ರಾಜ್ಯದಲ್ಲಿ ಅನಧಿಕೃತ ಪ್ರಭುತ್ವ ಚಾಲ್ತಿಯಲ್ಲಿದೆ: ಪ್ರೊ.ಬಿ.ಕೆ.ಚಂದ್ರಶೇಖರ್ ಆರೋಪ

Update: 2022-04-12 18:29 GMT

ಬೆಂಗಳೂರು, ಎ. 12: `ಗೋರಿಪಾಳ್ಯ ಚಂದ್ರು ಕೊಲೆ ಪ್ರಕರಣ ಸಂಬಂಧ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಹೇಳಿಕೆ ವಿರುದ್ಧ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎಸ್.ರವಿಕುಮಾರ್ ಹೇಳಿಕೆಯನ್ನು ಗಮನಿಸಿದರೆ ರಾಜ್ಯದಲ್ಲಿ ಆರೆಸೆಸ್ಸ್, ಸಂಘ ಪರಿವಾರ ಪ್ರೇರಿತ ಅನಧಿಕೃತ ಪ್ರಭುತ್ವ ಚಾಲ್ತಿಯಲ್ಲಿರುವುದು ಸ್ಪಷ್ಟ' ಎಂದು ಮಾಜಿ ಸಚಿವ ಪ್ರೊ.ಬಿ.ಕೆ.ಚಂದ್ರಶೇಖರ್ ಇಂದಿಲ್ಲಿ ಆರೋಪಿಸಿದ್ದಾರೆ.

ಮಂಗಳವಾರ ವಿಧಾನಸೌಧದಲ್ಲಿನ ಕಾಂಗ್ರೆಸ್ ಶಾಸಕಾಂಗ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, `ನಗರ ಪೊಲೀಸ್ ಆಯುಕ್ತರು ಖುದ್ದು ಪರಿಶೀಲನೆ ನಡೆಸಿ ಘಟನೆಯ ಬಗ್ಗೆ ಹೇಳಿಕೆ ನೀಡಿದ್ದು, ಆ ಹೇಳಿಕೆ ಸುಳ್ಳು ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಹೇಳಿದ್ದು, ಒಂದು ಪೊಲೀಸ್ ಆಯುಕ್ತರು ಆ ಸ್ಥಾನದಲ್ಲಿ ಮುಂದುವರಿಯಲು ಸಾಧ್ಯವಿಲ್ಲ ಅಥವಾ ನೀವು ನಮ್ಮ ಅಣತಿಯಂತೆ ನಡೆದುಕೊಳ್ಳಬೇಕೆಂಬ ಎಚ್ಚರಿಕೆ ನೀಡುವ ಧಾಟಿಯಲ್ಲಿದೆ' ಎಂದು ಹೇಳಿದರು.

`ಚಂದ್ರು ಕೊಲೆಗೆ ಭಾಷೆಯ ವಿಚಾರ ಕಾರಣವಲ್ಲ ಎಂದು ನಗರ ಪೊಲೀಸ್ ಆಯುಕ್ತರು ಹೇಳಿದ್ದರು. ಆ ಹೇಳಿಕೆ ಸುಳ್ಳು ಎಂದು ಬಿಜೆಪಿ ಹೇಳುತ್ತಿದ್ದು, ಇದರ ಹಿಂದಿನ ಕಾರಣ ಏನಿರಬಹುದು, ಇಂತಹ ಆರೋಪವನ್ನು ಯಾರೂ ಈ ಹಿಂದೆ ಮಾಡಿರಲಿಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡಲೇ ಇಂತಹ ಹೇಳಿಕೆಗಳನ್ನು ನಿಲ್ಲಿಸಲು ಸೂಚನೆ ನೀಡಬೇಕು. ಇಲ್ಲವಾದರೆ, ಇವರಿಗೆ ಆಡಳಿತದಲ್ಲಿ ಹಿಡಿತವಿಲ್ಲ ಎಂಬುದು ಸ್ಪಷ್ಟ ಎಂದು ಅವರು ದೂರಿದರು.

`ಹಿರಿಯ ಅಧಿಕಾರಿಗಳ ಹೇಳಿಕೆಯನ್ನು ಅಲ್ಲಗಳೆಯುವುದು ಪೊಲಿಸರ ನೈತಿಕ ಸ್ಥೈರ್ಯ ಕುಸಿಯುವಂತೆ ಮಾಡುತ್ತದೆ. ಜೊತೆಗೆ ಬಿಜೆಪಿ, ಆರೆಸೆಸ್ಸ್ ಅಣತಿಯಂತೆ ನೀವು ಕೆಲಸ ಮಾಡಬೇಕೆಂದು ತಾಕೀತು ಮಾಡುವಂತಿದೆ. ಹೀಗಾಗಿಯೇ ನಾನು ರಾಜ್ಯದಲ್ಲಿನ ಕೋಮು ಸಂಘರ್ಷದ ವಿಚಾರಗಳನ್ನು ಸೂಕ್ಷ್ಮವಾಗಿ ಗಮನಿಸಿ ಹೇಳುತ್ತಿದ್ದೇನೆ. ರಾಜ್ಯದಲ್ಲಿ ಅನಧಿಕೃತ ಪ್ರಭುತ್ವ ಚಾಲ್ತಿಯಲ್ಲಿದೆ. ಇದು ಅತ್ಯಂತ ಅಪಾಯಕಾರಿ' ಎಂದು ಚಂದ್ರಶೇಖರ್ ಎಚ್ಚರಿಸಿದರು.

`ಧಾರವಾಡದ ನುಗ್ಗಿಕೇರಿ ಘಟನೆ ಮೊದಲೇ ಗೊತ್ತಿದ್ದರೂ ಪೊಲೀಸರು ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಉತ್ತರ ಪ್ರದೇಶ ಮಾದರಿಯಲ್ಲೇ ರಾಜ್ಯದಲ್ಲಿಯೂ ಕೋಮು ಘರ್ಷಣೆಗಳು ನಡೆಯುತ್ತಿದ್ದು, ವಿಎಚ್‍ಪಿ, ಆರೆಸೆಸ್ಸ್, ಸಂಘ ಪರಿವಾರದ ಗೂಂಡಾಗಳು ಪೊಲೀಸರೊಂದಿಗೆ ಸಂಪರ್ಕವಿಟ್ಟುಕೊಂಡೇ ಅಹಿತಕರ ಕೃತ್ಯಗಳನ್ನು ನಡೆಸುತ್ತಿದ್ದಾರೆ ಎಂದು ಪ್ರೊ.ಬಿ.ಕೆ.ಚಂದ್ರಶೇಖರ್ ದೂರಿದರು.

ಕಮಲ್ ಪಂತ್ ಅವರಂತಹ ಹಿರಿಯ ಅಧಿಕಾರಿಗಳಿಗೆ ಬಿಜೆಪಿ ಮುಖಂಡರು ಬೆದರಿಕೆವೊಡ್ಡಿದರೆ ಅವರು ಕಾನೂನು ಸುವ್ಯವಸ್ಥೆ ಕಾಪಾಡಲು ಹೇಗೆ ಸಾಧ್ಯ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ಬಗ್ಗೆ ಸ್ಪಷ್ಟ ಹೇಳಿಕೆ ನೀಡದೆ ತಿಪ್ಪೆ ಸಾರಿಸುವ ರೀತಿಯಲ್ಲಿ ಮಾತನಾಡುವುದು ಒಳ್ಳೆಯ ಬೆಳವಣಿಗೆಯಲ್ಲ. ಪೊಲೀಸ್ ವ್ಯವಸ್ಥೆ ರಾಜಕೀಯಕರಣ ಅಪಾಯಕಾರಿ ಎಂದು ಚಂದ್ರಶೇಖರ್ ಟೀಕಿಸಿದರು. ಸುದ್ದಿಗೋಷ್ಠಿಯಲ್ಲಿ ಮೇಲ್ಮನೆ ಸದಸ್ಯ ಪ್ರಕಾಶ್ ರಾಠೋಡ್ ಹಾಜರಿದ್ದರು.

`ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ಬಿಜೆಪಿ ಸೇರ್ಪಡೆ ಘೋಷಣೆ ಮಾಡಿರುವುದು ಸರಿಯಲ್ಲ. ಸಭಾಪತಿ ಸ್ಥಾನದಲ್ಲಿದ್ದು ಅವರು ಪರಿಷತ್ ನಡಾವಳಿ ಹಾಗೂ ಸಂವಿಧಾನದ ವಿರುದ್ಧ ಹೇಳಿಕೆ ಬಗ್ಗೆ ಅವರು ಆತ್ಮಾವಲೋಕನ ಮಾಡಿಕೊಳ್ಳಬೇಕು. ಹೀಗೆ ಒಂದು ಪಕ್ಷಕ್ಕೆ ಸೇರ್ಪಡೆ ಹೇಳಿಕೆ `ಅನರ್ಹತೆ'ಗೆ ಅವಕಾಶ ಆಗುತ್ತದೆ. ಮೇಲ್ಮನೆ ಸಭಾಪತಿ ಕಾನೂನು ಉಲ್ಲಂಘನೆ ಮಾಡಿದರೆ ಯಾರು ಕ್ರಮ ಕೈಗೊಳ್ಳಲು ಸಾಧ್ಯ'

-ಪ್ರಕಾಶ್ ರಾಠೋಡ್ ವಿಧಾನ ಪರಿಷತ್ ಸದಸ್ಯ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News