ಸಚಿವ ಈಶ್ವರಪ್ಪ ವಿರುದ್ಧ ಪ್ರಕರಣ: ಎಫ್.ಐ.ಆರ್.ನಲ್ಲಿ ಏನಿದೆ?

Update: 2022-04-13 07:12 GMT

ಉಡುಪಿ, ಎ.13: ಸಚಿವ ಕೆ.ಎಸ್.ಈಶ್ವರಪ್ಪ ವಿರುದ್ಧ ಕಮಿಷನ್ ಕಿರುಕುಳದ ಆರೋಪ ಮಾಡಿದ್ದ ಬೆಳಗಾವಿಯ ಗುತ್ತಿಗೆದಾರ ಸಂತೋಷ್ ಕೆ. ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಸಚಿವ ಈಶ್ವರಪ್ಪ ಹಾಗೂ ಆಪ್ತರಾದ ಬಸವರಾಜ ಮತ್ತು ರಮೇಶ್ ಎಂಬವರ ವಿರುದ್ಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ  ಪ್ರಕರಣ ದಾಖಲಾಗಿದೆ.

ಎ.11ರ ರಾತ್ರಿ ಉಡುಪಿ ನಗರದ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಬಳಿಯ ಶಾಂಭವಿ ಹೋಟೆಲ್ ನಲ್ಲಿ ಅನುಮಾನಾಸ್ಪದ ವಾಗಿ ಸಾವನ್ನಪ್ಪಿರುವ ಸಂತೋಷ್ ಪಾಟೀಲ್ ಅವರ ಸಂಬಂಧಿ ಬೆಳಗಾವಿಯ ಪ್ರಶಾಂತ ಗೌಡಪ್ಪ ಪಾಟೀಲ ಎಂಬವರು ನೀಡಿದ ದೂರಿನಂತೆ ಎ.13ರಂದು ನಸುಕಿನ ವೇಳೆ ಕಲಂ:306 Rw 34 IPCಯಂತೆ ಸಚಿವ ಈಶ್ವರಪ್ಪ ಸಹಿತ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ.

ಎಫ್.ಐ.ಆರ್.ನಲ್ಲಿ ಏನಿದೆ?

2020-21 ನೇ ಸಾಲಿನಲ್ಲಿ ಹಿಂಡಲಗಾ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಶ್ರೀ ಲಕ್ಷ್ಮೀ ದೇವಿ ಜಾತ್ರೆ ಜರುಗುವ ಹಿನ್ನೆಲೆಯಲ್ಲಿ ಊರಿನ ಪ್ರಮುಖರು ಮತ್ತು ಸ್ವಾಮಿಗಳು ಸೇರಿಕೊಂಡು ಗ್ರಾಮೀಣಾಭಿವೃದ್ಧಿ ಸಚಿವ  ಕೆ.ಎಸ್ ಈಶ್ವರಪ್ಪರನ್ನು ಬೆಂಗಳೂರಿನಲ್ಲಿ ಭೇಟಿ ಮಾಡಿ, ಜಾತ್ರೆಯ ವಿಷಯ ತಿಳಿಸಿ ಹಿಂಡಲಗಾ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಸಂಬಂಧಿಸಿದ ರಸ್ತೆ, ಚರಂಡಿ ಕಾಮಗಾರಿ, ಪೆವರ್ಸ್ ಜೋಡಣೆ ಇತ್ಯಾದಿ ಕಾಮಗಾರಿಗಳನ್ನು ಮಾಡಿಕೊಡಬೇಕೆಂದು ಗ್ರಾಮಸ್ಥರು ಸಚಿವರಲ್ಲಿ ವಿನಂತಿಸಿಕೊಂಡಿರುತ್ತಾರೆ. ಈ ಸಂದರ್ಭ ಸಚಿವರು (ಕೆ.ಎಸ್ ಈಶ್ವರಪ್ಪನವರು) ನೀವು ನಮ್ಮ ಕಾರ್ಯಕರ್ತರು ಇದ್ದೀರಿ, ನೀವು ಕೆಲಸ ಶುರು ಮಾಡಿ, ಕಾಮಗಾರಿಗಳಿಗೆ ಎಷ್ಟೇ ಹಣ ಆದರೂ ಪರವಾಗಿಲ್ಲ ಕೆಲಸ ಶುರು ಮಾಡಿ ಎಂದು ತಿಳಿಸಿದ್ದರು.

ಅದರಂತೆ ಊರಿಗೆ ಹಿಂದಿರುಗಿದ ಪ್ರಮುಖರು ಹಾಗೂ ಗ್ರಾಮ ಪಂಚಾಯತ್ ಅಧ್ಯಕ್ಷರು, ಸಂತೋಪ್ ಪಾಟೀಲ್ ಅವರಿಗೆ ಕೆಲಸ ಪ್ರಾರಂಭಿಸಲು ತಿಳಿಸಿರುತ್ತಾರೆ. ಅದರಂತೆ ಸಂತೋಷ್ ಪಾಟೀಲ್ ಮತ್ತು ಉಳಿದ ಗುತ್ತಿಗೆದಾರರು ಸೇರಿಕೊಂಡು ಹಿಂಡಲಗಾ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸುಮಾರು 4 ಕೋಟಿಗೂ ಅಧಿಕ ಮೊತ್ತದ ಕಾಮಗಾರಿಯನ್ನು ಸ್ವಂತ ಹಣದಿಂದ ಹಾಗೂ ಇತರರ ಸಹಾಯದಿಂದ ಪೂರ್ಣಗೊಳಿಸಿರುತ್ತಾರೆ. 

ಸದ್ರಿ ಕಾಮಗಾರಿಗಳ ಬಿಲ್ ಗಾಗಿ ಸಚಿವರಾದ ಕೆ.ಎಸ್ ಈಶ್ವರಪ್ಪ ಮತ್ತು ಅವರ ಆಪ್ತರಾದ ಬಸವರಾಜ್ ಮತ್ತು ರಮೇಶ್ ಅವರನ್ನು ಹಲವು ಸಾರಿ ಭೇಟಿಯಾಗಿ ಕೆಲಸ ಪೂರ್ಣಗೊಳಿಸಿದ್ದೇವೆ ಬಿಲ್ಲನ್ನು ಮಂಜೂರು ಮಾಡಿಕೊಡುವಂತೆ ವಿನಂತಿಸಿಕೊಂಡಿರುತ್ತಾರೆ. ಆದರೆ ಅವರೆಲ್ಲರೂ ಹಾಗೆ ಕೆಲಸ ಆಗುವುದಿಲ್ಲಾ 40 ಪರ್ಸೆಂಟ್ ಕಮಿಷನ್ ನೀಡಿದರೆ ಬಿಲ್ ಪಾಸ್ ಮಾಡಿಸುವುದಾಗಿ ಹೇಳಿದ್ದರು.

ಈ ಕಮಿಷನ್ ವಿಷಯ ಕುರಿತು ಬೆಳಗಾವಿ ಗುತ್ತಿಗೆದಾರರ ಸಂಘದವರು ಸರಕಾರಕ್ಕೆ ದೂರು ಸಲ್ಲಿಸಿರುತ್ತಾರೆ. ಅದೇ ರೀತಿ ಗುತ್ತಿಗೆದಾರರಾದ ಸಂತೋಷ್ ಪಾಟೀಲ್ ಮಾರ್ಚ್ ತಿಂಗಳಿನಲ್ಲಿ ಸಚಿವರಾದ ಕೆ.ಎಸ್ ಈಶ್ವರಪ್ಪ ಇವರು 40 ಪರ್ಸೆಂಟ್ ಕಮೀಷನ್ ಗೆ ಬೇಡಿಕೆ ಇಟ್ಟಿದ್ದಾರೆಂದು ಮಾದ್ಯಮಗಳಲ್ಲಿ ಆರೋಪಿಸಿದ್ದರು.

ಕಾಮಗಾರಿಗಳ ಬಿಲ್ ವಿಷಯವಾಗಿ ಕೆ.ಎಸ್ ಈಶ್ವರಪ್ಪ ಅವರನ್ನು ಭೇಟಿಯಾಗಿ ಬಿಲ್ ಪಾಸ್ ಮಾಡಿಸಲು ಹೋಗುತ್ತಿದ್ದೇನೆಂದು ತನ್ನ ಪತ್ನಿ ಹಾಗು ಇತರರೊಂದಿಗೂ ತಿಳಿಸುತ್ತಿದ್ದರು. ಇದೇ ಬಿಲ್ ಪಾಸ್ ಆಗದ ಕಾರಣ ಸಚಿವರಾದ ಕೆ.ಎಸ್ ಈಶ್ವರಪ್ಪ ಮತ್ತು ಅವರ ಆಪ್ತರಾದ ರಮೇಶ್ ಮತ್ತು ಬಸವರಾಜ್ ವಿರುದ್ಧ ವಿಡಿಯೋ ಫೂಟೇಜ್ ಮುಖೇನ 4 ಕೋಟಿ ಕಾಮಗಾರಿ ಹಣದ ಬಿಲ್ ಅನ್ನು ಪಾಸ್ ಮಾಡದ ಕಾರಣ ಮುಂದೆ ಆಗುವ ಅನಾಹುತಕ್ಕೆ ನೀವೇ ಕಾರಣರಾಗಿರುತ್ತೀರಿ ಎಂದು ಮಾಧ್ಯಮಗಳ ಮೂಲಕ ವಿಷಯ ಪ್ರಸ್ತಾಪಿಸಿರುತ್ತಾರೆ.

ಸಂತೋಷ್ ಅವರು ಅನೇಕ ರೀತಿಯ ರಸ್ತೆ ಕಾಮಗಾರಿಗಳಿಗೆ ಹಣ ಹಾಕಿದ್ದರಿಂದ ಅಡಚಣೆಯಾಗಿ 40 ಪರ್ಸೆಂಟ್ ಕಮಿಷನ್ ವಿಷಯದ ಕುರಿತು ರಾಜ್ಯ ಬಿಜೆಪಿ ಉಸ್ತುವಾರಿಯಾದ ಅರುಣ್ ಸಿಂಗ್ ಅವರಿಗೆ ಹಾಗೂ ದೆಹಲಿ ಬಿಜೆಪಿ ವರಿಷ್ಟರಿಗೆ, ಪ್ರಧಾನ ಮಂತ್ರಿಗಳ ಕಚೇರಿಗೆ ಭೇಟಿ ನೀಡಿ ಕೆ.ಎಸ್ ಈಶ್ವರಪ್ಪ ಅವರ ವಿರುದ್ಧ ಬಿಲ್ ಪಾಸು ಮಾಡದ ಹಾಗೂ 40 ಪರ್ಸೆಂಟ್ ಕಮಿಷನ್ ಕುರಿತು ಮನವಿ ಸಲ್ಲಿಸಿದ್ದಾರೆ. ಆದರೂ ಸಹ ಬಿಲ್ ಪಾಸ್ ಆಗಿರುವುದಿಲ್ಲ. ಅದೇ ವಿಷಯದಲ್ಲಿ ಸಂತೋಪ್ ಪಾಟೀಲ್ ಆರೋಪಿಗಳಾದ ಕೆ.ಎಸ್ ಈಶ್ವರಪ್ಪ ಹಾಗೂ ಅವರ ಆಪ್ತರಾದ ರಮೇಶ್ ಮತ್ತು ಬಸವರಾಜ್ ವಿರುದ್ಧ ಮನನೊಂದು ತನ್ನ ಮೊಬೈಲಿನಿಂದ ವಾಟ್ಸಪ್ ಡೆತ್ ನೋಟ್ ಸಂದೇಶವನ್ನು ಮಾಧ್ಯಮಗಳಿಗೆ ಮತ್ತು ಆಪ್ತರಿಗೆ ಕಳುಹಿಸಿರುವುದಾಗಿ ಉಡುಪಿ ನಗರ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News