×
Ad

ಪ್ರಹ್ಲಾದ್ ಜೋಶಿ, ಡಾ.ಕೆ.ಸುಧಾಕರ್ ಕನ್ನಡ ದ್ರೋಹಿಗಳು: ಎಚ್.ಡಿ.ಕುಮಾರಸ್ವಾಮಿ ವಾಗ್ದಾಳಿ

Update: 2022-04-11 23:14 IST

ಬೆಂಗಳೂರು, ಎ.11: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹಿಂದಿ ಹೇರಿಕೆ ಹೇಳಿಕೆಯನ್ನು ಸಮರ್ಥನೆ ಮಾಡಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಹಾಗೂ ರಾಜ್ಯದ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರು ಕನ್ನಡ ದ್ರೋಹಿಗಳು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ಹಿಂದಿ ಹೇರಿಕೆ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹಿಂದಿ ಪರ ಹೇಳಿಕೆ ವಿರೋಧಿಸಿ ಹಮ್ಮಿಕೊಳ್ಳಲಿರುವ ಹೋರಾಟದ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಕೇಂದ್ರ ಸರಕಾರವು ಆರೆಸ್ಸೆಸ್ಸ್‍ನ ಹಿಡನ್ ಅಜೆಂಡಾಗಳನ್ನು ಬಲವಂತವಾಗಿ ಹೇರಲು ಮುಂದಾಗಿದೆ. ಅದರಲ್ಲಿ ಈ ಹಿಂದಿ ಹೇರಿಕೆ ಕೂಡ ಒಂದು. ಅದನ್ನು ಬಿಜೆಪಿ ನಾಯಕರು, ಸಚಿವರು ಸಮರ್ಥನೆ ಮಾಡುತ್ತಿರುವುದು ಸರಿಯಲ್ಲ ಎಂದು ಹೇಳಿದರು.

ಇಂದು ಕನ್ನಡದ ಹಾಗೂ ಕನ್ನಡಿಗರ ಅನೇಕ ಸಮಸ್ಯೆಗಳು ನಮ್ಮ ಮುಂದಿವೆ. ಇತ್ತೀಚೆಗೆ ಭಾಷೆ ಸಮಸ್ಯೆ ಶುರುವಾಗಿದೆ. ಅಲ್ಲದೆ, ನಮ್ಮ ನದಿಗಳ ನೀರು ಉಪಯೋಗಿಸುವ ವಿಚಾರದಲ್ಲಿ ನಮ್ಮನ್ನು ಕೇಂದ್ರ ಸರಕಾರ ಲಘುವಾಗಿ ಪರಿಗಣಿಸುತ್ತಿದೆ. ಈಗಲೇ ನಾವು ಎಚ್ಚೆತ್ತುಕೊಳ್ಳಬೇಕಾಗಿದೆ. ಇಲ್ಲದೇ ಹೋದರೆ ನಮ್ಮತನ ಕಳೆದುಕೊಳ್ಳಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು.

ಇಲ್ಲಿನ ಮಂತ್ರಿಗಳು, ಕೇಂದ್ರದ ಮಂತ್ರಿಗಳು ಕೇಂದ್ರದ ನೀತಿಯ ಬಗ್ಗೆ ಸಮರ್ಥನೆ ಮಾಡಿಕೊಂಡಿದ್ದಾರೆ. ಹಾಗಾದರೆ, ಕನ್ನಡದ ಬಗ್ಗೆ ಅವರ ನಿಲುವೇನು? ಯಾಕೆ ಹಿಂದಿ ಮೇಲೆ ಮೋಹ? ಕನ್ನಡದ ಮೇಲೆ ಯಾಕೆ ನಿರ್ಲಕ್ಷ್ಯ? ಎಂದು ಕುಮಾರಸ್ವಾಮಿ ಅವರು ಪ್ರಶ್ನಿಸಿದರು. ಇಂಥ ನಾಯಕರನ್ನು ಕನ್ನಡದ ದ್ರೋಹಿಗಳು ಎನ್ನದೆ ಇನ್ನೇನೆಂದು ಕರೆಯಬೇಕು ಎಂದು ಅವರು ಹೇಳಿದರು.

ನಮ್ಮ ನಾಡಗೀತೆಯಂತಹ ಗೀತೆಯನ್ನು ಬೇರೆ ಯಾವ ರಾಜ್ಯದಲ್ಲಿ ಕೂಡಾ ಕಾಣಲು ಸಾಧ್ಯವಿಲ್ಲ. ಹಲವಾರು ಪ್ರದೇಶ, ಬಾಷೆಗಳು ಸೇರಿ ಒಕ್ಕೂಟ ರಾಷ್ಟ್ರವಾಗಿದೆ. ಕಳೆದ ಎಪ್ಪತ್ರೈದು ವರ್ಷಗಳಲ್ಲಿ ಭಾರತದ ಒಕ್ಕೂಟದ ವ್ಯವಸ್ಥೆ ಗೆ ಧಕ್ಕೆ ಆಗಿರಲಿಲ್ಲ. ಈಗ ಅದನ್ನು ಹಾಳು ಮಾಡುವ ಕೆಲಸ ನಡೆಯುತ್ತಿದೆ ಎಂದು ಕುಮಾರಸ್ವಾಮಿ ಕಿಡಿಕಾರಿದರು.

ಖಾಸಗಿ ಕ್ಷೇತ್ರದಲ್ಲಿ ಸ್ಪರ್ಧೆ ಇದೆ. ಹಾಗಾಗಿ ಇಂಗ್ಲೀಷ್ ಭಾಷೆ ಅನಿವಾರ್ಯವಾಗಿದೆ. ಕನ್ನಡ ಕಲಿತವರಲ್ಲಿ ಜ್ಞಾನ ಇದ್ದರೂ ಪ್ರೆಸೆಂಟೇಷನ್ ಬಗ್ಗೆ ಸ್ವಲ್ಪ ಕಷ್ಟವಾಗಲಿದೆ ಎನ್ನುವ ಕಾರಣಕ್ಕೆ ಇಂಗ್ಲಿಷ್ ಬೇಕು ಎಂದು ಎಲ್ಲರೂ ಹೇಳುತ್ತಾರೆ. ಆದರೆ, ಹಿಂದಿ ಹೇರಿಕೆ ಏಕೆ? ಹಿಂದಿ ಹೇರಿಕೆ ಬಗ್ಗೆ ತಮಿಳುನಾಡು ವಿರೋಧ ವ್ಯಕ್ತಪಡಿಸಿದೆ. ನಾವು ಕೂಡ ಇದನ್ನು ಪ್ರತಿಭಟಿಸಬೇಕಾಗಿದೆ. ಎಂದು ಅವರು ಹೇಳಿದರು. ಕರವೇ ಅಧ್ಯಕ್ಷ ಶಿವರಾಮೇಗೌಡರು, ರೈತ ಹೋರಾಟಗಾರ ಪಚ್ಚೆ ನಂಜುಂಡ್ವಾಮಿ ಮತ್ತಿತರರು ಈ ಸಂದರ್ಭದಲ್ಲಿ ಮಾತನಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News