ಯಾರೂ ಸಾಮರಸ್ಯ ಕದಡಬೇಡಿ, ಮುಸ್ಲಿಮರು ನೆಮ್ಮದಿ-ಗೌರವದಿಂದ ಬಾಳಬೇಕಿದೆ: ಬಿ.ಎಸ್ ಯಡಿಯೂರಪ್ಪ
ಬೆಂಗಳೂರು: ರಾಜ್ಯದಲ್ಲಿ ಇತ್ತೀಚೆಗೆ ದ್ವೇಷದ ವಾತಾವರಣ ಹೆಚ್ಚಾಗುತ್ತಿದ್ದು, ಈ ಕುರಿತು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಪ್ರತಿಕ್ರಿಯಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿಎಸ್ ವೈ, 'ಕೆಲವು ಕಿಡಿಗೇಡಿಗಳು ಸೌಹಾರ್ದತೆ ಕೆಡಿಸುವ ಪ್ರಯತ್ನ ಮಾಡುತ್ತಿದ್ದಾರೆ. ಇದನ್ನು ಯಾವುದೇ ಕಾರಣಕ್ಕೂ ಸರಕಾರ ಸಹಿಸುವುದಿಲ್ಲ ಎಂದು ಮುಖ್ಯಮಂತ್ರಿಯವರು ಎಚ್ಚರಿಕೆಯನ್ನು ನೀಡಿದ್ದಾರೆ. ಅಂಥವರಿಗೆ ನಾನೂ ಕೂಡ ಕಿವಿ ಮಾತು ಹೇಳಲು ಬಯಸುತ್ತೇನೆ, ಯಾರೂ ಸಾಮರಸ್ಯ ಕದಡಬೇಡಿ, ಮುಸ್ಲಿಮರು ನೆಮ್ಮದಿ-ಗೌರವದಿಂದ ಬಾಳಬೇಕಿದೆ' ಎಂದು ತಿಳಿಸಿದರು.
'ಇನ್ನು ಮುಂದೆ ಅಹಿತಕರ ಘಟನೆಗಳು ನಡೆಯದಿರಲಿ, ಇಲ್ಲಿ ಹಿಂದೂ-ಮುಸ್ಲಿಮರು ಒಂದೇ ತಾಯಿ ಮಕ್ಕಳಂತೆ ಬಾಳಬೇಕು' ಎಂದು ಹೇಳಿದರು.
ಪಕ್ಷ ಸಂಘಟನೆಗಾಗಿ ಮೂರು ತಂಡ
ಪಕ್ಷ ಸಂಘಟನೆಗಾಗಿ ಮೂರು ತಂಡಗಳಲ್ಲಿ ರಾಜ್ಯ ಪ್ರವಾಸ ಮಾಡುತ್ತಿದ್ದೇವೆ. ಮೊದಲನೆ ತಂಡದಲ್ಲಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಎರಡನೆ ತಂಡದಲ್ಲಿ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಮತ್ತು ನಾನು ಜೊತೆಗಿರುತ್ತೇನೆ, ಮೂರನೆ ತಂಡದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇರಲಿದ್ದಾರೆ. ಪಕ್ಷ ಬಲಪಡಿಸುವ ದೃಷ್ಟಿಯಿಂದ ಹೈಕಮಾಂಡ್ ಜೊತೆ ವಿಶೇಷವಾಗಿ ಸಮಾಲೋಚನೆ ಮಾಡಿ, ಮುಂದಿನ ಚುನಾವಣೆಗೆ ಸಿದ್ಧತೆ ಮಾಡುವ ದೃಷ್ಟಿಯಿಂದ ಪ್ರವಾಸ ಮಾಡುತ್ತಿದ್ದೇವೆ. ಮುಂದೆ ನಿರಂತರವಾಗಿ ಪ್ರವಾಸ ನಡೆಯಲಿದೆ.
-ಯಡಿಯೂರಪ್ಪ ಮಾಜಿ ಮುಖ್ಯಮಂತ್ರಿ