×
Ad

'ಪೊಲೀಸ್‌ ಆಯುಕ್ತರು ಸುಳ್ಳು ಹೇಳಿದ್ದಾರೆ' ಎಂಬ ಮಾತು ಸರಕಾರಕ್ಕೆ, ಸಿಎಂಗೆ ಅವಮಾನ: ಭಾಸ್ಕರ್‌ ರಾವ್‌

Update: 2022-04-11 09:58 IST
ಪೊಲೀಸ್‌ ಆಯುಕ್ತ ಕಮಲ್ ಪಂತ್ | ಭಾಸ್ಕರ್‌ ರಾವ್‌

ಬೆಂಗಳೂರು: ಜೆಜೆ ನಗರದಲ್ಲಿ ಚಂದ್ರು ಕೊಲೆ ಸಂಬಂಧ ಬೆಂಗಳೂರು ನಗರ ಪೊಲೀಸ್ ಆಯುಕ್ತರು 'ಸುಳ್ಳು ಹೇಳಿದ್ದಾರೆ' ಎಂಬ ಬಿಜೆಪಿ ನಾಯಕರ ಆರೋಪಕ್ಕೆ ಸಂಬಂಧಿಸಿ ಮಾಜಿ ಪೊಲೀಸ್‌ ಅಧಿಕಾರಿ, ಆಮ್ ಆದ್ಮಿ ಪಕ್ಷದ ನಾಯಕ ಭಾಸ್ಕರ್‌ ರಾವ್‌ ಪ್ರತಿಕ್ರಿಯಿಸಿದ್ದಾರೆ. 

ಈ ಕುರಿತು ಸೋಮವಾರ ಟ್ವೀಟ್ ಮಾಡಿರುವ ಅವರು,  ‘ಬೆಂಗಳೂರು ನಗರ ಪೊಲೀಸ್‌ ಆಯುಕ್ತರು ಸುಳ್ಳು ಹೇಳಿದ್ದಾರೆ ಎಂಬ  ಮಾತು ಮುಖ್ಯಮಂತ್ರಿಗಳಿಗೆ ಮತ್ತು ಸರ್ಕಾರಕ್ಕೆ ಮಾಡಿದ ಅವಮಾನ' ಎಂದು ತಿಳಿಸಿದ್ದಾರೆ.

''ಪೊಲೀಸ್ ಆಯುಕ್ತರು ಎಂದರೆ 1.5 ಕೋಟಿ ನಾಗರಿಕರನ್ನು ರಕ್ಷಿಸುವ ಸಂಸ್ಥೆಯಾಗಿದ್ದು,  ಆಡಳಿತಪಕ್ಷ ಮತ್ತು  ಆ ಪಕ್ಷದ ರಾಜಕಾರಣಿಯೊಬ್ಬರು ಮಾಧ್ಯಮಗಳಲ್ಲಿ ಆಯುಕ್ತರನ್ನು 'ಸುಳ್ಳುಗಾರ' ಎಂದು ಕರೆಯುವುದು ಮುಖ್ಯಮಂತ್ರಿ ಮತ್ತು ಸರ್ಕಾರವನ್ನು ಅವಮಾನಿಸಿದಂತೆ. ಉತ್ತಮ ಆಡಳಿತವು ಮೇಲುಗೈ ಸಾಧಿಸುತ್ತದೆ ಎಂದು ಭಾವಿಸುತ್ತೇನೆ'' ಎಂದು ಭಾಸ್ಕರ್‌ ರಾವ್‌ ತಿಳಿಸಿದ್ದಾರೆ.

ಉರ್ದು ಮಾತನಾಡಲಿಲ್ಲ ಎಂಬ ಕಾರಣಕ್ಕೆ ಜೆ.ಜೆ. ನಗರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಚಂದ್ರಶೇಖರ ಎಂಬ ಯುವಕನ ಕೊಲೆ ನಡೆದಿತ್ತು ಎಂದು ಗೃಹ ಸಚಿವರು ನೀಡಿದ್ದ ಹೇಳಿಕೆಯನ್ನು ಸಮರ್ಥಿಸಿ 'ಪೊಲೀಸ್ ಕಮಿಷನರ್ ಹೇಳಿರುವುದು ಸುಳ್ಳು’ ಎಂದು ಇತ್ತೀಚೆಗೆ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್‌. ರವಿ ಕುಮಾರ್ ಇತ್ತೀಚೆಗೆ ಹೇಳಿಕೆ ನೀಡಿದ್ದರು. ಇನ್ನು 'ಚಂದ್ರು ಹತ್ಯೆ ಪ್ರಕರಣದ ಹಿಂದಿನ ಸತ್ಯವನ್ನು ಮರೆಮಾಚಲು ಬೆಂಗಳೂರು ಪೊಲೀಸರು ಗೃಹ ಸಚಿವ ಆರಗ ಜ್ಞಾನೇಂದ್ರ ಮೇಲೆ ಒತ್ತಡ ಹೇರುತ್ತಿದ್ದಾರೆ' ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಆರೋಪಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News