ಬಿಜೆಪಿಗೂ ಶ್ರೀರಾಮಸೇನೆಗೂ ಯಾವುದೇ ಸಂಬಂಧವಿಲ್ಲ: ನಳಿನ್‌ಕುಮಾರ್ ಕಟೀಲ್

Update: 2022-04-13 08:27 GMT

ಮೈಸೂರ: ಮೈಸೂರು: ‘ಬಿಜೆಪಿಗೂ ಶ್ರೀರಾಮಸೇನೆಗೂ ಯಾವುದೇ ಸಂಬಂಧವಿಲ್ಲ' ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ತಿಳಿಸಿದರು.

ನಗರದ ಖಾಸಗಿ ಹೋಟೆಲ್‍ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು,  ರಾಜ್ಯದಲ್ಲಿ ಮುಸ್ಲಿಂ ಸಮುದಾಯದ ವಿರುದ್ಧ ವಿವಾದಗಳನ್ನು ಹುಟ್ಟುಹಾಕುತ್ತಿರುವ ಸಂಘಪರಿವಾರಕ್ಕೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ, ಇದೂ ಸ್ಥಳೀಯ ಸಮಸ್ಯೆ, ಈ ವಿವಾದ ಮುಂದಿಟ್ಟು ಲಾಭ ಪಡೆಯುವ ಅಗತ್ಯ ನಮಗಿಲ್ಲ ಎಂದು ತಿಳಿಸಿದರು.

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ 150 ಸ್ಥಾನಗಳನ್ನು ಗೆಲ್ಲುವ ಮೂಲಕ ಸ್ವಂತ ಬಲದಲ್ಲಿ ಸರ್ಕಾರ ನಡೆಸುತ್ತೇವೆ ಎಂದು ನಳೀನ್ ಕುಮಾರ್ ಕಟೀಲ್ ವಿಶ್ವಾಸ ವ್ಯಕ್ತಪಡಿಸಿದರು

ಎಪ್ರಿಲ್ 14 ರ ನಂತರ 3 ತಂಡಗಳಾಗಿ ಮುಖಂಡರ ನೇತೃತ್ವದಲ್ಲಿ ರಾಜ್ಯಾದ್ಯಂತ ಪ್ರವಾಸ ಮಾಡಲಾಗುವುದು. ಪ್ರಚಾರದ ನೀಲಿನಕ್ಷೆ ತಯಾರಾಗಿದೆ. ಸಂಘಟನೆ ದೃಷ್ಟಿಯಿಂದ 10 ವಿಭಾಗ ಮಾಡಿಕೊಂಡಿದ್ದು, ಸ್ಥಳೀಯ ಕಾರ್ಯಕರ್ತರ ಸಲಹೆ, ಜನರ ನಿರೀಕ್ಷೆ, ಅಭಿಪ್ರಾಯ ಕ್ರೂಢೀಕರಿಸಿ ಸಂಘಟನೆ ಮಾಡುತ್ತೇವೆ. ತಳಮಟ್ಟದಲ್ಲಿ ಸಂಘಟನೆ ದೃಷ್ಟಿಯಿಂದ ಪೇಜ್ ಕಮಿಟಿ ಮಾಡಿಕೊಂಡಿದ್ದು, ಪ್ರತಿಯೊಂದು ಪೇಜ್ ಮತದಾರರ ಜತೆ ನಮ್ಮ 6ಜನ ಕಾರ್ಯಕರ್ತರು ನಿರಂತರ ಸಂಪರ್ಕದಲ್ಲಿರುತ್ತಾರೆ ಎಂದು ವಿವರಿಸಿದರು.

ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡಿದ್ದು, ಡೆತ್‍ನೋಟ್‍ನಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ನನ್ನ ಸಾವಿಗೆ ಕಾರಣ ಎಂದು ಬರೆದಿದ್ದಾರೆ. ಪಕ್ಷ ಈಶ್ವರಪ್ಪ ಅವರ ರಾಜಿನಾಮೆ ಕೇಳುವಿದಿಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸಿದ ನಳೀನ್ ಕುಮಾರ್ ಕಟೀಲ್, ಮೊದಲು ತನಿಖೆ ನಡೆಸಿ ನಂತರ ಕ್ರಮ ಕೈಗೊಳ್ಳಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ಸಚಿವರಾದ ಗೋಪಾಲಯ್ಯ, ಜಗದೀಶ್ ಶೆಟ್ಟರ್, ವಿ.ಸೋಮಣ್ಣ, ನಾರಾಯಣಗೌಡ, ಸಂಸದ ಪ್ರತಾಪ್ ಸಿಂಹ, ಶಾಸಕರಾದ ಎಸ್.ಎ.ರಾಮದಾಸ್, ಎಲ್.ನಾಗೇಂದ್ರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News