಡಿಂಗ್

Update: 2022-04-10 18:06 IST

ಬೆಂಗಳೂರು: ಧಾರವಾಡ ಜಿಲ್ಲೆಯ ನುಗ್ಗಿಕೇರಿ ಗ್ರಾಮದ ಹನುಮಂತ ದೇವಸ್ಥಾನದ ಹೊರಗಡೆ ಇರುವ ಮುಸ್ಲಿಮರಿಗೆ ಸೇರಿದ ಅಂಗಡಿಗಳನ್ನು ಸಂಘಪರಿವಾರ ಕಾರ್ಯಕರ್ತರು ಬಲವಂತವಾಗಿ ತೆರವುಗೊಳಿಸಿದ್ದಲ್ಲದೆ, ಕಲ್ಲಂಗಡಿ ಹಣ್ಣಿನ ವ್ಯಾಪಾರಿಯ ತಳ್ಳುಗಾಡಿಯನ್ನು ಧ್ವಂಸಗೊಳಿಸಿರುವ ಪ್ರಕರಣವು ಸಾಮಾಜಿಕ ಜಾತಾಣದಲ್ಲಿ ವ್ಯಾಪಕ್ಕೆ ಆಕ್ರೋಶಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ದುಷ್ಕರ್ಮಿಗಳ ಬಂಧನಕ್ಕೆ ಆಗ್ರಹಿಸಿ ಟ್ವಿಟರ್ ನಲ್ಲಿ #ArrestSanghiGoons ಹ್ಯಾಶ್ ಟ್ಯಾಗ್ ಟ್ರೆಂಡ್ ಆಗಿದೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವಾರು ಕನ್ನಡ ಸಂಘಟನೆಗಳು ಈ ಕುರಿತು ಧ್ವನಿಯೆತ್ತಿವೆ. “ಬಜವರಾಜ ಬೊಮ್ಮಾಯಿಯವರು ಈಗಲೂ ಕರ್ನಾಟಕದ ಮುಖ್ಯಮಂತ್ರಿ ಆಗಿದ್ದಾರೆಂದರೆ ಅವರು ಈ ಶ್ರೀರಾಮಸೇನೆಯ ಗೂಂಡಾಗಳಿಗೆ ಒದ್ದು ಜೈಲಿಗಟ್ಟಬೇಕು. ಒಂದು ವೇಳೆ ಅವರಿಗೆ ಇದು ಸಾಧ್ಯವಾಗುವುದಿಲ್ಲವಾದರೆ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಮನೆಯಲ್ಲಿ ಕುಳಿತುಕೊಳ್ಳುವುದು ಲೇಸು” ಎಂದು ಅವರು ಟ್ವೀಟ್ ಮಾಡಿದ್ದಾರೆ. ಜೊತೆಗೆ, ಇದು ಕೇವಲ ಮುಸ್ಲಿಂ ವ್ಯಾಪಾರಿಯ ಮೇಲೆ ನಡೆದಿರುವ ಹಲ್ಲೆ ಮಾತ್ರವಲ್ಲ, ಕಲ್ಲಂಗಡಿ ಬೆಳೆಯುವ ರೈತರ ಮೇಲೆ ನಡೆದ ಹಲ್ಲೆ. ಇವರನ್ನು ಹಾಗೆಯೇ ಬಿಟ್ಟರೆ ನಾಳೆ ಎಲ್ಲರ ಮನೆಗಳಿಗೆ ನುಗ್ಗಬಹುದು ಎಂದು ಖಾರವಾಗಿ ಟ್ವೀಟ್ ಮಾಡಿದ್ದಾರೆ.

ಕರ್ನಾಟಕ ಮಾತ್ರವಲ್ಲದೇ ದೇಶಾದ್ಯಂತ ಈ ಘಟನೆಯ ಕುರಿತು ಆಕ್ರೋಶ ವ್ಯಕ್ತವಾಗಿದ್ದು, ಹಲವರು ಸಂತ್ರಸ್ತ ನಬಿಸಾಬ್ ರಿಗೆ ಸಹಾಯ ಮಾಡುವಂತೆ ಮನವಿ ಮಾಡಿ ಅವರ ಬ್ಯಾಂಕ್ ಖಾತೆ ವಿವರಗಳನ್ನು ಟ್ವೀಟ್ ಮಾಡಿದ್ದಾರೆ. ಸದ್ಯ ದೇಶದಾದ್ಯಂತ #ArrestSanghiGoons ಹ್ಯಾಶ್ ಟ್ಯಾಗ್ ಟ್ರೆಂಡಿಂಗ್ ಆಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News