×
Ad

8 ದೇಶಗಳಿಂದ ಬರುವ ಪ್ರಯಾಣಿಕರ ಮೇಲೆ ನಿಗಾ ಇರಿಸಲು ತೀರ್ಮಾನ: ಸಚಿವ ಡಾ.ಕೆ.ಸುಧಾಕರ್

Update: 2022-04-11 20:07 IST

ಬೆಂಗಳೂರು, ಎ. 11: ‘ಚೀನಾ, ದಕ್ಷಿಣ ಕೊರಿಯಾ, ಹಾಂಗ್‍ಕಾಂಗ್ ಸೇರಿದಂತೆ ಎಂಟು ದೇಶಗಳಲ್ಲಿ ಕೋವಿಡ್ ಹರಡುವಿಕೆ ತೀವ್ರವಾಗಿದ್ದು, ಈ ದೇಶಗಳಿಂದ ರಾಜ್ಯಕ್ಕೆ ಬರುವ ಪ್ರಯಾಣಿಕರ ಮೇಲೆ ಹೆಚ್ಚಿನ ನಿಗಾ ಇರಿಸಲು ತೀರ್ಮಾನಿಸಲಾಗಿದೆ' ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ತಿಳಿಸಿದ್ದಾರೆ.

ಸೋಮವಾರ ನಗರದ ಆರೋಗ್ಯಸೌಧದಲ್ಲಿ ಕೋವಿಡ್ ತಾಂತ್ರಿಕ ಸಲಹಾ ಸಮಿತಿಯ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ‘ಎಂಟು ದೇಶಗಳಲ್ಲಿ ಕೋವಿಡ್ ನಾಲ್ಕನೆ ಅಲೆ ಕಂಡುಬಂದಿದೆ. ದಕ್ಷಿಣ ಕೊರಿಯಾ, ಹಾಂಗ್‍ಕಾಂಗ್, ಚೀನಾ ದೇಶಗಳಲ್ಲಿ ಸಾಂಕ್ರಾಮಿಕದ ತೀವ್ರತೆ ಹೆಚ್ಚಿದೆ. ಜರ್ಮನಿ, ಯುಕೆಯಲ್ಲೂ ಸೋಂಕು ಹೆಚ್ಚಾಗಿದೆ. ಇಲ್ಲಿ ಎಕ್ಸ್  ಇ ಹಾಗೂ ಎಂಇ ಎಂಬ ಹೊಸ ವೈರಾಣು ಪ್ರಭೇದಗಳು ಕಂಡುಬಂದಿವೆ.

ನಮ್ಮ ದೇಶದಲ್ಲಿ ಹೊಸದಿಲ್ಲಿ ಹಾಗೂ ಹರಿಯಾಣ ರಾಜ್ಯಗಳಲ್ಲಿ ಕೋವಿಡ್ ಪ್ರಕರಣ ಹೆಚ್ಚಾಗಿದೆ. ಇದಕ್ಕಾಗಿ ತುರ್ತು ಸಮಾಲೋಚನೆ ಸಭೆ ನಡೆಸಲಾಗಿದೆ. ಈ 8 ದೇಶಗಳಿಂದ ಅಂತರ್‍ರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ರಾಜ್ಯಕ್ಕೆ ಬರುವವರ ಮೇಲೆ ವಿಶೇಷ ನಿಗಾ ಇರಿಸಬೇಕಿದೆ. ಆ ಪ್ರಯಾಣಿಕರಿಗೆ ಥರ್ಮಲ್ ತಪಾಸಣೆ ಮಾಡುವುದು, ಅವರು ಮನೆಗೆ ತೆರಳಿದ ಬಳಿಕ ಒಂದು ವಾರ ಅಥವಾ ಹತ್ತು ದಿನ ಟೆಲಿ ಮಾನಿಟರಿಂಗ್ ಮಾಡುವುದು, ಲಸಿಕೆ ಪಡೆಯದ ಮಕ್ಕಳ ಮೇಲೆ ವಿಶೇಷ ನಿಗಾ ಇರಿಸುವುದು, ಸುಮಾರು 5 ಸಾವಿರ ಮಕ್ಕಳಿಗೆ ಪರೀಕ್ಷೆ ಮಾಡುವುದು ಮೊದಲಾದ ಸಲಹೆಗಳನ್ನು ತಜ್ಞರು ನೀಡಿದ್ದಾರೆ. ಈ ಕುರಿತು ಮಾರ್ಗಸೂಚಿ ಬಿಡುಗಡೆ ಮಾಡಲಾಗುವುದು ಎಂದು ಸುಧಾಕರ್ ತಿಳಿಸಿದರು.

ಲಸಿಕೆ ಬಗ್ಗೆ ನಿರ್ಲಕ್ಷ್ಯ ಬೇಡ: ‘ಅನೇಕ ಜನರು ಮಾಸ್ಕ್ ಬಳಸುತ್ತಿಲ್ಲ. ಜೂನ್-ಜುಲೈ ತಿಂಗಳಲ್ಲಿ ನಾಲ್ಕನೆ ಅಲೆ ಬರಬಹುದು ಎಂದು ಕಾನ್ಪುರ ಐಐಟಿ ತಿಳಿಸಿದೆ. ಆದುದರಿಂದ ಮಾಸ್ಕ್ ಧರಿಸುವುದು ಸೂಕ್ತವಾಗಿದೆ. ಇದಲ್ಲದೆ, 60 ವರ್ಷ ಮೇಲ್ಪಟ್ಟವರು ಮೂರನೆ ಡೋಸ್ ಪಡೆಯಬೇಕಿದೆ. ಜೊತೆಗೆ ಇನ್ನೂ ಶೇ.2ರಷ್ಟು ಮಂದಿ ಎರಡನೆ ಡೋಸ್ ಪಡೆಯಬೇಕಿದೆ. ಮೊದಲ ಡೋಸ್‍ನಲ್ಲಿ ಶೇ.102 (4.97 ಕೋಟಿ), ಎರಡನೆ ಡೋಸ್‍ನಲ್ಲಿ ಶೇ.98(4.77 ಕೋಟಿ) ಪ್ರಗತಿಯಾಗಿದೆ. ಇನ್ನೂ 32 ಲಕ್ಷ ಮಂದಿ ಎರಡನೆ ಡೋಸ್ ಪಡೆಯಬೇಕಿದೆ. ಇದು ಬಹಳ ನಿರ್ಲಕ್ಷ್ಯದ ಸಂಗತಿಯಾಗಿದ್ದು, ಯಾರೂ ಉದಾಸೀನ ತೋರಬಾರದು ಎಂದು ಅವರು ಮನವಿ ಮಾಡಿದರು.

‘15ರಿಂದ 17 ವರ್ಷ ವಯೋಮಾನದವರ ಲಸಿಕಾಕರಣದಲ್ಲಿ ಮೊದಲ ಡೋಸ್‍ನಲ್ಲಿ ಶೇ.79(25.11ಲಕ್ಷ) ಪ್ರಗತಿಯಾಗಿದೆ. ಇದರ ಗುರಿ 31 ಲಕ್ಷದ ಗುರಿ ಇದೆ. ಎರಡನೆ ಡೋಸ್ ಲಸಿಕಾಕರಣದಲ್ಲಿ ಶೇ. 65ರಷ್ಟು ಪ್ರಗತಿಯಾಗಿದ್ದು, ಇನ್ನೂ ಶೇ.35ರಷ್ಟು ಮಂದಿ ಲಸಿಕೆ ಪಡೆಯಬೇಕಿದೆ. 60 ವರ್ಷ ಮೇಲ್ಪಟ್ಟವರಲ್ಲಿ ಶೇ.49ರಷ್ಟು ಮಂದಿ ಮಾತ್ರ ಮೂರನೇ ಡೋಸ್ ಪಡೆದಿದ್ದಾರೆ. ಇನ್ನೂ ಶೇ.51ರಷ್ಟು ಮಂದಿ ಮೂರನೆ ಡೋಸ್ ಲಸಿಕೆ ಪಡೆದೇ ಇಲ್ಲ. ಈ ವಯೋಮಾನದವರಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುವುದರಿಂದ ಬೇಗ ಲಸಿಕೆ ಪಡೆಯುವುದು ಸೂಕ್ತ. ಜನಸಾಮಾನ್ಯರು ಸರಕಾರದಂತೆಯೇ ಜವಾಬ್ದಾರಿ ಹೊಂದಿರಬೇಕು. ಆಗ ಮಾತ್ರ ಆರೋಗ್ಯ ತುರ್ತು ಪರಿಸ್ಥಿತಿ ನಿಭಾಯಿಸಲು ಸಾಧ್ಯ. ‘12-14 ವಯೋಮಾನದ 20 ಲಕ್ಷ ಮಕ್ಕಳು ರಾಜ್ಯದಲ್ಲಿದ್ದಾರೆ. ಈ ಪೈಕಿ 13.96 ಲಕ್ಷ ಮಕ್ಕಳು (ಶೇ.69) ಮೊದಲ ಡೋಸ್ ಲಸಿಕೆ ಪಡೆದಿದ್ದಾರೆ. ಉಳಿದ ಮಕ್ಕಳು ಬೇಗನೆ ಲಸಿಕೆ ಪಡೆಯಬೇಕಿದೆ ಎಂದು ತಿಳಿಸಿದರು.

ದುಬಾರಿ ಶುಲ್ಕ ವಸೂಲಿಗೆ ಕಡಿವಾಣ

ಕೆಲ ಖಾಸಗಿ ಆಸ್ಪತ್ರೆಗಳಲ್ಲಿ ಮನಸೋಇಚ್ಛೆ ದರ ನಿಗದಿ ಮಾಡಿರುವುದರ ಬಗ್ಗೆ ದೂರುಗಳು ಬಂದಿವೆ. ಇದಕ್ಕೆ ಕಡಿವಾಣ ಹಾಕಬೇಕೆಂಬುದು ಸರಕಾರದ ಉದ್ದೇಶ. ಈ ಬಗ್ಗೆ ಉನ್ನತ ಮಟ್ಟದಲ್ಲಿ ಚರ್ಚೆಯಾಗಿದ್ದು, ಸಮಿತಿ ರಚಿಸಲಾಗುವುದು. ಸಿಟಿ ಸ್ಕ್ಯಾನ್, ಎಂಆರ್‍ಐ ಸ್ಕ್ಯಾನಿಂಗ್ ಮೊದಲಾದವುಗಳ ದರ ಪರಿಷ್ಕರಣೆಯನ್ನು ಮಾಡಲಾಗಿದ್ದು, ಇದನ್ನು ಕೋವಿಡ್ ಸಂದರ್ಭದಲ್ಲಿ ಮಾತ್ರ ಎಂದು ಪರಿಗಣಿಸದೆ ಹೊಸ ದರವೆಂದು ಪರಿಗಣಿಸಬೇಕೆಂದು ಆಯುಕ್ತರಿಗೆ ಸೂಚಿಸಲಾಗಿದೆ. ಇದಕ್ಕಿಂತ ಹೆಚ್ಚು ದರ ವಸೂಲಿ ಮಾಡುವಂತಿಲ್ಲ. ನಿಯಮ ಉಲ್ಲಂಘಿಸಿದರೆ ಆಸ್ಪತ್ರೆಯ ಪರವಾನಿಗೆ ರದ್ದು ಮಾಡಲು ಸರಕಾರಕ್ಕೆ ಅಧಿಕಾರವಿದೆ.

-ಡಾ.ಕೆ.ಸುಧಾಕರ್, ಆರೋಗ್ಯ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News