ಕುಸಿಯುತ್ತಿರುವ ಕಾನೂನು, ಸುವ್ಯವಸ್ಥೆ

Update: 2022-04-12 04:35 GMT

ಯಡಿಯೂರಪ್ಪನವರು ಮುಖ್ಯಮಂತ್ರಿ ಸ್ಥಾನದಿಂದ ನಿರ್ಗಮಿಸಿದ ನಂತರ ರಾಜ್ಯದಲ್ಲಿ ನಡೆಯುತ್ತಿರುವ ಘಟನೆಗಳನ್ನು ಗಮನಿಸಿದರೆ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿರುವುದು ಸ್ಪಷ್ಟವಾಗುತ್ತದೆ. ಯಾವುದೇ ಅಹಿತಕರ ಘಟನೆ ಸಂಭವಿಸಿದರೂ ಬಾಯಿ ಬಿಚ್ಚದ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿಯವರನ್ನು ಸಂವಿಧಾನೇತರ ಅಧಿಕಾರ ಕೇಂದ್ರವೊಂದು ನಿಯಂತ್ರಿಸುತ್ತಿದೆಯೇನೋ ಎಂಬ ಭಾವನೆ ಸಹಜವಾಗಿ ಮೂಡುತ್ತದೆ. ಹಿಜಾಬ್‌ನಿಂದ ಆರಂಭಗೊಂಡು ಮುಸ್ಲಿಮ್ ವ್ಯಾಪಾರಿಗಳಿಗೆ ಬಹಿಷ್ಕಾರ ಹಾಕುವವರೆಗಿನ ಹಾಗೂ ನಂತರದ ಹಲಾಲ್ ಮಾಂಸ ಮಾರಾಟದ ಬೆಳವಣಿಗೆಗಳಲ್ಲಿ ಬೀದಿ ಗೂಂಡಾಗಳು ಕಾನೂನನ್ನು ಕೈಗೆತ್ತಿಕೊಂಡರು. ಶನಿವಾರ ಧಾರವಾಡದಲ್ಲಿ ಕಲ್ಲಂಗಡಿ ವ್ಯಾಪಾರ ಮಾಡುತ್ತಿದ್ದ ನಬೀಸಾಹೇಬರ ಅಂಗಡಿಯ ಮೇಲೆ ದಾಳಿ ಮಾಡಿ ಧ್ವಂಸ ಗೊಳಿಸಿದರು. ಪೊಲೀಸರು ಮೂಕ ಪ್ರೇಕ್ಷಕರಾಗಿ ನಿಂತಿರದಿದ್ದರೆ ಈ ಅಹಿತಕರ ಘಟನೆಗಳು ನಡೆಯುತ್ತಿರಲಿಲ್ಲ. ಅಂತಲೇ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯನವರು ಸರಕಾರವನ್ನು ನೇರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

 ಬಿಜೆಪಿ ಸರಕಾರದ ಆಡಳಿತ ವೈಖರಿಯನ್ನು ಪ್ರತಿಪಕ್ಷಗಳು ಟೀಕಿಸುವುದು ಸಹಜ.ಆದರೆ ಆಡಳಿತ ಹಳಿ ತಪ್ಪಿರುವ ಬಗ್ಗೆ ಕಾನೂನು ಮಂತ್ರಿ ಜೆ.ಸಿ.ಮಾಧುಸ್ವಾಮಿ ಅವರೂ ಬಹಿರಂಗವಾಗಿ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಬೆಳಗಾವಿಯಲ್ಲಿ ರವಿವಾರ ಸುದ್ದಿಗಾರರ ಜೊತೆ ಮಾತಾಡಿದ ಮಾಧುಸ್ವಾಮಿ ಅವರು ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟರೆ ಸರಕಾರಕ್ಕೆ ಕೆಟ್ಟ ಹೆಸರು ಬರುತ್ತದೆ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೇ ಮುಸ್ಲಿಮ್ ವ್ಯಾಪಾರಿಗಳು ವ್ಯಾಪಾರ ಮಾಡಲು ನಿರ್ಬಂಧ ವಿಧಿಸುವ ಹಿಂದೂ ಪರ ಸಂಘಟನೆಗಳ ಮೇಲೆ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. ತಮ್ಮ ಸಂಪುಟದ ಹಿರಿಯ ಸಚಿವರ ಈ ಹೇಳಿಕೆಯಿಂದ ದಿಗಿಲುಗೊಂಡ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ‘‘ಮಾಧುಸ್ವಾಮಿ ಅವರ ಹೇಳಿಕೆಯನ್ನು ಗಮನಿಸಿಲ್ಲ. ಅವರು ಯಾವ ಹಿನ್ನೆಲೆಯಲ್ಲಿ ಈ ಹೇಳಿಕೆ ನೀಡಿದರೋ ಗೊತ್ತಿಲ್ಲ. ಅವರೊಂದಿಗೆ ಮಾತಾಡುವೆ’’ ಎಂದು ಸಾವರಿಸಿಕೊಂಡು ಸ್ಪಷ್ಟೀಕರಣ ನೀಡಿದ್ದಾರೆ. ಇವರಿಬ್ಬರ ಹೇಳಿಕೆಗಳಿಂದ ಒಂದು ಅಂಶ ಸ್ಪಷ್ಟವಾಗುತ್ತದೆ. ಅದಾವುದೆಂದರೆ ಬಿಜೆಪಿ ಸರಕಾರ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸಂಪೂರ್ಣ ವಿಫಲಗೊಂಡಿದೆ.

ಬೀದಿ ಗೂಂಡಾಗಳು ಬಂದು ಇಂತಹವರು ವ್ಯಾಪಾರ ಮಾಡಬಾರದು ಎಂದು ಬೆದರಿಕೆ ಹಾಕಿ ದಾಳಿ ಮಾಡುವ ಮಟ್ಟಿಗೆ ಪರಿಸ್ಥಿತಿ ಹದಗೆಟ್ಟರೆ ಅರಾಜಕತೆಯ ವಾತಾವರಣ ಉಂಟಾಗುತ್ತದೆ. ಕೋವಿಡ್ ಮೊದಲ ಅಲೆ ಬಂದಾಗ 2020ರಲ್ಲಿ ತಬ್ಲೀಗಿ ಕತೆ ಕಟ್ಟಿ ಕೆಲವರು ಮುಸಲ್ಮಾನರ ವಿರುದ್ಧ ಅಪಪ್ರಚಾರ ನಡೆಸಿದಾಗ ಆಗಿನ ಮುಖ್ಯಮಂತ್ರಿ ಯಡಿಯೂರಪ್ಪನವರು ಅದನ್ನು ಖಂಡಿಸಿದ್ದರು. ಅಶಾಂತಿ ಉಂಟು ಮಾಡುವವರಿಗೆ ಎಚ್ಚರಿಕೆ ನೀಡಿದ್ದರು. ಆರೆಸ್ಸೆಸ್ ಮೂಲದಿಂದ ಬಂದರೂ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿ ಜವಾಬ್ದಾರಿಯಿಂದ ವರ್ತಿಸಿದ್ದರು. ಆದರೆ ಜನತಾದಳ ಮೂಲದಿಂದ ಬಂದ ಬಸವರಾಜ ಬೊಮ್ಮಾಯಿಯವರು ರಾಜ್ಯದಲ್ಲಿ ಹಾಡ ಹಗಲೇ ಪುಂಡಾಟಿಕೆ ನಡೆಯುತ್ತಿದ್ದರೂ ಜಾಣ ಮೌನ ತಾಳಿದ್ದಾರೆ. ತಾವು ರಾಜ್ಯದ ಆರೂವರೆ ಕೋಟಿ ಜನರಿಗೆ ಮುಖ್ಯಮಂತ್ರಿ ಎಂಬುದನ್ನು ಮರೆತು, ಸಂಘ ಪರಿವಾರ ಎಂಬ ಸಂವಿಧಾನೇತರ ಅಧಿಕಾರ ಕೇಂದ್ರದ ಅಣತಿಯಂತೆ ಆಡಳಿತ ನಡೆಸುತ್ತಿರುವುದು ರಾಜ್ಯದ ಇಂದಿನ ಅರಾಜಕ ಪರಿಸ್ಥಿತಿಗೆ ಕಾರಣ ಎಂದು ಹೇಳಿದರೆ ತಪ್ಪಿಲ್ಲ.

ರಾಜ್ಯದ ಈಗಿನ ಆತಂಕಕಾರಿ ವಿದ್ಯಮಾನಗಳನ್ನು ಗಮನಿಸಿದರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ತಮ್ಮ ಸಚಿವ ಸಂಪುಟದ ಮೇಲೆ ಹಾಗೂ ಪಕ್ಷದ ಮೇಲೆ ನಿಯಂತ್ರಣ ಇದ್ದಂತಿಲ್ಲ. ಸಂಘ ಪರಿವಾರದ ನಿಗೂಢ ಕೇಂದ್ರವೊಂದು ಸರಕಾರವನ್ನು ನಿಯಂತ್ರಿಸುತ್ತಿರುವಂತೆ ಕಾಣುತ್ತದೆ. ರಾಜ್ಯದಲ್ಲಿ ಇಷ್ಟೆಲ್ಲಾ ಕೋಲಾಹಲಕಾರಿ ಘಟನೆಗಳು ನಡೆಯುತ್ತಿರುವಾಗ ಮುಖ್ಯಮಂತ್ರಿ ಜಾಣ ಮೌನ ತಾಳುವುದು ಸರಿಯಲ್ಲ. ಸರಕಾರ ಏನು ಮಾಡಬೇಕೆಂಬುದನ್ನು ಗಲಭೆಕೋರ ಕೋಮುವಾದಿ ಸಂಘಟನೆಗಳು ನಿರ್ದೇಶಿಸುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ.

ಬೆಂಗಳೂರಿನ ಜಗಜೀವನರಾಮ್ ನಗರದ ಯುವಕ ಚಂದ್ರಶೇಖರ್ ಹತ್ಯೆಗೆ ಸಂಬಂಧಿಸಿದಂತೆ ಗೃಹ ಸಚಿವ ಆರಗ ಜ್ಞಾನೇಂದ್ರ ತಪ್ಪುಹೇಳಿಕೆ ನೀಡಿ ನಂತರ ಸರಿಪಡಿಸಿಕೊಂಡಿದ್ದು ಎಲ್ಲರಿಗೂ ತಿಳಿದ ಸಂಗತಿ. ಆ ನಂತರವೂ ಸುಮ್ಮನಾಗದ ಬಿಜೆಪಿ ಶಾಸಕರಾದ ಸಿ.ಟಿ.ರವಿ ಮುಂತಾದವರು ‘‘ಪೊಲೀಸರು ಸಚಿವರಿಂದ ತಪ್ಪು ಹೇಳಿಕೆ ನೀಡಿಸಿದ್ದಾರೆ. ಉರ್ದು ಮಾತನಾಡದಿರುವುದಕ್ಕೆ ಚಂದ್ರಶೇಖರ್‌ನ ಕೊಲೆಯಾಗಿದೆ’’ ಎಂದೆಲ್ಲ ತಮ್ಮದೇ ಸರಕಾರದ ಸಚಿವರ ವಿರುದ್ಧ ಬಹಿರಂಗವಾಗಿ ಟೀಕಿಸಿದರು. ಆಗಲೂ ಮುಖ್ಯಮಂತ್ರಿ ಜಾಣ ಮೌನ ತಾಳಿದರು. ಅವರನ್ನು ಕರೆಯಿಸಿ ಪ್ರಶ್ನಿಸುವ ಶಕ್ತಿಯನ್ನೇ ಬೊಮ್ಮಾಯಿಯವರು ಕಳೆದುಕೊಂಡಿದ್ದಾರೆ. ಯಾವುದೇ ಮುಖ್ಯಮಂತ್ರಿಗೆ ಇಷ್ಟು ಅಸಹಾಯಕ ಪರಿಸ್ಥಿತಿ ಬರಬಾರದು.

 ಆಡಳಿತ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ತಾವು ಹಿಂದುತ್ವವಾದಿಗಳು ಎಂದು ಹೇಳಿಕೊಂಡು ಯಾವುದೋ ಕೆಲವು ಸಂಘಟನೆಗಳು ಜಾತ್ರೆ, ಉತ್ಸವಗಳಲ್ಲಿ ಮುಸಲ್ಮಾನರು ವ್ಯಾಪಾರ ಮಾಡಬಾರದು ಎಂದು ನಿರ್ಬಂಧ ಹೇರಿ ಗೂಂಡಾಗಿರಿ ನಡೆಸುವುದನ್ನು ನೋಡಿ ಜಗತ್ತಿನ ಇತರ ದೇಶಗಳ ಜನ ನಗುತ್ತಾರೆ. ಯಾವುದೇ ನಿರ್ಬಂಧ ಹೇರುವ ಅಧಿಕಾರ ಸರಕಾರಕ್ಕೆ ಇರುತ್ತದೆ. ಕರ್ನಾಟಕದ ಸರಕಾರ ತಾನು ನಿರ್ವಹಿಸಬೇಕಾದ ಅಧಿಕಾರವನ್ನು ಸಮಾಜ ವಿರೋಧಿ ಕೋಮುವಾದಿ ಸಂಘಟನೆಗಳಿಗೆ ಬಿಟ್ಟು ಕೊಟ್ಟಿರುವುದು ಅತ್ಯಂತ ಅಪಹಾಸ್ಯಕರ ಸಂಗತಿಯಾಗಿದೆ. ಯಾರಿಗೂ ಕಾನೂನು ಕೈಗೆತ್ತಿಕೊಳ್ಳಲು ಬಿಡುವುದಿಲ್ಲ ಎಂದು ಗರ್ಜಿಸಬೇಕಾದ ಮುಖ್ಯಮಂತ್ರಿ ಯಾರದೋ ಮುಲಾಜಿನಲ್ಲಿ ಇರುವಂತೆ ಜಾಣ ಮೌನ ತಾಳುತ್ತಿದ್ದಾರೆ.

ಆಡಳಿತ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಮತ್ತೆ ಚುನಾವಣಾ ಗೆಲುವು ಸಾಧಿಸಲು ಕೋಮುವಾದಿ ಸಂಘಟನೆಗಳ ಮೊರೆ ಹೋದ ಮುಖ್ಯಮಂತ್ರಿ ‘‘ಕ್ರಿಯೆಗೆ ಪ್ರತಿಕ್ರಿಯೆ’’ ಎಂದು ಹೇಳಿಕೆ ನೀಡುವ ಮೂಲಕ ರಾಜ್ಯದಲ್ಲಿ ಹಿಂಸಾಚಾರ, ಅರಾಜಕತೆಗೆ ಕಾರಣರಾದರು ಎಂದು ಹೇಳಿದರೆ ತಪ್ಪಿಲ್ಲ. ಬೀದಿ ಗೂಂಡಾಗಳೇ ಎಲ್ಲವನ್ನೂ ನಿರ್ಧರಿಸುವುದಾದರೆ ಸರಕಾರವಾದರೂ ಏಕೆ ಬೇಕು. ಕರ್ನಾಟಕದ ಪ್ರಜ್ಞಾವಂತ ಜನತೆ ಎಂದೂ ಇಂತಹ ದುರಾಡಳಿತಕ್ಕೆ ಅವಕಾಶ ನೀಡಿಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ತಮಗೆ ಅನಾಯಾಸವಾಗಿ ದೊರಕಿದ್ದ ಮುಖ್ಯಮಂತ್ರಿ ಹುದ್ದೆಯ ಘನತೆಯನ್ನು ಕಾಪಾಡಿಕೊಳ್ಳುವಲ್ಲಿ ವಿಫಲರಾದರು ಎಂದು ಹೇಳಿದರೆ ಅತಿಶಯೋಕ್ತಿಯಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News