ಮೈಸೂರು | ಅಣ್ಣನಿಂದಲೇ ತಮ್ಮನ ಕೊಲೆ: ಆರೋಪ
ಮೈಸೂರು,ಎ.10: ಅಣ್ಣನೇ ತಮ್ಮನನ್ನು ಕೊಲೆ ಮಾಡಿರುವ ಘಟನೆ ಮೈಸೂರು ಜಿಲ್ಲೆ ನಂಜನಗೂಡು ತಾಲೂಕು ಮಲ್ಲಹಳ್ಳಿ ಗ್ರಾಮದಲ್ಲಿ ನಡೆದಿದೆ.
ಕೊಲೆಯಾದವನನ್ನು ಗೋವಿಂದ (35) ಎಂದು ಹೇಳಲಾಗಿದೆ. ಹತ್ಯೆ ಮಾಡಿದ ಅಣ್ಣ ರಂಗಸ್ವಾಮಿ ನಾಪತ್ತೆಯಾಗಿದ್ದಾನೆ ಎಂದು ತಿಳಿದು ಬಂದಿದೆ.
ಜಾಗದ ವಿಚಾರಕ್ಕೆ ಸಂಬಂಧಿಸಿದಂತೆ ಅಣ್ಣ ತಮ್ಮಂದಿರ ನಡುವೆ ಆಗಾಗ ಗಲಾಟೆ ನಡೆಯುತ್ತಿತ್ತು ಎನ್ನಲಾಗಿದೆ. ಈ ಸಂಬಂಧ ಗ್ರಾಮಸ್ಥರು ಅನೇಕ ಬಾರಿ ಇವರಿಬ್ಬರ ಜಗಳ ಬಿಡಿಸಿ ಬುದ್ಧಿವಾದವನ್ನು ಹೇಳಿದ್ದರು. ಶನಿವಾರವೂ ಸಹ ಇದೇ ವಿಚಾರದಲ್ಲಿ ಇಬ್ಬರ ನಡುವೆ ಗಲಾಟೆ ನಡೆದಿದೆ. ಗ್ರಾಮಸ್ಥರು ಇಬ್ಬರನ್ನು ಸಮಾಧಾನ ಪಡಿಸಿದ್ದಾರೆ. ಮನೆ ಮುಂಭಾಗದಲ್ಲಿದ್ದ ಶೌಚಾಲಯದ ಬಾಗಿಲ ಬೀಗ ಮುರಿದಿದ್ದಾನೆ ಎಂದು ಖ್ಯಾತೆ ತೆಗೆದ ಅಣ್ಣ ರಂಗಸ್ವಾಮಿ ತಡರಾತ್ರಿ ಮನೆಯಲ್ಲೇ ಮಲಗಿದ್ದ ತಮ್ಮ ಗೋವಿಂದನ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿದ್ದಾನೆ ಎಂದು ಹೇಳಲಾಗಿದೆ.
ರಕ್ತದ ಮಡುವಿನಲ್ಲಿ ಬಿದ್ದಿದ್ದ ಗೋವಿಂದನಾಯ್ಕ ನನ್ನು ಮೈಸೂರಿನ ಕೆ.ಆರ್.ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದರಾದರೂ ಅಷ್ಟರಲ್ಲಿ ಗೋವಿಂದ ನಾಯ್ಕ ಮೃತಪಟ್ಟಿದ್ದಾನೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಕೌವಲಂದೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಬ್‍ಇನ್ ಸ್ಪೆಕ್ಟರ್ ಮಹೇಂದ್ರ ನೇತೃತ್ವದಲ್ಲಿ ಆರೋಪಿ ರಂಗಸ್ವಾಮಿ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.