ಕೆಜಿಎಫ್-2 ಬಿಡುಗಡೆಗೆ ತಡೆ ಕೋರಿ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಕೆ

Update: 2022-04-12 14:17 GMT
ಕೆಜಿಎಫ್-2 ಚಿತ್ರದ ಪೋಸ್ಟರ್

ಬೆಂಗಳೂರು, ಎ.11: ಇದೇ ಎ.14ರಂದು ಕರ್ನಾಟಕ ಸೇರಿ ಇತರೆ ಭಾಷೆಗಳಲ್ಲಿ ಬಿಡುಗಡೆಗೆ ಸಜ್ಜಾಗಿ ನಿಂತಿರುವ ಕೆಜಿಎಫ್ ಚಾಫ್ಟರ್-2 ಸಿನೆಮಾಗೆ ತಡೆ ಕೋರಿ ಸಿಟಿ ಸಿವಿಲ್ ಕೋರ್ಟ್‍ಗೆ ಅರ್ಜಿ ಸಲ್ಲಿಕೆಯಾಗಿದೆ. ಅರ್ಜಿ ಇನ್ನಷ್ಟೇ ವಿಚಾರಣೆಗೆ ಬರಬೇಕಿದೆ. 

ಕಲ್ಯಾಣ ಕರ್ನಾಟಕ ವೇದಿಕೆಯ ಸಂಸ್ಥಾಪಕ ಅಶೋಕ್ ಕುಮಾರ್, ರೈತ ಮತ್ತು ಕಾರ್ಮಿಕರ ರಕ್ಷಣಾ ವೇದಿಕೆ ವತಿಯಿಂದ ಕೆಜಿಎಫ್-2 ಸಿನಿಮಾ ತಡೆ ಕೋರಿ ಸಿಟಿ ಸಿವಿಲ್ ಕೋರ್ಟ್‍ಗೆ ಅರ್ಜಿ ಸಲ್ಲಿಸಿದೆ.

ಕೆಜಿಎಫ್ ಸಿನೆಮಾಗೆ ಸಾಮಾಜಿಕ ಬದ್ಧತೆ ಇಲ್ಲ. ಕೇವಲ ಚಾಕು-ಚೂರಿ ಸಂಸ್ಕøತಿ ತೋರಿಸಿದ್ದಾರೆ. ಕ್ರೌರ್ಯವನ್ನು ಮೆರೆಸಿದ್ದಾರೆ. ಇಂತಹ ಸಿನಿಮಾಗಳ ಬಿಡುಗಡೆಯಿಂದ ಸಮಾಜದ ಸ್ವಾಸ್ಥ್ಯ ಹಾಳಾಗುತ್ತದೆ. ಚಿತ್ರದಲ್ಲಿರುವ ಕ್ರೌರ್ಯ ದೃಶ್ಯಗಳಿಗೆ ಕತ್ತರಿ ಹಾಕುವಂತೆ ಸೆನ್ಸಾರ್ ಬೋರ್ಡ್‍ಗೆ ದೂರು ಸಲ್ಲಿಸಿದ್ದೆವು. ನಮ್ಮ ಮನವಿ ಅಂಗೀಕರಿಸಿಲ್ಲ. ಬದಲಿಗೆ ಕ್ರೌರ್ಯ ಇರುವ ಸಿನಿಮಾಗೆ ಯುಎ ಸರ್ಟಿಫಿಕೇಟ್ ನೀಡಿ ಬಿಡುಗಡೆಗೆ ಅನುಮತಿ ನೀಡಿದೆ. ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ಕೊಟ್ಟರೂ ಪ್ರಯೋಜನ ಆಗಿಲ್ಲ. ಹೀಗಾಗಿ ನಾವು ನ್ಯಾಯಾಲಯದ ಮೊರೆ ಹೋಗಿದ್ದೇವೆ. ಬುಧವಾರ ನಮ್ಮ ಅರ್ಜಿಯ ವಿಚಾರಣೆಗೆ ಬರಲಿದೆ ಎಂದು ಅರ್ಜಿದಾರ ಅಶೋಕ್ ಕುಮಾರ್ ತಿಳಿಸಿದ್ದಾರೆ.

ಕೆಜಿಎಫ್ ಸಿನಿಮಾ ಕನ್ನಡದ್ದು. ಈ ಹಿಂದೆ ಕ್ರೌರ್ಯಕ್ಕೆ ಸಂಬಂಧಿಸಿದಂತೆ ಅನೇಕ ಸಿನಿಮಾಗಳು ಬಂದಿವೆ. ಅವಾಗ ಇಲ್ಲದ ಕ್ರೌರ್ಯ ಕೆಜಿಎಫ್‍ನಲ್ಲಿ ಕಾಣಿಸಿತೇ ಎಂಬ ಪ್ರಶ್ನೆಗೆ ಉತ್ತರಿಸಿದ ಅಶೋಕ್ ಕುಮಾರ್, ಈ ಹಿಂದೆ ಆಗಿದ್ದು ಹೋಯಿತು. ನಮ್ಮ ಗಮನಕ್ಕೆ ಬಂದರೆ ಇನ್ಮುಂದೆ ಎಲ್ಲ ಕ್ರೌರ್ಯ ಸಿನಿಮಾಗಳ ವಿರುದ್ಧ ಕಾನೂನು ಸಮರ ಸಾರುತ್ತೇವೆ. ಈ ಮೂಲಕವೇ ಪಾಠ ಕಲಿಸುತ್ತೇವೆ. ಕೆಜಿಎಫ್ ಚಿತ್ರ ಬಿಡುಗಡೆಗೆ ನಮ್ಮ ತಕಾರರು ಇಲ್ಲ. ಕನ್ನಡದ ಸಿನಿಮಾ ಹೊರ ದೇಶಗಳಲ್ಲಿ ಬಿಡುಗಡೆ ಆಗುತ್ತಿದೆ ಎಂದರೆ ನಮಗೂ ಖುಷಿಯೇ. ಆದರೆ, ಸಿನಿಮಾದಲ್ಲಿನ ಕ್ರೌರ್ಯಕ್ಕೆ ಕತ್ತರಿ ಹಾಕಲಿ. ಗನ್‍ನಲ್ಲಿ ಸಿಗರೇಟ್ ಅಂಟಿಸಿಕೊಳ್ಳುವ ದೃಶ್ಯವಿದೆ. ಅದನ್ನು ನೋಡಿದ ಮಕ್ಕಳ ಮನಸ್ಥಿತಿ ಏನಾಗಬೇಕು. ಅಪರಾಧಕ್ಕೆ ಪ್ರೇರಣೆ ನೀಡಿದಂತಾಗುತ್ತದೆ. ಇಂತಹ ಕ್ರೌರ್ಯವನ್ನು ಸಿನಿಮಾದಲ್ಲಿ ವಿಜೃಂಭಣೆ ಮಾಡಿರುವುದಕ್ಕೆ ನಮ್ಮ ತಕರಾರಿದೆ. ನ್ಯಾಯಾಲಯದ ಮೊರೆ ಹೋಗಿದ್ದೇವೆ. ನ್ಯಾಯಾಲಯದಲ್ಲಿ ಈ ಸಿನಿಮಾಗೆ ತಡೆ ಸಿಗುತ್ತದೆ ಎಂಬ ಭರವಸೆ ಇದೆ ಎಂದು ಅವರು ತಿಳಿಸಿದ್ದಾರೆ.

ಕೆಜಿಎಫ್ ಸಿನಿಮಾಗೆ ತಡೆ ಕೋರಿ ಸಲ್ಲಿಸಿರುವ ಅರ್ಜಿಯಲ್ಲಿ ನಿರ್ಮಾಪಕ ವಿಜಯ್ ಕಿರಗುಂದೂರು ಹಾಗೂ ನಿರ್ದೇಶಕ ಪ್ರಶಾಂತ್ ನೀಲ್ ಅವರನ್ನು ಪ್ರತಿವಾದಿಗಳನ್ನಾಗಿ ಉಲ್ಲೇಖಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News