ನಾನು ರಾಜೀನಾಮೆ ಕೊಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ: ಸಚಿವ ಈಶ್ವರಪ್ಪ

Update: 2022-04-13 08:34 GMT

ಶಿವಮೊಗ್ಗ: ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ 'ನಾನು ರಾಜೀನಾಮೆ ಕೊಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ' ಎಂದು ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ತಿಳಿಸಿದ್ದಾರೆ.

ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವ ಈಶ್ವರಪ್ಪ, ವಾಟ್ಸ್ ಆ್ಯಪ್ ನಲ್ಲಿ ಟೈಪ್ ಮಾಡಿರುವ ಡೆತ್ ನೋಟ್ ಬಂದಿದೆ. ಆದರೆ ಸಹಿ ಮಾಡಿರುವ ಯಾವುದೇ ಡೆತ್ ನೋಟ್ ಪತ್ತೆ ಆಗಿಲ್ಲ. ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಯಾವುದೇ ಭಷ್ಟಾಚಾರ ಆಗಿಲ್ಲ. ಆದ್ದರಿಂದ ನಾನು ರಾಜೀನಾಮೆ ಕೊಡುವ ಪ್ರಶ್ನೆಯೇ ಉದ್ಭವವಾಗುವುದಿಲ್ಲ' ಎಂದು ಹೇಳಿದರು. 

ನಾನು ಸಂತೋಷ್ ಮುಖವನ್ನೇ ನೋಡಿಲ್ಲ. ಅಂಥದ್ದರಲ್ಲಿ ಆತ 80 ಬಾರಿ ನನ್ನನ್ನು ಭೇಟಿಯಾಗಿದ್ದಾನೆ ಅಂತ ಹೇಳುತ್ತಿದ್ದಾರೆ. ಆದ್ದರಿಂದ ಸಂತೋಷ್ ಸಾವಿನ ಬಗ್ಗೆ ಅಮೂಲಾಗ್ರ ತನಿಖೆ ಆಗಬೇಕು. ಸಮಗ್ರ ತನಿಖೆ ನಡೆಸಲು ಮುಖ್ಯಮಂತ್ರಿಗೆ ಮನವಿ ಮಾಡಿದ್ದೇನೆ ಎಂದರು.

ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗಿದ್ದು, ಮಂಗಳವಾರ ಉಡುಪಿ ನಗರದ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಬಳಿಯ ಶಾಂಭವಿ ಲಾಡ್ಜ್  ನಲ್ಲಿ ಸಂತೋಷ್ ಆತ್ಮಹತ್ಯೆ ಮಾಡಿಕೊಂಡಿದ್ದರು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News