ಕಾಂಗ್ರೆಸ್ ಸರಕಾರದ ಯೋಜನೆಗಳು ಜನರ ಮನೆ ಬಾಗಿಲಿಗೆ ತಲುಪಿಲ್ಲ: ಸಿಎಂ ಬೊಮ್ಮಾಯಿ ಆರೋಪ

Update: 2022-04-10 15:50 GMT

ಹೊಸಪೇಟೆ(ವಿಜಯನಗರ), ಎ.10: ಕಾಂಗ್ರೆಸ್ ಸರಕಾರದ ಎಲ್ಲ ಭಾಗ್ಯ ಯೋಜನೆಗಳು ಕೇವಲ ವಿಧಾನಸೌಧ ಮೂರನೇ ಮಹಡಿಯಲ್ಲಿ ರೂಪುಗೊಂಡವೇ ಹೊರತು ಜನರ ಮನೆ ಬಾಗಿಲಿಗೆ ತಲುಪಲೇ ಇಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎಂದು ತಿಳಿಸಿದ್ದಾರೆ.

ರವಿವಾರ ವಿಜಯನಗರ ಜಿಲ್ಲೆಯ ಹರಪನಹಳ್ಳಿಯಲ್ಲಿ ಆಯೋಜಿಸಿರುವ ಶ್ರೀ ಸೀತಾರಾಮ ಕಲ್ಯಾಣ ಮಹೋತ್ಸವ ಹಾಗೂ ಸಾರ್ವಜನಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಾಂಗ್ರೆಸ್ ನವರ ದುರಾಡಳಿತವನ್ನು ಜನರು ನೋಡಿಯಾಗಿದೆ. ಎಲ್ಲ ಭಾಗ್ಯಗಳನ್ನು ನೀಡಿದರೂ, 2018 ರಲ್ಲಿ ಜನ ಕಾಂಗ್ರೆಸ್ ಪಕ್ಷವನ್ನು ತಿರಸ್ಕರಿಸಿದರು. ಇದೊಂದು ದೌರ್ಭಾಗ್ಯಯುತ ಸರಕಾರ ಎಂದು ಜನ ಮನೆಗೆ ಕಳುಹಿಸಿದರು ಎಂದರು.

ಐದು ವರ್ಷ ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿತ್ತು. ಆದರೆ ಗುರುತರವಾದ ಯಾವುದೇ ಕೆಲಸ ಮಾಡಲಿಲ್ಲ. ಸಮಾಜ ಕಲ್ಯಾಣ ಇಲಾಖೆಯಲ್ಲಿ ಬಡಮಕ್ಕಳ ಹಾಸ್ಟೆಲ್‍ಗಳಲ್ಲಿ ನೀಡುವ ವಸ್ತುಗಳಲ್ಲಿ ಪಸರ್ಂಟೆಜ್ ತಿಂದು, ಬಡಮಕ್ಕಳ ದೀನದಲಿತರ ಮಕ್ಕಳ ಹಕ್ಕಿಗೆ ಕೈ ಹಾಕಿದಂತಹ ಪಾಪ ಕಾಂಗ್ರೆಸ್ ನವರಿಗೆ ತಟ್ಟುತ್ತದೆ. ಯಾವ ನೈತಿಕತೆಯಿಂದ ದೊಡ್ಡ ಹೇಳಿಕೆಗಳನ್ನು ಕೊಡುತ್ತಾರೆ ಎಂದರು.

ನಿಗದಿತ ಸಮಯದೊಳಗೆ ಯೋಜನೆಗಳು ಪೂರ್ಣ: ಮಾಜಿ ಸಚಿವ ಕರುಣಾಕರರೆಡ್ಡಿ ತಮ್ಮ ಸ್ಥಿತಪ್ರಜ್ಞತೆಯನ್ನು ಕಳೆದುಕೊಂಡವರಲ್ಲ. ಬಳ್ಳಾರಿಯ ಇತಿಹಾಸವನ್ನು ತೆಗೆದುಕೊಂಡರೆ ಕೆಲವೇ ಕೆಲ ಕುಟುಂಬಗಳು ಬಳ್ಳಾರಿ ಯನ್ನು ತಮ್ಮ ಕಪಿಮುಷ್ಟಿಯಲ್ಲಿ ಹಿಡಿದಿಟ್ಟುಕೊಂಡಿದ್ದವು. ಈ ಭಾಗದ ಜನನಾಯಕರು ಆ ವ್ಯವಸ್ಥೆಯ ವಿರುದ್ಧ ಧ್ವನಿ ಎತ್ತಿ, ನಿಜವಾಗಿಯೂ ಜನರ ಧ್ವನಿಯಾಗಿ ಜನರ ವಿಶ್ವಾಸವನ್ನು ಗಳಿಸಿ, ಜನಪರ ಕೆಲಸಗಳನ್ನು ಮಾಡುತ್ತಿದ್ದಾರೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.

ಕೆರೆ ತುಂಬಿಸುವ ಕೆಲಸಕ್ಕೆ ಕರುಣಾಕರ ರೆಡ್ಡಿಯವರು ಕೈಗೆತ್ತಿಕೊಂಡಿದ್ದಾರೆ. ಕಲ್ಯಾಣ ಕರ್ನಾಟಕಕ್ಕೆ 3000 ಕೋಟಿ ರೂ.ಗಳ ಅನುದಾನ ನೀಡಲಾಗಿದ್ದು, ಈ ತಿಂಗಳೊಳಗೆ ಅದರ ಕ್ರಿಯಾಯೋಜನೆಗೆ ಅನುಮೋದನೆ ನೀಡಿ, ಹಲವಾರು ಯೋಜನೆಗಳನ್ನು ಪೂರ್ಣಗೊಳಿಸುವ ಕೆಲಸ ಮಾಡಲಾಗುವುದು ಎಂದರು. ಸಚಿವ ಶ್ರೀರಾಮುಲು, ಸಂಸದ ಜಿ.ಎಂ.ಸಿದ್ದೇಶ್ವರ, ಶಾಸಕ ಸೋಮಶೇಖರ ರೆಡ್ಡಿ, ಮಾಡಾಳು ವೀರೂಪಾಕ್ಷಪ್ಪ, ಮಾಜಿ ಸಚಿವ ಕರುಣಾಕರ ರೆಡ್ಡಿ, ಜನಾರ್ಧನ ರೆಡ್ಡಿ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News