ಮೇ ಎರಡನೇ ವಾರದಲ್ಲಿ ಎಸೆಸೆಲ್ಸಿ ಫಲಿತಾಂಶ: ಸಚಿವ ಬಿ.ಸಿ. ನಾಗೇಶ್

Update: 2022-04-11 15:40 GMT

ವಿಜಯಪುರ, ಎ.11: ‘ನಾಳೆಯಿಂದ (ಎ.12) ಎಸೆಸೆಲ್ಸಿ ಪರೀಕ್ಷೆಯ ಉತ್ತರಗಳು, ಉತ್ತರಗಳಿಗೆ ಆಕ್ಷೇಪಣೆ ಕರೆಯುವುದು ಸೇರಿದಂತೆ ಇನ್ನಿತರ ಪ್ರಕ್ರಿಯೆಗಳು ಆರಂಭವಾಗುತ್ತವೆ. ಎಪ್ರಿಲ್ ಕೊನೆಯ ವಾರದಲ್ಲಿ ಮೌಲ್ಯಮಾಪನ ಪ್ರಕ್ರಿಯೆ ಆರಂಭವಾಗಲಿದ್ದು, ಮೇ ಎರಡನೇ ವಾರದಲ್ಲಿ ಫಲಿತಾಂಶ ಪ್ರಕಟಿಸುವ ಗುರಿ ಇದೆ. ಜೂ. 4ನೇ ವಾರದಲ್ಲಿ ಪೂರಕ ಪರೀಕ್ಷೆ ನಡೆಯಲಿದೆ’ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಮಾಹಿತಿ ನೀಡಿದರು.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ರಾಜ್ಯದಾದ್ಯಂತ ಎಸೆಸೆಲ್ಸಿ ಪರೀಕ್ಷೆ ಸುಸೂತ್ರವಾಗಿ ನಡೆದು, ಮುಕ್ತಾಯಗೊಂಡಿವೆ. ಒಂದು ಪರೀಕ್ಷಾ ಕೇಂದ್ರದಲ್ಲಿ ಮಾತ್ರ ಪರೀಕ್ಷಾ ಅಕ್ರಮ ವರದಿಯಾಗಿದೆ. ಈ ಸಂಬಂಧ ಒಬ್ಬ ವಿದ್ಯಾರ್ಥಿಯನ್ನು ಡಿಬಾರ್ ಮಾಡಲಾಗಿದೆ. ಮೊದಲ ಬಾರಿ ಪರೀಕ್ಷೆ ಬರೆಯುತ್ತಿರುವವರಲ್ಲಿ ಹಾಜರಾತಿ ಪ್ರಮಾಣ ಶೇ.98ಕ್ಕಿಂತ ಹೆಚ್ಚು ಇದೆ. ಆದರೆ, ಖಾಸಗಿ ಅಭ್ಯರ್ಥಿಗಳು ಮತ್ತು ಪುನರಾವರ್ತಿತ ಅಭ್ಯರ್ಥಿಗಳ ಸಂಖ್ಯೆಯಲ್ಲಿ ಗೈರು ಹಾಜರಾತಿ ಪ್ರಮಾಣ ಎಂದಿನಂತೆ ಮುಂದುವರೆದಿದೆ’ ಎಂದು ಸ್ಪಷ್ಟಪಡಿಸಿದರು.

‘ಸಮವಸ್ತ್ರ ವಿಚಾರವಾಗಿ ಶಾಲೆಗಳಲ್ಲಿ ಯಾವುದೇ ಗೊಂದಲ ಉಂಟಾಗಿಲ್ಲ. ವಿದ್ಯಾರ್ಥಿಗಳು ಸಮವಸ್ತ್ರದಲ್ಲಿ ಹಾಜರಾಗಿ ಪರೀಕ್ಷೆ ಬರೆದಿದ್ದಾರೆ. ಅನಾರೋಗ್ಯ ಲಕ್ಷಣಗಳು ಕಂಡು ಬಂದರೆ ಅಂತಹ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ಪರೀಕ್ಷೆ ಬರೆಯಲು ಕೊಠಡಿ ವ್ಯವಸ್ಥೆ ಕಲ್ಪಿಸಲಾಗಿತ್ತು. ಪರೀಕ್ಷೆಯ ಅವಧಿಯಲ್ಲಿ ಯಾವೊಬ್ಬ ವಿದ್ಯಾರ್ಥಿಗೂ ಕೋವಿಡ್ ಪಾಸಿಟಿವ್ ಬಂದಿಲ್ಲ’ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News