ಧಾರವಾಡ ಮುಸ್ಲಿಮ್ ವರ್ತಕರ ಅಂಗಡಿ ಧ್ವಂಸ ಪ್ರಕರಣ: ನಾಲ್ವರು ಶ್ರೀರಾಮ ಸೇನೆ ಕಾರ್ಯಕರ್ತರ ಬಂಧನ

Update: 2022-04-10 18:44 GMT

ಧಾರವಾಡ: ಇಲ್ಲಿನ ನುಗ್ಗಿಕೇರಿ ಗ್ರಾಮದ ಹನುಮಂತ ದೇವಸ್ಥಾನದ ಹೊರಗಡೆ ಇರುವ ಮುಸ್ಲಿಮರಿಗೆ ಸೇರಿದ ಅಂಗಡಿಗಳನ್ನು ಸಂಘಪರಿವಾರ ಕಾರ್ಯಕರ್ತರು ಬಲವಂತವಾಗಿ ತೆರವುಗೊಳಿಸಿರುವ ಪ್ರಕರಣಕ್ಕೆ ಸಂಬಂಧಿಸಿ ಇದೀಗ ನಾಲ್ವರು ಶ್ರೀರಾಮ ಸೇನೆ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ. 

ಆರೋಪಿಗಳಾದ ಮೈಲಾರಪ್ಪ ಗುಡ್ಡಪ್ಪನವರ (27), ಮಹಾನಿಂಗ ಐಗಳಿ (26), ಚಿದಾನಂದ ಕಲಾಲ (25), ಕುಮಾರ ಕಟ್ಟಿಮನಿ (26) ಎಂಬುವವರನ್ನು ಗ್ರಾಮೀಣ ಠಾಣೆ ಪೊಲೀಸರು ರವಿವಾರ ವಶಕ್ಕೆ ಪಡೆದಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ಕೃಷ್ಣಕಾಂತ್ ತಿಳಿಸಿದ್ದಾರೆ.

ಶನಿವಾರ ಮಧ್ಯಾಹ್ನ ವೇಳೆ ಹನುಮಂತ ದೇವಸ್ಥಾನದ ಆವರಣದಲ್ಲಿ ವ್ಯಾಪಾರ ಮಾಡುತ್ತಿದ್ದ ನಬೀಸಾಬ್ ಗೌಸುಸಾಬ್ ಕಿಲ್ಲೇದಾರ, ಮೆಹಬೂಬ್‌ಸಾಬ್ ಮುಜಾವರ್, ಶರೀಫ್ ತಡಕೋಡ ಇವರ ಅಂಗಡಿಗಳನ್ನು ಶ್ರೀ ರಾಮ ಸೇನೆ ಕಾರ್ಯಕರ್ತರ ಗುಂಪೊಂದು ತೆರವುಗೊಳಿಸಿದ್ದಲ್ಲದೆ ಕಲ್ಲಂಗಡಿ ಹಣ್ಣಿನ ವ್ಯಾಪಾರಿಯ ತಳ್ಳುಗಾಡಿಯನ್ನು ಧ್ವಂಸಗೊಳಿಸಿ ಅದರಲ್ಲಿದ್ದ ಕಲ್ಲಂಗಡಿಗಳನ್ನು ರಸ್ತೆಗೆ ಚೆಲ್ಲಿ ನಾಶಪಡಿಸಿದ್ದರು. ಈ ಸಂಬಂಧ ಅಂಗಡಿ ಮಾಲಕ ನಬಿಸಾಬ್ ಧಾರವಾಡ ಗ್ರಾಮೀಣ  ಪೊಲೀಸ್ ಠಾಣೆಗೆ ದೂರು ನೀಡಿದ್ದರು. 

ಇದೀಗ ನಾಲ್ವರು ಶ್ರೀರಾಮ ಸೇನೆ ಕಾರ್ಯಕರ್ತರನ್ನು  ಬಂಧಿಸಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ. 

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News