ಡಿವೈಎಸ್ಪಿ ಆತ್ಮಹತ್ಯೆಗೆ ಸಂಬಂಧಿಸಿ ಕೆ.ಜೆ ಜಾರ್ಜ್ ರಾಜೀನಾಮೆಗೆ ಪಟ್ಟು ಹಿಡಿದಿದ್ದ ಸಚಿವ ಈಶ್ವರಪ್ಪ ವಿಡಿಯೋ ವೈರಲ್

Update: 2022-04-13 06:34 GMT
 ಸಚಿವ ಈಶ್ವರಪ್ಪ

ಬೆಂಗಳೂರು: ಡಿವೈಎಸ್ಪಿ ಗಣಪತಿ ಆತ್ಮ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಗೃಹ ಸಚಿವರಾಗಿದ್ದ ಕೆ.ಜೆ ಜಾರ್ಜ್ ರಾಜೀನಾಮೆಗೆ ಪಟ್ಟು ಹಿಡಿದಿದ್ದ  ಸಚಿವ ಈಶ್ವರಪ್ಪ ಅವರ ವಿಡಿಯೋ ಒಂದು ಸಾಮಾಜಿಕ ಜಾಲತಾಣದಾದ್ಯಂತ ಹರಿದಾಡುತ್ತಿದೆ. 

ಸಚಿವ ಈಶ್ವರಪ್ಪ ವಿರುದ್ಧ ಕಮಿಷನ್ ಕಿರುಕುಳ ಆರೋಪ ಮಾಡಿದ್ದ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ  ಇದೀಗ ವಿರೋಧ ಪಕ್ಷ ಕಾಂಗ್ರೆಸ್ ಸೇರಿದಂತೆ ರಾಷ್ಟ್ರ ಮಟ್ಟದಲ್ಲಿ ಹಲವರು ಸಚಿವರ ರಾಜೀನಾಮೆಗೆ ಒತ್ತಾಯಿಸುತ್ತಿದ್ದು,  'ಸಂತೋಷ್  ಎಂದರೆ ಯಾರೆಂದೇ ನನಗೆ ಗೊತ್ತಿಲ್ಲ, ನಾನು ರಾಜೀನಾಮೆ ನೀಡುವುದಿಲ್ಲ' ಎಂದು ಈಶ್ವರಪ್ಪ ಅವರು ಪ್ರತಿಕ್ರಿಯಿಸಿದ್ದಾರೆ.

 ''ಡಿವೈಎಸ್ಪಿ ಗಣಪತಿ ಆತ್ಮ ಹತ್ಯೆ ಪ್ರಕರಣದಲ್ಲಿ ಕೆ.ಜೆ ಜಾರ್ಜ್ ಅವರು ರಾಜೀನಾಮೆ ನೀಡದೇ ಇದ್ದಲ್ಲಿ ಈ ದಾಖಲೆಗಳನ್ನು ಮುಚ್ಚಿಹಾಕುತ್ತಾರೆ. ಆದ್ದರಿಂದ ತಕ್ಷಣ ಸರಕಾರ ಅವರ ರಾಜೀನಾಮೆ ಪಡೆಯಬೇಕು.  ಸುಪ್ರೀಂ ಕೋರ್ಟ್ ನಲ್ಲಿ ಕೆ.ಜೆ ಜಾರ್ಜ್ ಅವರು ತಪ್ಪಿತಸ್ಥ ಅಲ್ಲ ಎಂದು ಆದೇಶ ಬಂದ ಮೇಲೆ ಅವಾಗಲೇ ಅವರನ್ನು ಮಂತ್ರಿ ಮಾಡಿ'' ಎಂದು ವಿಧಾನಸಪರಿಷತ್ ನಲ್ಲಿ ಮಾತನಾಡಿದ್ದ ಸಚಿವ ಈಶ್ವರಪ್ಪ ಅವರ ವಿಡಿಯೋ ತುಣುಕೊಂದು ಸದ್ಯ ವೈರಲ್ ಆಗಿದೆ.

ಈ ವಿಡಿಯೋವನ್ನು  ಟ್ವಿಟರ್ ನಲ್ಲಿ ಹಂಚಿಕೊಂಡಿರುವ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ,  'ಈಶ್ವರಪ್ಪನವರು ಅವರೇ ಆಡಿದ್ದ ಮಾತುಗಳನ್ನು ಪಾಲಿಸಬೇಕು. ಅವರ ಮಾತುಗಳು ಅವರಿಗೆ ನೆನಪಿರದಿದ್ದರೆ ನಾವು ನೆನಪಿಸುತ್ತಿದ್ದೇವೆ! ಜಾರ್ಜ್ ಅವರು ರಾಜೀನಾಮೆ ಕೊಟ್ಟಿದ್ದೂ ಆಗಿದೆ, ದೋಷಮುಕ್ತರಾಗಿದ್ದೂ ಆಗಿದೆ. ಈಗ ಈಶ್ವರಪ್ಪನವರು ಅವರದ್ದೇ ಮಾತುಗಳನ್ನು ಪಾಲಿಸಿ ನೈತಿಕತೆ ತೋರಲಿ, ಪ್ರಭಾವ ಬೀರದಂತೆ ಅಧಿಕಾರದಿಂದ ದೂರ ಉಳಿದು ತನಿಖೆ ಎದುರಿಸಲಿ' ಎಂದು ಬರೆದುಕೊಂಡಿದ್ದಾರೆ.

'ನಿಮಗೆ ಆರೆಸ್ಸೆಸ್ ಮಿನಿಮಮ್ ನಿಯತ್ತು ಕಲಿಸಿದ್ದರೆ ನಿಮ್ಮ ಮಾತನ್ನು ನೀವೇ ಪಾಲಿಸಿ. ಇದೇ ಪರಿಷತ್ ನಲ್ಲಿ ನಿಂತು ಮಾಜಿ ಸಚಿವ ಕೆ.ಜೆ.ಜಾರ್ಜ್ ವಿರುದ್ಧ ಏನು ಮಾತಾಡಿದ್ದಿರೋ ಅದೇ ಮಾತುಗಳು ಈಗ ನಿಮಗೆ ಅನ್ವಯಿಸುತ್ತವೆ. ನಿಮಗೆ ಆರೆಸ್ಸೆಸ್ ಕಲಿಸಿದ್ದು ನಿಯತ್ತೋ, ನಿರ್ಲಜ್ಜತನವೋ ಎನ್ನುವುದು ನಿಮ್ಮ ಮತ್ತು ಆರೆಸ್ಸೆಸ್ ನಾಯಕರ ವರ್ತನೆಯಿಂದ ಗೊತ್ತಾಗುತ್ತದೆ' ಎಂದು ವಿಧಾನ ಪರಿಷತ್‌ ವಿರೋಧ ಪಕ್ಷದ ಮುಖ್ಯ ಸಚೇತಕ ಪ್ರಕಾಶ್‌ ರಾಥೋಡ್‌ ಕೂಡ ಟ್ವಿಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ. 

ಇನ್ನು ಡಿವೈಎಸ್ಪಿ ಗಣಪತಿ ಅವರ ಆತ್ಮ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಮಡಿಕೇರಿ ಪ್ರದಾನ ಸಿವಿಲ್ ನ್ಯಾಯಾಲಯ ಎಫ್ ಐಆರ್ ದಾಖಲಿಸುವಂತೆ ಆದೇಶ ನೀಡಿದ್ದ ಬೆನ್ನಲ್ಲೇ ಅಂದಿನ ಗೃಹ  ಸಚಿವರಾಗಿದ್ದ ಕೆ.ಜೆ ಜಾರ್ಜ್ ರಾಜೀನಾಮೆ ನೀಡಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News