ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್ 2021ಕ್ಕೆ ರಾಜ್ಯ ಸರಕಾರದಿಂದ ಸಕಲ ಸಿದ್ಧತೆ: ಸಚಿವ ನಾರಾಯಣಗೌಡ

Update: 2022-04-11 14:57 GMT

ಬೆಂಗಳೂರು, ಎ. 11: ‘ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್ 2021ನೆಯ ಎರಡನೆ ಆವೃತ್ತಿ ಯಶಸ್ವಿ ಆಯೋಜನೆಗೆ ರಾಜ್ಯ ಸರಕಾರ ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದೆ' ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಡಾ.ನಾರಾಯಣಗೌಡ ಅವರು ಇಂದಿಲ್ಲಿ ತಿಳಿಸಿದ್ದಾರೆ.

ಸೋಮವಾರ ವಿಧಾನಸೌಧದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಖೇಲೋ ಇಂಡಿಯಾ ಯೂನಿವರ್ಸಿಟಿ 2021ರ ಸಿದ್ಧತೆಗಳಿಗೆ ಸಂಬಂಧಿಸಿ ಕೇಂದ್ರ ಹಾಗೂ ರಾಜ್ಯ ಸರಕಾರದ ಹಿರಿಯ ಅಧಿಕಾರಿಗಳ ಜೊತೆ ಸುದೀರ್ಘ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ಎ.24ರಿಂದ ಮೇ 3ರವರೆಗೂ ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್ 2021ರ ಕ್ರೀಡಾಕೂಟ ನಡೆಯಲಿದ್ದು, ರಾಜ್ಯ ಸರಕಾರ ಎಲ್ಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದೆ' ಎಂದರು.

‘ಉಪರಾಷ್ಟ್ರಪತಿ ವೆಂಕಯ್ಯನಾಯ್ಡು, ಕೇಂದ್ರ ಸರಕಾರದ ಕ್ರೀಡಾ ಸಚಿವ ಅನುರಾಗ್ ಠಾಕೂರ್, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕ್ರೀಡಾಕೂಟ ಉದ್ಘಾಟಿಸಲಿದ್ದಾರೆ. ಸುಮಾರು 4,500 ಸಾವಿರ ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ' ಎಂದು ನಾರಾಯಣಗೌಡ ಇದೇ ವೇಳೆ ವಿವರ ನೀಡಿದರು.

ಕ್ರೇಂದ್ರ ಕ್ರೀಡಾ ಇಲಾಖೆ ಕಾರ್ಯದರ್ಶಿ ಸುಜಾತ ಚತುರ್ವೇದಿ ಮಾತನಾಡಿ, ‘ಶಾಲೆ ಮತ್ತು ಕಾಲೇಜಿನಲ್ಲಿ ಕ್ರೀಡಾಸ್ಫೂರ್ತಿ ಮೂಡಿಸಲು ಖೇಲೋ ಇಂಡಿಯಾ ನಡೆಸಲಾಗುವುದು. ಇದಕ್ಕಾಗಿ ಕೇಂದ್ರ ಸರಕಾರ 35 ಕೋಟಿ ರೂ.ಅನುದಾನ ನೀಡಿದೆ. ದೇಶದ 190 ಯೂನಿವರ್ಸಿಟಿಗಳ ನಾಲ್ಕೂವರೆ ಸಾವಿರಕ್ಕೂ ಹೆಚ್ಚು ಕ್ರೀಡಾಪಟುಗಳು ಪಾಲ್ಗೊಳ್ಳಲಿದ್ದಾರೆ. ಈ ಕ್ರೀಡಾಕೂಟದಲ್ಲಿ ಮೊದಲ ಬಾರಿಗೆ ಮಲ್ಲಗಂಬವನ್ನು ಸೇರಿಸಲಾಗಿದ್ದು, ಯೋಗ, ಕರಾಟೆ ಸೇರಿದಂತೆ 20 ಕ್ರೀಡೆಗಳ ಸ್ಪರ್ಧೆ ನಡೆಯಲಿದೆ' ಎಂದು ಹೇಳಿದರು.

ಈ ಬಾರಿ ಹಸಿರು ಕ್ರೀಡಾಕೂಟ

‘ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್‍ಗಾಗಿಯೇ ಕಂಠೀರವ ಕ್ರೀಡಾಂಗಣಕ್ಕೆ ಹೊಸ ಸಿಂಥೆಟಿಕ್ ಟ್ರ್ಯಾಕ್ ಅಳವಡಿಸಲಾಗಿದ್ದು, ಹಾಕಿಗಾಗಿ ಫೀಲ್ಡ್ ಮಾರ್ಷಲ್ ಕಾರಿಯಪ್ಪ ಅಂಗಣ ಹೊಸ ರೂಪು ಪಡೆದು ಸಜ್ಜಾಗಿದೆ. ರಾಜ್ಯ ಸರಕಾರವು ಕ್ರೀಡೆಯ ಜೊತೆಯಲ್ಲಿ ಪರಿಸರದ ಬಗ್ಗೆಯೂ ಯುವಜನರಲ್ಲಿ ಅರಿವು ಮೂಡಿಸುವ ಕಾರ್ಯವನ್ನು ಹಮ್ಮಿಕೊಂಡಿದೆ. ಈ ಹಿನ್ನೆಲೆಯಲ್ಲಿ ಈ ಬಾರಿಯ ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್ ಅನ್ನು ‘ಹಸಿರು ಕ್ರೀಡಾ ಕೂಟ' ಎಂದು ಘೋಷಿಸಿದ್ದು, ಇದು ಪ್ಲಾಸ್ಟಿಕ್ ಮುಕ್ತ ಕ್ರೀಡಾಕೂಟವಾಗಿರುತ್ತದೆ'

-ನಾರಾಯಣ ಗೌಡ ಕ್ರೀಡಾ ಸಚಿವ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News