ಈಶ್ವರಪ್ಪರ ರಕ್ಷಣೆಗೆ ನಿಂತ ಪ್ರಧಾನಿ ಮೋದಿ, ಸಿಎಂ ಬೊಮ್ಮಾಯಿ ಶೇ. 40 ಕಮಿಷನ್ ನಲ್ಲಿ ಪಾಲುದಾರರಾ?: ಬಿ ಕೆ ಹರಿಪ್ರಸಾದ್

Update: 2022-04-13 09:39 GMT
ಬಿ ಕೆ ಹರಿಪ್ರಸಾದ್

ಬೆಂಗಳೂರು: 'ಸಂತೋಷ್ ಪಾಟೀಲ್ ಆತ್ಮಹತ್ಯೆ ವಿಷಯಕ್ಕೆ ಕ್ರಿಮಿನಲ್ ಆರೋಪ ಹೊತ್ತಿರುವ ಸಚಿವ ಈಶ್ವರಪ್ಪರನ್ನು ಸಚಿವ ಸಂಪುಟದಿಂದ ವಜಾ ಮಾಡಲು ರಾಜ್ಯಪಾಲರನ್ನ ಕಾಂಗ್ರೆಸ್ ನಿಯೋಗ ಭೇಟಿ ನೀಡಿ ಮನವಿ ಮಾಡಿದ್ದೇವೆ. ಸೆಕ್ಷನ್ 306ರಡಿಯಲ್ಲಿ ಈಶ್ವರಪ್ಪನವರನ್ನ ಬಂಧಿಸಿ ತನಿಖೆ ನಡೆಸಲು ಸರ್ಕಾರಕ್ಕೆ ಸೂಚನೆ ನೀಡಬೇಕೆಂದು ಒತ್ತಾಯಿಸಿದ್ದೇವೆ' ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್ ಹೆಳಿದ್ದಾರೆ. 

'ಸಚಿವ ಈಶ್ವರಪ್ಪನವರ ಪರವಾಗಿ ವಕಲಾತ್ತು ವಹಿಸುತ್ತಿರುವ ಸಿಎಂ ಬೊಮ್ಮಾಯಿಯವರು, ಹಾಗೂ ನಾ ಖಾನೇ ದುಂಗಾ, ನಾ ಖಾವೂಂಗಾ ಎಂದು ಘೋಷಣೆ ಮಾಡಿದ್ದ ಮೋದಿಯವರು ಮೌನವಹಿಸಿದ್ದಾರೆ. ಸಚಿವರ ಕಮಿಷನ್ ಪಡೆಯುತ್ತಿರುವುದರಲ್ಲಿ ಸಿಎಂ ಹಾಗೂ ಪಿಎಂಗೂ ಪಾಲುದಾರಿಕೆ ಇರಬೇಕು. ಇಲ್ಲದಿದ್ದರೇ ಈ ಕೂಡಲೇ ಸಚಿವ ಸಂಪುಟದಿಂದ ವಜಾ ಮಾಡಿ' ಎಂದು ಒತ್ತಾಯಿಸಿದರು. 

'ಸಂತೋಷ್ ಪಾಟೀಲ್ ಸೇರಿದಂತೆ ಗುತ್ತಿಗೆದಾರರ ಸಂಘ ರಾಜ್ಯದಲ್ಲಿ 40% ಕಮಿಷನ್ ಪಡೆಯುತ್ತಿದೆ ಎಂದು ಪ್ರಧಾನಿಗಳಿಗೂ ಪತ್ರ ಬರೆದಿದ್ದರೂ ಕಮಿಷನ್ ಬಗ್ಗೆ ರಾಜ್ಯ ಸರ್ಕಾರ ಹಾಗೂ ಪ್ರಧಾನಿ ಮೌನವಹಿಸಿದ್ದಾರೆ. ಆರೋಪ ಬಂದ ಕೂಡಲೇ ಕ್ರಮವಹಿಸಿದ್ದರೆ ಅಮಾಯಕ ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಳ್ಳುತ್ತಿರಲಿಲ್ಲ. ಸರ್ಕಾರದ ನಿರ್ಲಕ್ಷ್ಯವೇ ಸಂತೋಷ್ ಆತ್ಮಹತ್ಯೆಗೆ ಕಾರಣ, ಇದೊಂದು ಪ್ರಾಯೋಜಿತ ಕೊಲೆ' ಎಂದು ಆಕ್ರೋಶ ವ್ಯಕ್ತಪಡಿಸಿದರು. 

'ಸಂತೋಷ್ ಪಾಟೀಲ್ ಪತ್ನಿ ಸೇರಿದಂತೆ ಇಡೀ ಕುಟುಂಬ ಸಚಿವ ಈಶ್ವರಪ್ಪನೇ ನೇರ ಕಾರಣ ಎಂದು ಆರೋಪಿಸಿದ್ದಾರೆ. ಸರ್ಕಾರಕ್ಕೆ ನೈತಿಕತೆ ಇದ್ರೆ ಈಶ್ವರಪ್ಪನವರನ್ನ ವಜಾ ಮಾಡಿ ಕೂಡಲೇ ಬಂಧಿಸಿಬೇಕು. ಬಿಜೆಪಿ ಸರ್ಕಾರದ ಕಮಿಷನ್ ದಂಧೆಯಿಂದ ರಾಜ್ಯದಲ್ಲಿ ಗುತ್ತಿಗೆದಾರರು ಕಿರುಕುಳ ಅನುಭವಿಸುವಂತಾಗಿದೆ' ಎಂದು ಹೇಳಿದರು. 

'ಈಶ್ಬರಪ್ಪನವರ ರಾಜಕೀಯ ಆರಂಭವೇ ಅಮಾಯಕ ಹೆಣಗಳ ಮೇಲೆ ರಾಜಕೀಯ ನಡೆಸಿದ್ದು. ಕಾಂಗ್ರೆಸ್ ಪಕ್ಷಕ್ಕೆ ಹೆಣದ ಮೇಲೆ ರಾಜಕೀಯ ಮಾಡಿದ ಇತಿಹಾಸವೇ ಇಲ್ಲ. ಈಶ್ವರಪ್ಪನವರನ್ನ ವಜಾ‌ಮಾಡಿ, ಬಂಧಿಸಿ ತನಿಖೆ ನಡೆಸದೇ ಇದ್ದರೇ ಕಾಂಗ್ರೆಸ್ ಪಕ್ಷ ರಾಜ್ಯಾದ್ಯಂತ ಹೋರಾಟ ನಡೆಸಲಿದೆ' ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News