ಧಾರವಾಡದಲ್ಲಿ ಅಂಗಡಿ ಧ್ವಂಸ ಪ್ರಕರಣ: ದಾಳಿಗೊಳಗಾದ ವ್ಯಾಪಾರಿಗಳಿಗೆ ಯುವ ಕಾಂಗ್ರೆಸ್ ನಿಂದ ಆರ್ಥಿಕ ನೆರವು

Update: 2022-04-10 16:21 GMT

ಧಾರವಾಡ: ಇಲ್ಲಿನ ನುಗ್ಗಿಕೇರಿ ಗ್ರಾಮದ ಹನುಮಂತ ದೇವಸ್ಥಾನದ ಹೊರಗಡೆ ಇರುವ ಮುಸ್ಲಿಮರಿಗೆ ಸೇರಿದ ಅಂಗಡಿಗಳನ್ನು ಸಂಘಪರಿವಾರ ಕಾರ್ಯಕರ್ತರು ಬಲವಂತವಾಗಿ ತೆರವುಗೊಳಿಸಿದ್ದಲ್ಲದೆ, ಕಲ್ಲಂಗಡಿ ಹಣ್ಣಿನ ವ್ಯಾಪಾರಿಯ ತಳ್ಳುಗಾಡಿಯನ್ನು ಧ್ವಂಸಗೊಳಿಸಿರುವ ಪ್ರಕರಣವು ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿದ್ದು, ಇದೀಗ ದಾಳಿಗೊಳಗಾದ ವರ್ತಕರಿಗೆ ಯುವ ಕಾಂಗ್ರೆಸ್ ಆರ್ಥಿಕ ನೆರವು ನೀಡಿದೆ. 

ಯುವ ಕಾಂಗ್ರೆಸ್‌ನ ರಾಷ್ಟ್ರೀಯ ಅಧ್ಯಕ್ಷ ಬಿ.ವಿ.ಶ್ರೀನಿವಾಸ್ ಹಾಗೂ ರಾಜ್ಯ ಅಧ್ಯಕ್ಷ ಮುಹಮ್ಮದ್ ನಲಪಾಡ್ ನುಗ್ಗಿಕೇರಿಗೆ ಭೇಟಿ ನೀಡಿ ನಷ್ಟಕ್ಕೊಳಗಾದ ವ್ಯಾಪಾರಿಗಳಿಗೆ ಧೈರ್ಯ ತುಂಬಿದರು. ಇದೇ ವೇಳೆ ದಾಳಿಗೊಳಗಾದ ನಾಲ್ಕು ಅಂಗಡಿಗಳಿಗೆ ತಲಾ 25ಸಾವಿರ ಪರಿಹಾರ ನೀಡಿದ್ದಾರೆ. 

ಈ ಸಂದರ್ಭದಲ್ಲಿ ಮಾತನಾಡಿದ ಶ್ರೀನಿವಾಸ್, ‘ಮೊದಲಿಗೆ ಹಿಜಾಬ್ ಗಲಾಟೆ ಆಯಿತು. ಇದೀಗ ಹಿಂದೂಯೇತರ ವ್ಯಾಪಾರ ವಿಷಯ ಬಂದಿದೆ. ಕಲ್ಲಂಗಡಿ, ಮಾವು ಯಾವುದೇ ಇರಲಿ ಅದನ್ನು ಬೀದಿಗೆ ಚೆಲ್ಲಿ ಹಾಳು ಮಾಡಿದರೆ ಅದು ನೇರವಾಗಿ ರೈತರ ಮೇಲೆ ಮಾಡುವ ದಾಳಿಯಾಗಿದೆ. ಇವೆಲ್ಲದಕ್ಕೂ ಸರ್ಕಾರದ ಕುಮ್ಮಕ್ಕು ಇದೆ. ಆಡಳಿತ ನಡೆಸುತ್ತಿರುವ ಪಕ್ಷದ ನಾಯಕರೂ ಪ್ರಚೋದನೆ ನೀಡುವ ಹೇಳಿಕೆಯನ್ನೇ ನೀಡುತ್ತಿದ್ದಾರೆ’ ಎಂದು ಆರೋಪಿಸಿದರು.

ಇನ್ನು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಕೂಡ ಕಲ್ಲಂಗಡಿ ಹಣ್ಣಿನ ವ್ಯಾಪಾರಿಗೆ 10 ಸಾವಿರ ರೂ. ನೀಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News